ADVERTISEMENT

ಸೇನೆಗೆ ನೇಮಕಾತಿ ನಡೆಸುತ್ತಿಲ್ಲವೇಕೆ?: ಕೇಂದ್ರ ಸರ್ಕಾರಕ್ಕೆ ಸುರ್ಜೇವಾಲಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 8:08 IST
Last Updated 28 ಮೇ 2025, 8:08 IST
ರಣದೀಪ್‌ ಸಿಂಗ್‌ ಸುರ್ಜೇವಾಲಾ
ರಣದೀಪ್‌ ಸಿಂಗ್‌ ಸುರ್ಜೇವಾಲಾ    

ಬೆಂಗಳೂರು: ‘ಭಾರತೀಯ ಸೇನೆಯ ಮೂರೂ ಪಡೆಗಳಲ್ಲಿ 1.76 ಲಕ್ಷ ಹುದ್ದೆಗಳು ಖಾಲಿ ಉಳಿದಿವೆ. ಹಲವು ವರ್ಷಗಳಿಂದ ನೇಮಕಾತಿಯೇ ನಡೆದಿಲ್ಲ. ಇಂತಹ ಕೊರತೆಯ ಮಧ್ಯೆಯೂ ನಮ್ಮ ಸೇನೆಯು ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿತು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಹೇಳಿದರು.

ಸೈನಿಕರ ನಮಿಸುವ ಉದ್ದೇಶದಿಂದ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಜೈ ಹಿಂದ್‌ ಸಭಾ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಗಡಿಗಳಲ್ಲಿ ನಿಂತು ನಮ್ಮ ಸೈನಿಕರು ಹೋರಾಡುತ್ತಿರುವ ಕಾರಣದಿಂದಲೇ ನಾವು ನಮಗೆ ನೀಡಲಾಗಿರುವ ಸ್ವಾತಂತ್ರ್ಯವನ್ನು ಪೂರ್ಣಪ್ರಮಾಣದಲ್ಲಿ ಅನುಭವಿಸಲು ಸಾಧ್ಯವಾಗುತ್ತಿದೆ’ ಎಂದರು.

‘ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಸರ್ಕಾರ ಬಂದ ನಂತರದ ಹಲವು ವರ್ಷಗಳಿಂದ ಸೇನೆಯ ಮೂರೂ ಪಡೆಗಳಿಗೆ ನೇಮಕಾತಿ ನಡೆಸಿಯೇ ಇಲ್ಲ. ಸೇನೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ಎಂಬುದನ್ನು 2023ರಿಂದ ಅಧಿಕೃತವಾಗಿ ಹೇಳುವುದನ್ನು ನಿಲ್ಲಿಸಿದೆ. ದೇಶದ ರಕ್ಷಣೆಯಲ್ಲಿ ಇಷ್ಟು ಮಹತ್ವದ ಪಾತ್ರವಹಿಸುವ ಸೇನೆಗೆ ನೇಮಕಾತಿ ನಡೆಸದೇ ಇರುವುದು ಏಕೆ’ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ವಾಯುಪಡೆಯಲ್ಲಿ ಸದಾ 40ರಿಂದ 45 ಸ್ಕ್ವಾಡ್ರನ್‌ಗಳು ಯುದ್ಧಸನ್ನಧವಾಗಿರಬೇಕು ಎಂಬುದು ರಕ್ಷಣಾ ತಜ್ಞರ ಅಂದಾಜು. ಆದರೆ ಈಗ 25 ಸ್ಕ್ವಾಡ್ರನ್‌ಗಳು ಮಾತ್ರ ಸನ್ನಧವಾಗಿವೆ. ಅರ್ಧದಷ್ಟು ಸ್ಕ್ವಾಡ್ರನ್‌ಗಳು ಕಾರ್ಯಾಚರಣೆಯ ಸ್ಥಿತಿಯಲ್ಲಿ ಇಲ್ಲ. ಹೀಗಿದ್ದೂ ‘ಆಪರೇಷನ್‌ ಸಿಂಧೂರ’ದಲ್ಲಿ ವಾಯುಪಡೆಯು ಪಾಕಿಸ್ತಾನದ ವಿರುದ್ಧ ಮೇಲುಗೈ ಸಾಧಿಸಿತು. ಇದನ್ನು ಸಾಧ್ಯವಾಗಿಸಿದ ನಮ್ಮ ಸೈನಿಕರಿಗೆ ನಮಿಸಲೆಂದೇ ದೇಶದಾದ್ಯಂತ ‘ಜೈ ಹಿಂದ್‌’ ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ’ ಎಂದರು.

‘ಪಾಕಿಸ್ತಾನ ಮತ್ತು ಚೀನಾ ಗಡಿಯ ಗುಡ್ಡಗಾಡು ಪ್ರದೇಶದಲ್ಲಿ ಹೋರಾಡಲೆಂದೇ ‘ಮೌಂಟೇನ್‌ ಸ್ಟ್ರೈಕ್‌ ಕಾಪ್ಸ್‌’ ಎಂಬ ಪಡೆಯನ್ನು ರಚಿಸಲು ಮನಮೋಹನ ಸಿಂಗ್ ನೇತೃತ್ವದ ಯುಪಿಎ–2 ಸರ್ಕಾರ ಒಪ್ಪಿಗೆ ನೀಡಿತ್ತು. ಮೋದಿ ಅವರ ಸರ್ಕಾರ 11 ವರ್ಷಗಳಿಂದ ಆಡಳಿತ ನಡೆಸುತ್ತಿದ್ದರೂ ಈ ಪಡೆಯನ್ನು ರಚಿಸಲಿಲ್ಲ. ‘ಒಂದು ಶ್ರೇಣಿ, ಒಂದು ಪಿಂಚಣಿ’ಗೆ ಯುಪಿಎ–2 ಸರ್ಕಾರವೇ ಒಪ್ಪಿಗೆ ನೀಡಿತ್ತು. ಅದನ್ನೂ ಮೋದಿ ಅವರ ಸರ್ಕಾರವು ಅನುಷ್ಠಾನಕ್ಕೆ ತಂದಿಲ್ಲ. ದೇಶಕ್ಕಾಗಿ ಹೋರಾಡಿದ, ತ್ಯಾಗ ಮಾಡಿದ ಸೈನಿಕರಿಗೆ ನಮ್ಮ ನಮನಗಳು’ ಎಂದರು.

‘ಕದನ ವಿರಾಮ ಘೋಷಿಸಿದ್ದೇಕೆ?’

‘ಪಾಕಿಸ್ತಾನದ ವಿರುದ್ಧ ನಮ್ಮ ಪಡೆಗಳು ಮೇಲುಗೈ ಸಾಧಿಸಿದ್ದವು. ಅವರ ರಕ್ಷಣಾ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದವು. ಅಲ್ಲಿನ ವಾಯುನೆಲೆಯನ್ನು ಧ್ವಂಸಗೊಳಿಸಿದ್ದವು. ಇಂತಹ ಮುನ್ನಡೆ ಸಾಧಿಸಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರವು ದಿಢೀರ್ ಎಂದು ಕದನ ವಿರಾಮ ಘೋಷಿಸಿತು. ಕದನ ವಿರಾಮದ ಅವಶ್ಯಕತೆ ಏನಿತ್ತು’ ಎಂದು ರಣದೀಪ್‌ ಸಿಂಗ್‌ ಸುರ್ಜೇವಾಲ ಪ್ರಶ್ನಿಸಿದರು.

‘ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಮೊದಲು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದರು. ಆನಂತರ ಪಾಕಿಸ್ತಾನ ಘೋಷಿಸಿತು. ಅದಾದ ನಂತರ ನಮ್ಮ ವಿದೇಶಾಂಗ ಕಾರ್ಯದರ್ಶಿ ಈ ಬಗ್ಗೆ ಮಾಹಿತಿ ನೀಡಿದರು. ನಮ್ಮ ದೇಶದ ಪರವಾಗಿ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಲು ಅಥವಾ ಅದನ್ನು ಘೋಷಿಸಲು ಅಮೆರಿಕಕ್ಕೆ ಅಧಿಕಾರ ಕೊಟ್ಟವರು ಯಾರು’ ಎಂದು ಪ್ರಶ್ನಿಸಿದರು.

ಕೆ.ಸಿ.ವೇಣುಗೋಪಾಲ್‌, ‘ಕದನ ವಿರಾಮ ಘೋಷಿಸುವ ಮೂಲಕ ನಮ್ಮ ಸೈನಿಕರ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಸರ್ಕಾರ ಮಾಡಿತು. ಕದನ ವಿರಾಮ ಘೋಷಣೆಯ ನಂತರ, ಅದರ ಷರತ್ತುಗಳ ಬಗ್ಗೆ ಮಾತುಕತೆ ನಡೆಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದರು. ಸಭೆ ನಡೆಯಿತೇ ಅಥವಾ ಯಾವ ಷರತ್ತುಗಳನ್ನು ಹೇರಲಾಯಿತು ಎಂಬುದರ ಬಗ್ಗೆ ಸರ್ಕಾರ ಮಾಹಿತಿ ಏಕೆ ನೀಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.