
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ನಗದು ರಹಿತ ಚಿಕಿತ್ಸೆ ಒದಗಿಸುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ (ಕೆಎಎಸ್‌ಎಸ್) ಅ.1 ರಿಂದ ಜಾರಿಯಾಗಿದ್ದು, ಇದುವರೆಗೆ 4.83 ಲಕ್ಷ ನೌಕರರು ಸಮ್ಮತಿ ಸೂಚಿಸಿದ್ದಾರೆ.
ಹಲವು ವರ್ಷಗಳ ಹಿಂದೆಯೇ ಯೋಜನೆ ರೂಪಿಸಲಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಅನುಷ್ಠಾನ ವಿಳಂಬವಾಗಿತ್ತು. ಅಂತಿಮವಾಗಿ ಅ.1 ರಿಂದ ಅನುಷ್ಠಾನಗೊಳಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿತ್ತು. ಸುವರ್ಣ ಕರ್ನಾಟಕ ಆರೋಗ್ಯ ಸುರಕ್ಷಾ ಟ್ರಸ್ಟ್ (ಎಸ್‌ಎಎಸ್‌ಟಿ) ಯೋಜನೆಯ ಅನುಷ್ಠಾನದ ಸಂಸ್ಥೆಯಾಗಿ ಹೊಣೆ ನಿರ್ವಹಿಸುತ್ತಿದೆ.
ಎಲ್ಲ ವರ್ಗದ ನೌಕರರು ಪ್ರತಿ ತಿಂಗಳು ತಮ್ಮ ಪಾಲಿನ ಕಂತು ಪಾವತಿಸಬೇಕಿದೆ. ಪತಿ–ಪತ್ನಿ ಇಬ್ಬರೂ ಸರ್ಕಾರಿ ನೌಕರರಾಗಿದ್ದಲ್ಲಿ ಯಾರಾದರೂ ಒಬ್ಬರ ವೇತನದಿಂದ ಮಾತ್ರ ಒಂದು ಕಂತು ಪಾವತಿಸಬಹುದು. ಎಚ್‌ಆರ್‌ಎಂಎಸ್ ವ್ಯಾಪ್ತಿಯಲ್ಲಿ ಇರದ ಇತರೆ ಸರ್ಕಾರಿ ಸಂಸ್ಥೆಗಳ ನೌಕರರ ಕಂತಿನ ಮೊತ್ತವನ್ನು ಆಯಾ ಸಂಸ್ಥೆಗಳು ಹಿಡಿದುಕೊಂಡು ಟ್ರಸ್ಟ್ ಖಾತೆಗೆ ಜಮೆ ಮಾಡಬೇಕು. ಯೋಜನೆ ವ್ಯಾಪ್ತಿಗೆ ಒಳಪಡುವ ಎಲ್ಲ ನೌಕರರ ಕಂತನ್ನು ಅಕ್ಟೋಬರ್ ತಿಂಗಳ ವೇತನದಿಂದಲೇ ಕಡಿತ ಮಾಡಲಾಗುತ್ತದೆ. ನಂತರ ಒಟ್ಟು ಮೊತ್ತವನ್ನು ಖಜಾನೆ–2 ಮೂಲಕ ಟ್ರಸ್ಟ್ ಖಾತೆಗೆ ಜಮೆ ಮಾಡಲಾಗುತ್ತದೆ.
ಆರಂಭಿಕ ತೊಡಕು, ಮರುಪಾವತಿ ಸೌಲಭ್ಯ ವಿಸ್ತರಣೆ: ಸರ್ಕಾರಿ ನೌಕರರು ಯಾವುದೇ ಸಾರ್ವಜನಿಕ ಆಸ್ಪತ್ರೆಗಳು, ಬೋಧನಾ ಆಸ್ಪತ್ರೆಗಳು, ಸ್ಥಳೀಯ ಸಂಸ್ಥೆಗಳ ಆಸ್ಪತ್ರೆಗಳು ಹಾಗೂ ಯೋಜನೆಗೆ ನೋಂದಾಯಿಸಿಕೊಂಡ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದು. ಸರ್ಕಾರಿ ನೌಕರರ ಹೆಸರು ಎಚ್‌ಆರ್‌ಎಂಎಸ್‌ನಲ್ಲೇ ದಾಖಲಾಗಿರುತ್ತದೆ. ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದರೆ ನಗದುರಹಿತ ಚಿಕಿತ್ಸೆಗೆ ಸಮಸ್ಯೆಯಾಗದು. ಜ್ಯೋತಿ ಸಂಜೀವಿನಿ ಯೋಜನೆಯಲ್ಲಿ ಪುರುಷ ನೌಕರರ ತಂದೆ–ತಾಯಿಗೆ ಮಾತ್ರ ಸಿಗುತ್ತಿದ್ದ ಆರೋಗ್ಯ ಸೌಲಭ್ಯವನ್ನು ಈ ಬಾರಿ ಮಹಿಳಾ ನೌಕರರ ತಂದೆ– ತಾಯಿಗೂ ವಿಸ್ತರಿಸಲಾಗಿದೆ. ಈ ಎಲ್ಲ ಅವಲಂಬಿತರ ಹೆಸರು ಸೇರ್ಪಡೆ ಕಾರ್ಯವನ್ನು ಹಲವು ನೌಕರರು ಪೂರ್ಣಗೊಳಿಸಿಲ್ಲ. ಇದರಿಂದ ಅವಲಂಬಿತರನ್ನು ಆಸ್ಪತ್ರೆಗೆ ದಾಖಲಿಸಿದಾಗ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ತಾಂತ್ರಿಕ ಕಾರಣಗಳಿಂದಾಗಿ ನಗದು ಚಿಕಿತ್ಸಾ ಸೌಲಭ್ಯ ಆರಂಭವಾಗಿದ್ದರೂ, ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನೂ ಸರ್ಕಾರ 6 ತಿಂಗಳವರೆಗೆ ವಿಸ್ತರಿಸಿದೆ. ಮುಂಗಡ ಪಾವತಿಸಿ, ಚಿಕಿತ್ಸೆ ಪಡೆದ ನೌಕರರು ತಾವು ಮಾಡಿದ ವೆಚ್ಚದ ಮೊತ್ತವನ್ನು ಮರಳಿ ಪಡೆಯಬಹುದು.
‘ಯೋಜನೆ ವ್ಯಾಪ್ತಿಗೆ ಇನ್ನಷ್ಟು ಆಸ್ಪತ್ರೆಗಳನ್ನು ಸೇರ್ಪಡೆ ಮಾಡುವ ಕೆಲಸ ನಡೆದಿದೆ. ಚಿಕಿತ್ಸಾ ವೆಚ್ಚಗಳ ದರ ಪರಿಷ್ಕರಣೆಗೆ ರಾಜ್ಯ ಸರ್ಕಾರ ಸಮ್ಮತಿ ನೀಡುವ ಭರವಸೆ ಇದೆ. ಅವಲಂಬಿತ ಹೆಸರು ಸೇರ್ಪಡೆ ಕಾರ್ಯವೂ ಪ್ರಗತಿಯಲ್ಲಿದೆ. ಯೋಜನೆಯಿಂದ ನೌಕರರ ಕುಟುಂಬಗಳಿಗೆ ಹೆಚ್ಚಿನ ಪ್ರಯೋಜನವಾಗಲಿದೆ’ ಎನ್ನುತ್ತಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ.
ಯೋಜನೆ ವ್ಯಾಪ್ತಿಗೆ ಒಳಪಡಿಸಲು ಇಚ್ಛಿಸದವರು ಅ.18ರ ಒಳಗೆ ತಮ್ಮ ಮೇಲಧಿಕಾರಿಗಳ ಮೂಲಕ ಲಿಖಿತ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದುವರೆಗೆ 803 ನೌಕರರು ‘ಒಪ್ಪಿಗೆ ಇಲ್ಲ’ ಎಂದು ನಮೂದಿಸಿದ್ದಾರೆ. ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಕಾರ್ಯದಲ್ಲಿ ಸುಮಾರು ಒಂದು ಲಕ್ಷ ಶಿಕ್ಷಕರು ಭಾಗವಹಿಸಿದ್ದರು. ಹಾಗಾಗಿ ಯೋಜನೆ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ. 30 ದಿನಗಳ ಕಾಲಕಾವಕಾಶ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಯೋಜನೆಗೆ ನೌಕರರ ಅವಲಂಬಿತರ ಸೇರ್ಪಡೆ ಕಾರ್ಯ ಪ್ರಗತಿಯಲ್ಲಿದೆ. ಕೇಂದ್ರ ಆರೋಗ್ಯ ಯೋಜನೆ ಪರಿಷ್ಕೃತ ಚಿಕಿತ್ಸಾ ವೆಚ್ಚ ಪ್ರಕಟವಾಗಿದ್ದು ರಾಜ್ಯವೂ ಅದನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದ್ದೇವೆ.–ಸಿ.ಎಸ್.ಷಡಾಕ್ಷರಿ, ಅಧ್ಯಕ್ಷ ರಾಜ್ಯ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.