ADVERTISEMENT

17 ಮಂದಿಯಲ್ಲಿ ಸೋಂಕು ಪತ್ತೆ ಮಾಡಲು ನೆರವಾದ ಅರೋಗ್ಯ ಸೇತು ಆ್ಯಪ್‌

​ಪ್ರಜಾವಾಣಿ ವಾರ್ತೆ
Published 21 ಮೇ 2020, 16:27 IST
Last Updated 21 ಮೇ 2020, 16:27 IST
ಆರೋಗ್ಯ ಸೇತು ಆ್ಯಪ್‌ ಪ್ರದರ್ಶಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌
ಆರೋಗ್ಯ ಸೇತು ಆ್ಯಪ್‌ ಪ್ರದರ್ಶಿಸುತ್ತಿರುವ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌    

ಬೆಂಗಳೂರು: ರಾಜ್ಯದಲ್ಲಿ 63 ಲಕ್ಷ ಮಂದಿ ‘ಆರೋಗ್ಯ ಸೇತು‌’ ಮೊಬೈಲ್‌ ಆ್ಯಪ್‌ ಬಳಕೆ ಮಾಡುತ್ತಿದ್ದು, 2 ಸಾವಿರಕ್ಕೂ ಅಧಿಕ ಮಂದಿಗೆ ಕೋವಿಡ್ ಪರೀಕ್ಷೆಯ ಅಲರ್ಟ್ ಬಂದಿದೆ. 17 ಮಂದಿಯಲ್ಲಿ ಸೋಂಕು ಪತ್ತೆ ಮಾಡುವಲ್ಲಿ ಈ ಆ್ಯಪ್‌ ನೆರವಾಗಿದೆ.

ಕೊರೊನಾ ಸೋಂಕಿತರು ಹಾಗೂ ಸೋಂಕು ಶಂಕಿತರನ್ನು ಪತ್ತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಆ್ಯಪ್‌ಗೆ ರಾಜ್ಯದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಆ್ಯ‍ಪ್‌ ಡೌನ್‌ ಲೋಡ್‌ ಮಾಡಿಕೊಂಡವರಲ್ಲಿ 2,225 ಮಂದಿಗೆ ರೆಡ್‌ ಅಲರ್ಟ್‌ ಬಂದಿದ್ದು, ಪರೀಕ್ಷೆಗೆ ಸೂಚಿಸಲಾಗಿದೆ. ಅದರಲ್ಲಿ 233 ಮಂದಿ ಮಾತ್ರ ಪರೀಕ್ಷೆ ಮಾಡಿಸಿಕೊಂಡಿದ್ದು, ಕೆಲವರಲ್ಲಿ ಸೋಂಕು ದೃಢಪಟ್ಟಿದೆ. ಹೀಗಾಗಿ ಉಳಿದವರನ್ನು ಪತ್ತೆ ಮಾಡಿ, ಪರೀಕ್ಷೆಗೆ ಒಳಪಡಿಸುವ ಪ್ರಕ್ರಿಯೆಯನ್ನು ಅಧಿಕಾರಿಗಳು ಪ್ರಾರಂಭಿಸಿದ್ದಾರೆ.

‘ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ’ಆರೋಗ್ಯ ಸೇತು’ ಆ್ಯಪ್ ಸಹಕಾರಿಯಾಗಿದೆ. ಈ ಆ್ಯಪ್‌ ಅನ್ನು ಇನ್ನಷ್ಟು ಮಂದಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ಆ್ಯಪ್ ಮೂಲಕ ಪರೀಕ್ಷೆಗೆ ಒಳಪಟ್ಟವರಲ್ಲಿ ರಾಜ್ಯದ ಶೇ 7.5 ರಷ್ಟು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪ್ರಮಾಣ ರಾಷ್ಟ್ರೀಯ ಮಟ್ಟದಲ್ಲಿ ಶೇ 30 ರಷ್ಟಿದೆ. ಪ್ರತಿಯೊಬ್ಬ ನಾಗರಿಕನಿಗೂ ಈ ಆ್ಯಪ್ ಸುರಕ್ಷಾ ಕವಚವಾಗಿದೆ. ಸರ್ಕಾರಿ ಸಿಬ್ಬಂದಿ ಇದನ್ನು ಕಡ್ಡಾಯವಾಗಿ ಡೌನ್ ಲೋಡ್ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಕಚೇರಿಗೆ ಬರುವ ಹಾಗಿಲ್ಲ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಕೊರೊನಾದ ವಿರುದ್ಧ ಹೋರಾಡಲು ‘ಆರೋಗ್ಯ ಸೇತು’ ಪ್ರಬಲ ಅಸ್ತ್ರವಾಗಿದ್ದು, ದೇಶದಲ್ಲಿ 10 ಕೋಟಿಗೂ ಅಧಿಕ ಜನರು ಇದನ್ನು ಬಳಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯಂತಹ ಅತ್ಯಾಧುನಿಕ ತಂತ್ರಜ್ಞಾನವನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಇದರಿಂದಾಗಿ ಕಾಲಕಾಲಕ್ಕೆ ಜನರಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ಸಿಗಲಿದೆ. ಬಳಕೆದಾರರ ಸುರಕ್ಷತಾ ದೃಷ್ಟಿಯಿಂದ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವ ಮಾಹಿತಿಯನ್ನೂ ನೀಡಲಿದೆ. ಸೋಂಕಿತರು ಹತ್ತಿರದಲ್ಲಿದ್ದರೆ ಬಳಕೆದಾರರನ್ನು ಈ ಆ್ಯಪ್ ಎಚ್ಚರಿಸುತ್ತದೆ. ಸೋಂಕಿಗೆ ಸಂಬಂಧಿಸಿದ ಎಲ್ಲ ಸಂದೇಹ, ಗೊಂದಲಗಳಿಗೂ ಆ್ಯಪ್‌ ಮೂಲಕ ಉತ್ತರ ಪಡೆದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.