ಕಣ್ಣು ತಪಾಸಣೆ
(ಸಾಂಕೇತಿಕ ಚಿತ್ರ)
ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ, ಕಣ್ಣಿನ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕಗಳನ್ನು ವಿತರಿಸುವ ‘ಆಶಾ ಕಿರಣ’ ಯೋಜನೆಯನ್ನು ₹13.30 ಕೋಟಿ ಅನುದಾನದಲ್ಲಿ ಜಾರಿಗೊಳಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಈಗಾಗಲೇ ಚಿಕ್ಕಬಳ್ಳಾಪುರ, ಕಲಬುರಗಿ, ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ರಾಯಚೂರು, ಉತ್ತರಕನ್ನಡ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಜಾರಿ ಆಗಿದೆ. ಉಳಿದ 22 ಜಿಲ್ಲೆಗಳಲ್ಲಿ ಯೋಜನೆ ಆರಂಭಿಸಲಾಗುವುದು ಎಂದರು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಹೊರಗುತ್ತಿಗೆ ಆಧಾರದ ಮೇಲೆ 2 ವರ್ಷಗಳ ಅವಧಿಗೆ ಆರೋಗ್ಯ ಮಿತ್ರರು ಮತ್ತು ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ₹53.18 ಕೋಟಿ ಅನುದಾನ ಒದಗಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ ಹೊಸ ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಹೇಳಿದರು.
ಅಲ್ಲದೇ, ಈಗಾಗಲೇ ಅಸ್ತಿತ್ವದಲ್ಲಿರುವ ಅಂಗ ಕಸಿ (ಜೀವ ಸಾರ್ಥಕತೆ) ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆಯ ಕಸಿಯನ್ನೂ ಸೇರ್ಪಡೆಗೊಳಿಸಿ ಯೋಜನೆಯನ್ನು ವಿಸ್ತರಿಸಲು ತೀರ್ಮಾನಿಸಲಾಗಿದೆ ಎಂದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಸಾಮರ್ಥ್ಯದ ನೂತನ ಆಸ್ಪತ್ರೆ ಕಟ್ಟಡದ ಎರಡನೇ ಹಂತದ ಕಾಮಗಾರಿಯ ₹78.10 ಕೋಟಿ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಪಾಟೀಲ ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಪಿಪಿಪಿ ಮಾದರಿಯಲ್ಲಿ ಒದಗಿಸಲಾಗುತ್ತಿರುವ ಸಿಟಿ ಸ್ಕ್ಯಾನ್, ಎಂಆರ್‌ಐ ಸ್ಕ್ಯಾನ್ ಸೇವೆಯನ್ನು ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಮತ್ತು ಉಳಿದವರಿಗೆ ಶೇ 70ರಷ್ಟು ಶುಲ್ಕ ಭರಿಸುವ ಪ್ರಸ್ತಾವನೆಗೆ ಒಪ್ಪಿಗೆ ನೀಡಲಾಗಿದೆ ಎಂದರು.
ಸಂಪುಟದ ಪ್ರಮುಖ ತೀರ್ಮಾನಗಳು
* ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಫಾರ್ಮ್‌ನಲ್ಲಿ ನೂತನವಾಗಿ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಒಪ್ಪಿಗೆ. ಯೋಜನಾ ವೆಚ್ಚ ₹285.89 ಕೋಟಿ.
* 5ನೇ ಹಣಕಾಸು ಆಯೋಗದ ಅವಧಿಯನ್ನು 2025ರ ಆಗಸ್ಟ್ 31 ರವರೆಗೆ ವಿಸ್ತರಿಸಲು ಒಪ್ಪಿಗೆ
* ಅಬಕಾರಿ ಇಲಾಖೆ ನೌಕರರ ವರ್ಗಾವಣೆಗೆ ಕೌನ್ಸೆಲಿಂಗ್ ಪದ್ಧತಿ ಜಾರಿ ತರಲು ಕರಡು ನಿಯಮಗಳನ್ನು ಹೊರಡಿಸಲು ಅನುಮೋದನೆ
* ಒಂದು ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಇರುವ ಹಾಗೂ ಹೆಚ್ಚು ಮರಣದ ಪ್ರಮಾಣ ಇರುವ ರಾಜ್ಯದ 10 ಮಹಾನಗರ ಪಾಲಿಕೆಗಳನ್ನು ಮತ್ತು ಆಯ್ದ 24 ನಗರಸಭೆಗಳಲ್ಲಿ ತಲಾ ಒಂದರಂತೆ 34 ಆಧುನಿಕ ವಿದ್ಯುತ್ ಅಥವಾ ಅನಿಲ ಚಿತಾಗಾರಗಳನ್ನು ನಿರ್ಮಿಸಲು ಒಪ್ಪಿಗೆ. ಪ್ರತಿ ಚಿತಾಗಾರಕ್ಕೆ ತಲಾ ₹4 ಕೋಟಿ ನೀಡಲಾಗುವುದು
* ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 10 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ. ಇದಕ್ಕಾಗಿ ಹಿಂದುಳಿದ ಇಲಾಖೆಯಿಂದ ₹211 ಕೋಟಿ ಅನುದಾನ.
*ಕ ರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕಾನೂನು ಇಲಾಖೆ ವ್ಯಾಪ್ತಿಯಲ್ಲಿ ಬರುವ 19 ಖಾಸಗಿ ಅನುದಾನಿತ ಕಾನೂನು ಕಾಲೇಜುಗಳ ಬೋಧಕ ಸಿಬ್ಬಂದಿಗೆ ಯುಜಿಸಿಯ 6ನೇ ವೇತನ ಹಾಗೂ ಪರಿಷ್ಕೃತ 7ನೇ ವೇತನ ಶ್ರೇಣಿಗಳ ಮೂಲ ವೇತನದ ವ್ಯತ್ಯಾಸ ಹಿಂಬಾಕಿ ₹2.61 ಕೋಟಿ ಪಾವತಿಸಲು ಒಪ್ಪಿಗೆ
* ಗ್ರಾಮ ಆಡಳಿತ ಅಧಿಕಾರಿಗಳಿಗೆ ಮತ್ತು ಕಂದಾಯ ನಿರೀಕ್ಷಕರಿಗೆ ಕ್ರೋಮ್ ಬುಕ್ ಅಥವಾ ಲ್ಯಾಪ್‌ಟಾಪ್ ಒದಗಿಸಲು ಇಲಾಖೆಯ ನಿರ್ಣಯಕ್ಕೆ ಅವಕಾಶ ನೀಡಲು ಒಪ್ಪಿಗೆ
ನರೇಗಾ ನೌಕರರಿಗೆ ವೈದ್ಯಕೀಯ ವಿಮೆ
ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ 3,352 ನೌಕರರಿಗೆ ವೈದ್ಯಕೀಯ ವಿಮಾ ಸೌಲಭ್ಯವನ್ನು ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇದಕ್ಕಾಗಿ ವಾರ್ಷಿಕ ₹8.34 ಕೋಟಿ ವೆಚ್ಚವಾಗಲಿದೆ. ಮುಂದಿನ ಮೂರು ವರ್ಷಗಳಲ್ಲಿ ಈ ಯೋಜನೆ ಜಾರಿಗೊಳಿಸಲು ₹25.14 ಕೋಟಿ ವೆಚ್ಚವಾಗಲಿದೆ.
ಈ ಯೋಜನೆಯಡಿ ರಾಜ್ಯ, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದ ಅನುಷ್ಠಾನ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ, ಇಎಸ್‌ಐ ಸೌಲಭ್ಯ ಹೊಂದಿರುವ ಸಿಬ್ಬಂದಿ ಹೊರತುಪಡಿಸಿ ಉಳಿದ ಸಿಬ್ಬಂದಿಗೆ ಸಾಮೂಹಿಕ ವೈದ್ಯಕೀಯ ವಿಮೆ ಸೌಲಭ್ಯ ಒದಗಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.