ADVERTISEMENT

ಅಶ್ವತ್ಥನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ: ಡಿ.ಕೆ.ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 6 ಮೇ 2022, 5:51 IST
Last Updated 6 ಮೇ 2022, 5:51 IST
ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್   

ಬೆಂಗಳೂರು: ‘ಪಿಎಸ್ಐ ನೇಮಕಾತಿ ಹಗರಣದ ಆರೋಪಿ ಅಭ್ಯರ್ಥಿ ರಕ್ಷಣೆಗೆ ಮುಂದಾಗಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಭ್ರಷ್ಟಾಚಾರಕ್ಕೇ ವಿಶ್ವಮಾನವ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕೆಇಎ ದೂರು ನೀಡಿದೆ. ಆ ಪ್ರಕರಣದಲ್ಲಿ ಹೆಸರಿರುವ ಕುಲಸಚಿವರು ಯಾರ ಮನೆಗೆ ಎಷ್ಟು ಬಾರಿ ಹೋಗಿದ್ದಾರೆ, ಅವರ ಮತ್ತು ಸಚಿವರ ಒಡನಾಟ ಏನು, ಅವರ ನೇತೃತ್ವದ ಸಂಸ್ಥೆಗಳಲ್ಲಿ ಯಾವ ರೀತಿ ಅಕ್ರಮ ನಡೆಯುತ್ತಿದೆ, ಅಲ್ಲೆಲ್ಲ ವಿಶ್ವದ ನಂಟಿದೆ ಎಂದು ಅವರೇ ಹೇಳುವುದಾದರೆ ಎಲ್ಲ ಭ್ರಷ್ಟಾಚಾರಗಳಿಗೆ ವಿಶ್ವಮಾನವ ಅವರೇ ಅಲ್ಲವೇ’ ಎಂದು ಪ್ರಶ್ನಿಸಿದರು.

‘ನಮ್ಮ ಪಕ್ಷದ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ನೊಟೀಸ್ ಜಾರಿ ಮಾಡಿರುವವರು ಮೊದಲು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನೊಟೀಸ್ ನೀಡಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದ ಶಿವಕುಮಾರ್, ‘ತನಿಖಾಧಿಕಾರಿಗಳು ಯಾರಿಗೆಲ್ಲ ನೊಟೀಸ್ ನೀಡಿದ್ದಾರೆ? ಯಾರು ಏನು ಉತ್ತರ ಕೊಟ್ಟಿದ್ದಾರೆ? ಯಾರನ್ನು ಬಿಟ್ಟು ಕಳುಹಿಸಲಾಗಿದೆ? ಮುಂತಾದ ಮಾಹಿತಿಗಳನ್ನು ಬಹಿರಂಗಪಡಿಸಬೇಕು’ ಎಂದರು. ‘ಪಕ್ಷದ ದಲಿತ ನಾಯಕರಾಗಿರುವ ಪ್ರಿಯಾಂಕ್ ಖರ್ಗೆ ಮೇಲೆ ದಬ್ಬಾಳಿಕೆ ನಡೆಸಿ, ನಮ್ಮ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿದ್ದೀರಾ’ ಎಂದರು. ‘ಅವರನ್ನು ಯಾವಾಗ ಸಿಐಡಿ ವಿಚಾರಣೆಗೆ ಕಳುಹಿಸಬೇಕು ಎಂದು ನಮಗೆ ಗೊತ್ತಿದೆ. ಪಕ್ಷದ ವೇದಿಕೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.