
ಪ್ರಜಾವಾಣಿ ವಾರ್ತೆ
ನವದೆಹಲಿ: ಕರ್ನಾಟಕದಲ್ಲಿ 7,240 ಕಿ.ಮೀ. ಉದ್ದದ ರೈಲ್ವೆ ಮಾರ್ಗಗಳ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲು ಅನುಮೋದನೆ ನೀಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಬುಧವಾರ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ‘25 ಹೊಸ ಮಾರ್ಗಗಳ ಹಾಗೂ 40 ಜೋಡಿ ಹಳಿ ಮಾರ್ಗಗಳ ಮಾರ್ಗ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ‘ ಎಂದರು.
‘ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿದೆ. ಹೀಗಾಗಿ, ಕೆಲವೊಂದು ಯೋಜನೆಗಳ ಕಾಮಗಾರಿಗಳು ಸ್ಥಗಿತಗೊಂಡಿವೆ. ರೈಲ್ವೆ ಯೋಜನೆಗಳಿಗೆ ಅಗತ್ಯವಿರುವ ಭೂಮಿಗಳ ಪೈಕಿ ಶೇ 63ರಷ್ಟು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಇನ್ನೂ ಶೇ 37 ಭೂಮಿಯ ಸ್ವಾಧೀನ ಆಗಬೇಕಿದೆ. ರಾಜ್ಯ ಸರ್ಕಾರ ಸಹಕಾರ ನೀಡಿದರೆ ಈ ಯೋಜನೆಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬಹುದು‘ ಎಂದರು.