ADVERTISEMENT

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಶ್ನೆ ಸೋರಿಕೆ: ಅಭ್ಯರ್ಥಿಗಳಿಗೆ ಸಿಸಿಬಿ ನೋಟಿಸ್

ಅಂಕ ಪಟ್ಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 19:30 IST
Last Updated 9 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ ನಡೆಸಿದ್ದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಂಕಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ‍ಪ್ರಶ್ನೆಗಳ ಸೋರಿಕೆ ಪ್ರಕರಣದಲ್ಲಿ ಕೆಲವು ಅಭ್ಯರ್ಥಿಗಳಿಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದಾರೆ.

ರಾಜ್ಯದಾದ್ಯಂತ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಒಎಂಆರ್‌ ಪ್ರತಿಗಳ ಮೌಲ್ಯಮಾಪನ ಮುಕ್ತಾಯಗೊಳಿಸಿರುವ ಕೆಇಎ, ಸ್ಪರ್ಧಾತ್ಮಕ ಪರೀಕ್ಷೆಯ ವಿಷಯವಾರು ಅಂಕಪಟ್ಟಿಯನ್ನು ಜಾಲತಾಣದಲ್ಲಿ ಪ್ರಕಟಿಸಿದೆ.

ಭೂಗೋಳ ವಿಜ್ಞಾನ ವಿಷಯದ ಪ್ರಶ್ನೆಗಳ ಸೋರಿಕೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ಅನುಮಾನಾಸ್ಪದ ಅಭ್ಯರ್ಥಿಗಳ ಬಗ್ಗೆಯೂ ಮಾಹಿತಿ ಕಲೆಹಾಕುತ್ತಿದ್ದಾರೆ.

ADVERTISEMENT

ಒಎಂಆರ್ ಪ್ರತಿ ನೀಡದಿದ್ದಕ್ಕೆ ಮತ್ತೊಮ್ಮೆ ಪತ್ರ: 'ಮಾರ್ಚ್‌ 14ರಂದು ನಡೆದಿದ್ದ ಭೂಗೋಳ ವಿಜ್ಞಾನ ವಿಷಯ ಪರೀಕ್ಷೆಯ 18 ಪ್ರಶ್ನೆಗಳು, ಪರೀಕ್ಷೆಗೂ ಮುನ್ನವೇ ಸೋರಿಕೆ ಆಗಿದ್ದವು. ಈ ಬಗ್ಗೆ ಮಲ್ಲೇಶ್ವರ ಠಾಣೆಗೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ದೂರು ನೀಡಿದ್ದರು.

‘ಪ್ರಶ್ನೆಗಳನ್ನು ಸೋರಿಕೆ ಮಾಡಿದ್ದ ಆರೋಪದಡಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕುಲಸಚಿವರಾಗಿದ್ದ (ಮೌಲ್ಯಮಾಪನ) ಪ್ರೊ. ಎಚ್‌. ನಾಗರಾಜ್ ಹಾಗೂ ಅವರ ಪಿಎಚ್‌ಡಿ ವಿದ್ಯಾರ್ಥಿ ಆರ್. ಸೌಮ್ಯಾ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಅಕ್ರಮ ಎಸಗಿದ್ದ ಅನುಮಾನದಡಿ ಇಬ್ಬರು ಅಭ್ಯರ್ಥಿಗಳ ಒಎಂಆರ್ ಪ್ರತಿ ನೀಡುವಂತೆ ಕೆಇಎಗೆ ಪತ್ರ ಬರೆಯಲಾಗಿತ್ತು. ಮೌಲ್ಯಮಾಪನ ನೆಪ ಹೇಳಿದ್ದ ಕೆಇಎ, ಇದುವರೆಗೂ ಒಎಂಆರ್‌ ನೀಡಿಲ್ಲ’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಭ್ಯವಿರುವ ಮಾಹಿತಿ ಆಧರಿಸಿ 10ಕ್ಕೂ ಹೆಚ್ಚು ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಅವರೆಲ್ಲರಿಗೂ ನೋಟಿಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಿಸಿಬಿಯ ಎಸಿಬಿ ನೇತೃತ್ವದ ತಂಡ, ಅಭ್ಯರ್ಥಿಗಳ ವಿಚಾರಣೆ ನಡೆಸಲಿದೆ. ಅವರ ಹೇಳಿಕೆ ಪರಿಶೀಲಿಸಿದ ಬಳಿಕವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

‘ಅಂಕಪಟ್ಟಿ ಬಿಡುಗಡೆಯಾಗಿರುವುದರಿಂದ, ಅಭ್ಯರ್ಥಿಗಳ ಒಎಂಆರ್ ಪ್ರತಿ ನೀಡುವಂತೆ ಕೆಇಎಗೆ ಮತ್ತೊಮ್ಮೆ ಪತ್ರ ಬರೆಯಲಾಗುವುದು. ಅದಕ್ಕೆ ಪ್ರತಿಕ್ರಿಯೆ ನೀಡದಿದ್ದರೆ,ಕಾನೂನು ಪ್ರಕಾರ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.