ADVERTISEMENT

ಪ್ರಜಾವಾಣಿ ಫಲಶ್ರುತಿ | ‘ಆಸ್ಟ್ರೋ ಫಾರ್ಮ್‌’ ರೂವಾರಿಗೆ ಸಚಿವ ಬೋಸರಾಜು ನೆರವಿನ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 13:22 IST
Last Updated 12 ಜುಲೈ 2023, 13:22 IST
   

ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಹಳೇ ತರ್ಲಘಟ್ಟ ಸಮೀಪದ ‘ನವಿಲಗದ್ದೆ’ ಗುಡ್ಡದ ತಮ್ಮ ಜಮೀನಿನಲ್ಲಿ ‘ಆಸ್ಟ್ರೋ ಫಾರ್ಮ್‌’ ಖಗೋಳ ಪ್ರವಾಸೋದ್ಯಮ ಕೇಂದ್ರ ಸ್ಥಾಪಿಸಿರುವ ಕುನ್ನೂರು ಗ್ರಾಮದ ನಿರಂಜನ ಖಾನಗೌಡ್ರ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್‌.ಎಸ್‌. ಬೋಸರಾಜು ಅವರಿಂದ ನೆರವಿನ ಭರವಸೆ ಸಿಕ್ಕಿದೆ. 

‘ಪ್ರಜಾವಾಣಿ’ ಮುಖಪುಟದಲ್ಲಿ ಜುಲೈ 12ರಂದು ಪ್ರಕಟಗೊಂಡ ‘ನವಿಲಗದ್ದೆಯಲ್ಲಿ ಧರೆಗಿಳಿವ ತಾರೆಗಳ ತೋಟ’ ಶೀರ್ಷಿಕೆಯ ವಿಶೇಷ ವರದಿಗೆ ಸಚಿವರು ಸ್ಪಂದಿಸಿದ್ದಾರೆ. ತಮ್ಮ ಟ್ವಿಟರ್‌ ಖಾತೆಯಲ್ಲಿ, ‘ಖಗೋಳ ಪ್ರವಾಸೋದ್ಯಮ ಕೇಂದ್ರ ತೆರೆದಿರುವುದು ಸಂತಸದ ಸಂಗತಿಯಾಗಿದ್ದು, ನಿಮ್ಮ ಈ ಐತಿಹಾಸಿಕ ಸಾಧನೆ ಇತರರಿಗೂ ಮಾದರಿಯಾಗಲಿ ಹಾಗೂ ಭವಿಷ್ಯದಲ್ಲಿ ನೀವು ಮತ್ತಷ್ಟು ಸಾಧನೆ ಮಾಡಿ. ನಿಮ್ಮಂತಹ ಸಾಮಾಜಿಕ ಕಳಕಳಿ ಇರುವ ಯುವಕರಿಗೆ ಮತ್ತು ನಿಮ್ಮ ಮುಂದಿನ ಆವಿಷ್ಕಾರಕ್ಕೆ ನಮ್ಮ ಸಂಪೂರ್ಣ ಬೆಂಬಲ ಇರುತ್ತದೆ’ ಎಂದು ತಿಳಿಸಿದ್ದಾರೆ. 

‘ಬುಧವಾರ ಸಚಿವರ ಕಚೇರಿಯ ಸಿಬ್ಬಂದಿ ಕರೆ ಮಾಡಿ, ಇಲಾಖೆಯಿಂದ ನಿಮಗೆ ಅಗತ್ಯವಾದ ನೆರವನ್ನು ನೀಡುತ್ತೇವೆ ಎಂದು ಭರವಸೆ ನೀಡಿರುವುದು ಖುಷಿ ತಂದಿದೆ. ನಾನು ಯಾವುದನ್ನೂ ಬೇಡಿಕೆ ಇಟ್ಟಿಲ್ಲ. ಇಲಾಖೆ ನೆರವು ನೀಡಿದರೆ ‘ಆಸ್ಟ್ರೋ ಫಾರ್ಮ್‌‘ ಅನ್ನು ಉನ್ನತೀಕರಿಸುವ ಮೂಲಕ ರಾಜ್ಯದಲ್ಲಿ ಖಗೋಳ ಪ್ರವಾಸೋದ್ಯಮ ಬೆಳವಣಿಗೆಗೆ ಶ್ರಮಿಸುತ್ತೇನೆ’ ಎಂದು ನಿರಂಜನಗೌಡ ಖಾನಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.