ADVERTISEMENT

ಪ್ರಜಾವಾಣಿ ಸಂದರ್ಶನ: ‘ದುಡಿಯೋದಕ್ಕೆ ಅವರು ಮತ್ತೆ ಬಂದೇ ಬರುತ್ತಾರೆ’

ಪ್ರಜಾವಾಣಿ ವಿಶೇಷ
Published 25 ಮೇ 2020, 19:30 IST
Last Updated 25 ಮೇ 2020, 19:30 IST
ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘದ (ಕ್ರೆಡಾಯ್‌) ರಾಜ್ಯ ಘಟಕದ ಅಧ್ಯಕ್ಷ ಆಸ್ಟಿನ್‌ ರೋಚ್
ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘದ (ಕ್ರೆಡಾಯ್‌) ರಾಜ್ಯ ಘಟಕದ ಅಧ್ಯಕ್ಷ ಆಸ್ಟಿನ್‌ ರೋಚ್   
""

ರಾಜ್ಯದಲ್ಲಿ 10 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ಪೈಕಿ, ಶೇ 90ಕ್ಕಿಂತ ಹೆಚ್ಚು ಕಾರ್ಮಿಕರು ಬೇರೆ ಜಿಲ್ಲೆ ಮತ್ತು ರಾಜ್ಯದಿಂದ ಬಂದವರು. ಲಾಕ್‌ಡೌನ್‌ ನಂತರ ಬಹಳಷ್ಟು ಕಾರ್ಮಿಕರು ತವರಿಗೆ ಮರಳಿದ್ದರಿಂದ, ರಿಯಲ್‌ ಎಸ್ಟೇಟ್‌ ಉದ್ಯಮ ಹಿಂದೆಂದೂ ಕಾಣದಂತಹ ಸಂಕಷ್ಟದಲ್ಲಿದೆ ಎನ್ನುತ್ತಾರೆ ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳ ಸಂಘದ (ಕ್ರೆಡಾಯ್‌) ರಾಜ್ಯ ಘಟಕದ ಅಧ್ಯಕ್ಷ ಆಸ್ಟಿನ್‌ ರೋಚ್. ‘ಪ್ರಜಾವಾಣಿ’ಗೆ ಅವರು ನೀಡಿದ ಸಂದರ್ಶನದ ಆಯ್ದಭಾಗ ಇಲ್ಲಿದೆ:

* ಹೆಚ್ಚು ಕಾರ್ಮಿಕರು ತವರಿಗೆ ಮರಳಿರುವುದರಿಂದ ರಿಯಲ್‌ ಎಸ್ಟೇಟ್‌ ಉದ್ಯಮದ ಮೇಲಾಗಿರುವ ಪರಿಣಾಮಗಳೇನು ?

ಕಾರ್ಮಿಕರ ಕೊರತೆ ಇರುವುದರಿಂದ ಸಹಜವಾಗಿ ಕಟ್ಟಡ ನಿರ್ಮಾಣ ಯೋಜನೆಗಳು ವಿಳಂಬವಾಗಲಿವೆ. ಕಚ್ಚಾ ಸಾಮಗ್ರಿ ಪೂರೈಕೆಯಲ್ಲಿಯೂ ವ್ಯತ್ಯಯವಾಗಿದ್ದು ಉದ್ಯಮದ ಮೇಲೆ ಪರಿಣಾಮ ಬೀರಿದೆ. ಸದ್ಯ, ನಿರ್ಮಾಣ ಹಂತದಲ್ಲಿದ್ದ ಕಾಮಗಾರಿ ವಿಳಂಬದಿಂದ ವೆಚ್ಚ, ಬಡ್ಡಿ ಎಲ್ಲ ಸೇರಿ ರಾಜ್ಯದಲ್ಲಿ ಅಂದಾಜು ₹10 ಸಾವಿರ ಕೋಟಿಯಿಂದ ₹12 ಸಾವಿರ ಕೋಟಿಯಷ್ಟು ನಷ್ಟವನ್ನು ರಿಯಲ್‌ ಎಸ್ಟೇಟ್‌ ಉದ್ಯಮ ಎದುರಿಸುತ್ತಿದೆ.

ADVERTISEMENT

* ಲಾಕ್‌ಡೌನ್‌ ಸಂದರ್ಭದಲ್ಲಿ ಕಾರ್ಮಿಕರಿಗೆ ವೇತನ ಪಾವತಿಸಲಿಲ್ಲ, ಯಾವುದೇ ಸೌಲಭ್ಯ ನೀಡಲಿಲ್ಲ ಎಂಬ ದೂರುಗಳಿವೆಯಲ್ಲ?

ಎಲ್ಲ ಡೆವಲಪರ್‌ಗಳೂ ಕಾರ್ಮಿಕರಿಗೆ ವೇತನ ನೀಡಿದ್ದಾರೆ. ಅಲ್ಲದೆ, ಮುಂಗಡ ರೂಪದಲ್ಲಿಯೂ ಹಣ ನೀಡಿದ್ದಾರೆ. ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಅವರು ಊರಿಗೆ ತೆರಳಲು ಕೂಡ ದುಡ್ಡು ಕೊಟ್ಟಿದ್ದಾರೆ. ಎಲ್ಲೋ ಅಲ್ಲೊಂದು, ಇಲ್ಲೊಂದು ವ್ಯತ್ಯಾಸ ಆಗಿರಬಹುದು.

* ಕಾರ್ಮಿಕರು ಊರಿಗೆ ಹೋಗಲು ಸರ್ಕಾರವೇ ನೆರವು ನೀಡಿದೆಯಲ್ಲ?

ಸರ್ಕಾರ ಉಚಿತ ಪ್ರಯಾಣಕ್ಕೆ ವ್ಯವಸ್ಥೆ ಮಾಡಿರಬಹುದು. ಆದರೆ, ಅಷ್ಟೇ ನೆರವು ಕಾರ್ಮಿಕರಿಗೆ ಸಾಕಾಗುವುದಿಲ್ಲ. ಅವರು ಊರಿಗೆ ಹೋಗಲುನಾವೂ ವ್ಯವಸ್ಥೆ ಮಾಡಿದ್ದೇವೆ. ಅವರ ನೆರವಿಗೆ ಅಂತಿಮವಾಗಿ ಸರ್ಕಾರಕ್ಕಿಂತ ನಾವೇ ಬರಬೇಕಾಗುತ್ತದೆ. ಎಲ್ಲ ಡೆವಲಪರ್‌ಗಳು ತಮ್ಮ ತಮ್ಮಕರ್ತವ್ಯ ನಿರ್ವಹಿಸಿದ್ದಾರೆ.

* ಉದ್ಯಮಕ್ಕೆ ನಷ್ಟ ಸಂಭವಿಸುತ್ತದೆ ಎಂಬ ಕಾರಣಕ್ಕೆ ಕಾರ್ಮಿಕರು ಅವರ ರಾಜ್ಯಕ್ಕೆ ಹೋಗದಂತೆ ಒತ್ತಡ ಹೇರಲಾಯಿತು, ಒತ್ತಾಯಪೂರ್ವಕವಾಗಿ ಬಂಧನದಲ್ಲಿ ಇಡಲಾಯಿತು ಎಂಬ ಆರೋಪವಿದೆ...

ಯಾವುದೇ ಕಾರ್ಮಿಕರಿಗೆ ತವರಿಗೆ ಹೋಗಿ ಅಥವಾ ಹೋಗಬೇಡಿ ಎಂದು ನಾವು ಒತ್ತಡ ಹೇರಲು ಸಾಧ್ಯವಿಲ್ಲ. ಎಲ್ಲರಿಗೂ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಇದೆ. ಊರಿಗೆ ಹೋಗಿರುವ ಕಾರ್ಮಿಕರನ್ನು ಮರಳಿ ಬನ್ನಿ ಎಂದೂ ನಾವು ಒತ್ತಡ ಹೇರುವುದಿಲ್ಲ. ಅವರಾಗಿಯೇ ಬಂದರೆ ಸ್ವಾಗತಿಸಿ,
ಕೆಲಸ ಕೊಡುತ್ತೇವೆ.

* ಕಾರ್ಮಿಕರು ಮರಳಿ ಬಾರದಿದ್ದರೆ ಪರ್ಯಾಯವೇನು?

ವಲಸೆ ಕಾರ್ಮಿಕರು ದೀರ್ಘಾವಧಿಯವರೆಗೆ ಊರಿನಲ್ಲಿಯೇ ಇರಲು ಸಾಧ್ಯವಿಲ್ಲ. ಮುಂದೆ ಮರಳಿ ಬರುವ ವಿಶ್ವಾಸವಿದೆ. ಎಲ್ಲರೂ ನಿರಂತರ ದುಡಿಮೆ, ಹೆಚ್ಚು ಆದಾಯ ಬಯಸುವುದರಿಂದ ಬಂದೇ ಬರುತ್ತಾರೆ. ಒಂದು ವೇಳೆ ಬಾರದಿದ್ದರೆ, ಕಡಿಮೆ ಕಾರ್ಮಿಕರ ಲಭ್ಯತೆಯಲ್ಲಿಯೇ ವೇಗವಾಗಿಕೆಲಸ ಮಾಡುವಂತಹ ಯಂತ್ರಗಳನ್ನು ಅಥವಾ ತಂತ್ರಜ್ಞಾನವನ್ನು ಅಳವಡಿಸಿ
ಕೊಳ್ಳುವ ಬಗ್ಗೆ ಯೋಚಿಸಬೇಕಾಗುತ್ತದೆ.

* ಈಗ ಕೆಲಸ ಮಾಡುತ್ತಿರುವ ಕಾರ್ಮಿಕರ ಸುರಕ್ಷತೆಗೆ ಏನು ಕ್ರಮ ಕೈಗೊಂಡಿದ್ದೀರಿ ?

ಸದ್ಯ ಶೇ 7ರಿಂದ ಶೇ 10ರಷ್ಟು ಕಾರ್ಮಿಕರು ಮಾತ್ರ ಕೆಲಸದಲ್ಲಿ ತೊಡಗಿದ್ದಾರೆ. ಸರ್ಕಾರದ ನಿರ್ದೇಶನಗಳನ್ನು ನಾವು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇವೆ. ವ್ಯಕ್ತಿಗತ ಅಂತರ ಕಾಪಾಡಲು, ನಿರ್ಮಾಣ ಸ್ಥಳವನ್ನು ಸೋಂಕು ಮುಕ್ತವಾಗಿಸಲು ಕ್ರಮ ಕೈಗೊಂಡಿದ್ದೇವೆ. ಸ್ಯಾನಿಟೈಸರ್, ಮುಖಗವಸುಒದಗಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.