ಸಂವಾದಕ್ಕೂ ಮೊದಲು ಅಕ್ಷತಾಗೆ ಸುಧಾಮೂರ್ತಿ ಸ್ನೇಹದ ಬಿಸುಪು
ಜೈಪುರ: ವೈವಿಧ್ಯಮಯ ಆಲಾಪ ಮತ್ತು ‘ಲಲಿತ್’ನ ಸೊಬಗಿನಲ್ಲಿ ಧ್ರುಪದ್ ಶೈಲಿಯ ಬಂದಿಶ್‌ಗಳನ್ನು ಆಲಿಸಿದ ಮನಸ್ಸುಗಳು ದಿನವಿಡೀ ಮುಂಜಾನೆ ರಾಗದ ಗುಂಗಿನಲ್ಲಿರುವಂತೆ ಮಾಡಿದ್ದರು ನಿಲೊಯ್ ಎಹ್ಸಾನ್. ಗೋಷ್ಠಿಗಳಲ್ಲಿ ಅನಾವರಣಗೊಂಡ ಸಂಬಂಧಗಳ ಮಾಧುರ್ಯ ಈ ಗುಂಗಿಗೆ ರಂಗು ತುಂಬಿತು, ಬೆರಗು ಮೂಡಿಸಿತು.
ಜೈಪುರ ಸಾಹಿತ್ಯ ಉತ್ಸವದ ಮೂರನೇ ದಿನವಾದ ಶನಿವಾರ ಬೆಳಿಗ್ಗೆ ಸಂಗೀತ ಕಾರ್ಯಕ್ರಮದಲ್ಲಿ ಅಧ್ಯಾತ್ಮ ಸ್ಪರ್ಶದ ಗಾಯನದ ಮೂಲಕ ನಿಲೊಯ್ ಅವರು ತೆರೆದ ಅಂಗಣದ ತಣ್ಣನೆಯ ವಾತಾವರಣದಲ್ಲಿ ಸಂಗೀತ ಪ್ರಿಯರ ಹೃದಯದಲ್ಲಿ ಬಿಸುಪು ತುಂಬಿದರು.
ಇದರ ಬೆನ್ನಲ್ಲೇ ನಡೆದದ್ದು ಇನ್ಫೊಸಿಸ್ ಫೌಂಡೇಷನ್ ಸಹಸ್ಥಾಪಕಿ ಸುಧಾಮೂರ್ತಿ ಮತ್ತು ಮಗಳು ಅಕ್ಷತಾ ಅವರ ಸಂವಾದ. ಶಿಕ್ಷಣ, ಸೇವೆ, ಜೀವನ ಸಿದ್ಧಾಂತ ಇತ್ಯಾದಿ ವಿಷಯಗಳು ಇದ್ದ ಮಾತುಕತೆ ಹಲವರಿಗೆ ಬದುಕಿನ ಪಾಠವಾಯಿತು.
ಸಂಘರ್ಷ, ಪ್ರವಾಸಗಳ ನಡುವೆ ತಾಯ್ನಾಡಿನ ಆಪ್ತಲೋಕ ವನ್ನು ಕಳೆದುಕೊಂಡ ದುಗುಡವನ್ನು ಪ್ರಿಯಾಂಕಾ ಮಟ್ಟು ಮತ್ತು ಪೀಟರ್ ಗಾಡ್ವಿನ್ ಅವರು ‘ಕುಟುಂಬದ ನೆನಪು, ಕಳೆದುಹೋದ ಬದುಕು’ ಎಂಬ ಗೋಷ್ಠಿಯಲ್ಲಿ ತೆರೆದಿಟ್ಟರು.
ಕಾಶ್ಮೀರದಿಂದ ಲಾಸ್ ಏಂಜಲೀಸ್ ವರೆಗೆ ಮಹಿಳೆಯರ ಬದುಕನ್ನು ಹುಡುಕಿದ್ದ ಪ್ರಿಯಾಂಕಾ ತಾಯ್ನಾಡಿನ ನೆನಪುಗಳನ್ನು ವರ್ಣಿಸಿದರು. ಬಿಳಿಯನಾಗಿ ಆಫ್ರಿಕಾದಲ್ಲಿ ಜನಿಸಿದ ಗಾಡ್ವಿನ್, ಇಂಗ್ಲೆಂಡ್‌ಗೆ ವಾಪಸಾದಾಗ ಎದುರಿಸಿದ ಸಾಂಸ್ಕೃತಿಕ ಸಂಘರ್ಷ ವಿವರಿಸಿದರು.
ಕಲಿಕೆ ನಿಂತರೆ ಬದುಕು ಮುಗಿದಂತೆ: ‘ಅಮ್ಮ, ನೀನು ನನ್ನಲ್ಲಿ ಓದುವ ಹವ್ಯಾಸ ಬೆಳೆಸಿದೆ. ಕಲಿಕೆ ನಿಂತರೆ ಬದುಕೇ ಮುಗಿದಂತೆ ಎಂದೆ’ ಎಂದು ಅಕ್ಷತಾ ಪ್ರಸ್ತಾಪಿಸಿದಾಗ ‘ನನ್ನ ಅಜ್ಜಿಗೆ ಅಕ್ಷರ ಮಾಲೆ ಕಲಿಸಿದ್ದು ನಾನು. ಕಲಿಕೆ ಪೂರ್ಣಗೊಂಡಾಗ ಆಕೆ ನನ್ನ ಕಾಲಿಗೆ ಎರಗಿದ್ದಳು. ಇದರಿಂದ ಅರಿವೇ ಎಲ್ಲ ಎಂದು ನನಗೆ ತಿಳಿಯಿತು. ಅದನ್ನೇ ನಿನಗೆ ಹೇಳಿದೆ’ ಎಂದು ಸುಧಾಮೂರ್ತಿ ಉತ್ತರಿಸಿದರು.
‘ನನ್ನಲ್ಲಿ ಸೇವಾಮನೋಭಾವ ಮೂಡಿಸಿದವಳು ನೀನು. ಆದ್ದರಿಂದ ಒಂದರ್ಥದಲ್ಲಿ ನೀನು ನನ್ನ ಗುರು. ಹಿರಿಯರಿಗೆ ಕಿರಿಯರು ಗುರುಗಳಾಗುವ ಸಂಸ್ಕೃತಿ ನಮ್ಮ ಕುಟುಂಬದಲ್ಲಿ ತನ್ನಷ್ಟಕ್ಕೇ ಬೆಳೆದುಬಂದಿದೆ’ ಎಂದು ಸುಧಾಮೂರ್ತಿ ಹೇಳಿದರು.
‘ಸೇವೆ ನಮ್ಮ ಕುಟುಂಬದಲ್ಲಿ ರಕ್ತಗತವಾಗಿದೆ. ಹಳ್ಳಿಯಲ್ಲಿ ಹೆರಿಗೆಗಳನ್ನು ಮಾಡಿಸುತ್ತಿದ್ದ ಅಜ್ಜಿಗೆ ಫಲಾಪೇಕ್ಷೆ ಇರಲಿಲ್ಲ. ಅದನ್ನು ಕಂಡು ಅಪ್ಪನೂ, ಸಹೋದರಿಯೂ ಸೇವಾ ಕ್ಷೇತ್ರಕ್ಕೆ ಇಳಿದರು’ ಎಂದು ಸುಧಾಮೂರ್ತಿ ನೆನಪಿಸಿಕೊಂಡರು.
‘ಆಯುಷ್ಯ ವರ್ಧಿನಿ’
ಕ್ರಿಯಾಶೀಲವಾಗಿರುವುದು, ಬದುಕಿಗೊಂದು ಉದ್ದೇಶ ಇರಿಸಿಕೊಂಡು ಮುಂದೆ ಸಾಗುವುದು ಆಯುಷ್ಯ ಹೆಚ್ಚಿಸಲು ನೆರವಾಗಲಿದೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ವೆಂಕಿ ರಾಮಕೃಷ್ಣನ್ ಹೇಳಿದರು.
‘ನಾವೇಕೆ ಸಾಯುತ್ತೇವೆ’ ಎಂಬ ವಿಷಯದ ಕುರಿತು ರೋಜರ್ ಹೈಫೀಲ್ಡ್ ಜೊತೆ ನಡೆಸಿದ ಸಂವಾದದಲ್ಲಿ ಬದುಕಿ ಉಳಿಯುವ ತಾಕತ್ತು, ಪ್ರಕೃತಿ ನಿಯಮ ಇತ್ಯಾದಿ ವಿಷಯಗಳು ಜೀವಿಗಳ ಆಯುಷ್ಯದ ಮೇಲೆ ಪರಿಣಾಮ ಬೀರಿವೆ. ಅದರೂ ಆರೋಗ್ಯಕರ ಜೀವನಶೈಲಿ ಸಾವನ್ನು ಸ್ವಲ್ಪಮಟ್ಟಿಗೆ ಮುಂದೂಡಲು ನೆರವಾಗಬಲ್ಲದು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.