ADVERTISEMENT

ಆಯುಧ ಪೂಜೆ, ಮಹಾನವಮಿ ಸಂಭ್ರಮ: ಸಿಎಂ, ಡಿಸಿಎಂ ಸೇರಿ ಗಣ್ಯರಿಂದ ಶುಭಾಶಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಅಕ್ಟೋಬರ್ 2025, 6:43 IST
Last Updated 1 ಅಕ್ಟೋಬರ್ 2025, 6:43 IST
   

ಬೆಂಗಳೂರು: ಮಹಾನವಮಿ ಹಾಗೂ ಆಯುಧಪೂಜೆಯ ಹಬ್ಬದ ಪ್ರಯುಕ್ತ ನಾಡಿನ ಸಮಸ್ತ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ನಾಡಿನ ಜನತೆಗೆ ಮಹಾನವಮಿ ಹಾಗೂ ಆಯುಧಪೂಜೆಯ ಶುಭಾಶಯಗಳು. ತಾಯಿ ಚಾಮುಂಡೇಶ್ವರಿಯ ಆಶೀರ್ವಾದದಿಂದ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿ ಸದಾಕಾಲ ನೆಲೆಸಿರಲೆಂದು ಪ್ರಾರ್ಥಿಸುತ್ತೇನೆ ಎಂದು ಶುಭಾಶಯ ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಹ ನಾಡಿನ ಸಮಸ್ತ ಜನತೆಗೆ ಆಯುಧ ಪೂಜೆ ಹಾಗೂ ಮಹಾನವಮಿಯ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ. ಈ ಹಬ್ಬವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಸಮೃದ್ಧಿಯನ್ನು ತರಲೆಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ADVERTISEMENT

ಮಗದೊಂದು ಪೋಸ್ಟ್‌ನಲ್ಲಿ ಡಿಕೆಶಿ, ಆಯುಧಪೂಜೆ ಹಿನ್ನೆಲೆಯಲ್ಲಿ ಸದಾಶಿವನಗರದ ಗೃಹಕಚೇರಿಯಲ್ಲಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ, ವಾಹನಗಳಿಗೆ ಪೂಜೆ ಸಲ್ಲಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ. ನಾಡದೇವತೆ ತಾಯಿ ಚಾಮುಂಡೇಶ್ವರಿ ಸರ್ವರಿಗೂ ಒಳಿತನ್ನು ಮಾಡಲಿ ಎಂದು ಪ್ರಾರ್ಥಿಸಲಾಯಿತು ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತಮ್ಮ ಸಂದೇಶದಲ್ಲಿ ಈ ಪುಣ್ಯದಿನ ಎಲ್ಲರಿಗೂ ಒಳ್ಳೆಯದೇ ಆಗಲಿ ಹಾಗೂ ಸರ್ವರ ಬಾಳಿನಲ್ಲಿಯೂ ಸುಖ ಶಾಂತಿ, ನೆಮ್ಮದಿ ಸಮೃದ್ಧಿ ತುಂಬಲಿ, ಆ ತಾಯಿಯ ಅನುಗ್ರಹ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ನಮ್ಮ ನಿತ್ಯ ಬಳಕೆಯ ಸಕಲ ಯಂತ್ರೋಪಕರಣಗಳು, ವಾಹನಗಳು, ವಸ್ತುಗಳನ್ನು ದೈವ ಸ್ವರೂಪವೆಂದು ಭಾವಿಸಿ ಪೂಜಿಸುವ ವಿಶಿಷ್ಟ ದಿನದ ಸಂಭ್ರಮವು ಎಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಹೊತ್ತು ತರಲಿ, ಜಗನ್ಮಾತೆ ದುರ್ಗಿಯ ಅನುಗ್ರಹ ಎಲ್ಲರ ಮೇಲಿರಲೆಂದು ಪ್ರಾರ್ಥಿಸೋಣ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹಾರೈಸಿದ್ದಾರೆ.

ತಾಯಿ ಚಾಮುಂಡೇಶ್ವರಿಯು ನಮ್ಮ ಸಕಲರಿಗೂ ಸುಖ-ಸಂತೋಷ, ಸಮೃದ್ಧಿ, ಆರೋಗ್ಯ ನೀಡಿ ಕರುಣಿಸಲಿ ಎಂದು ಪ್ರಾರ್ಥಿಸೋಣ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಹಾರೈಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.