ADVERTISEMENT

ಗಂಡು ಅಥವಾ ಹೆಣ್ಣು ಮಗುನೇ ಪಡೆಯಲು ಆಯುರ್ವೇದದಲ್ಲಿ ಔಷಧ ಇದೆ: ಬಾರ್ಕೂರು ಸ್ವಾಮೀಜಿ

ಸುಶ್ರುತ ಸಂಹಿತೆಯ ‘ಪುಂಸವನ ವಿಧಿ’ ನಿಷೇಧಕ್ಕೆ ವಿಶ್ವಸಂತೋಷ ಭಾರತಿ ಸ್ವಾಮೀಜಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 16:07 IST
Last Updated 27 ಡಿಸೆಂಬರ್ 2025, 16:07 IST
ಸಮ್ಮೇಳನದಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರನ್ನು ಡಾ.ಗಿರಿಧರ ಕಜೆ ಗೌರವಿಸಿದರು. ವಿಶ್ವಸಂತೋಷ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು
ಸಮ್ಮೇಳನದಲ್ಲಿ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರನ್ನು ಡಾ.ಗಿರಿಧರ ಕಜೆ ಗೌರವಿಸಿದರು. ವಿಶ್ವಸಂತೋಷ ಭಾರತಿ ಸ್ವಾಮೀಜಿ ಉಪಸ್ಥಿತರಿದ್ದರು   

ಬೆಂಗಳೂರು: ‘ಆಯುರ್ವೇದ ಚಿಕಿತ್ಸಾ ಪದ್ಧತಿಯಡಿ ಸ್ವಇಚ್ಛೆಯ ಮಗು ಪಡೆಯಲೂ ಈ ಹಿಂದೆ ಔಷಧ ಒದಗಿಸಲಾಗುತ್ತಿತ್ತು. ನಮ್ಮ ದೇಶಕ್ಕೆ ಹಿರಿಮೆ ತರುವ ಈ ಔಷಧದ ಬಗ್ಗೆ ವೈಜ್ಞಾನಿಕ ಸಂಶೋಧನೆ ನಡೆಸುವ ಬದಲು, ಅದನ್ನು ನಿಷೇಧಿಸಲಾಗಿದೆ’ ಎಂದು ಬಾರ್ಕೂರು ಮಹಾಸಂಸ್ಥಾನದ ವಿಶ್ವಸಂತೋಷ ಭಾರತಿ ಸ್ವಾಮೀಜಿ ಹೇಳಿದರು.

ಆಯುಷ್ ಸಚಿವಾಲಯ ಹಾಗೂ ರಾಜ್ಯ ಆಯುಷ್ ಇಲಾಖೆಯ ಸಹಯೋಗದಲ್ಲಿ ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ಹಮ್ಮಿಕೊಂಡಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದ ಮೂರನೆ ದಿನವಾದ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. 

‘ಸುಶ್ರುತ ಸಂಹಿತೆಯ ‘ಪುಂಸವನ ವಿಧಿ’ಯಲ್ಲಿ ಗಂಡು–ಅಥವಾ ಹೆಣ್ಣು ಮಗುವನ್ನು ಪಡೆಯಲು ಗಿಡಮೂಲಿಕೆಯ ಔಷಧದ ಬಗ್ಗೆ ಉಲ್ಲೇಖವಿದೆ. ರಾಜರ ಕಾಲದಲ್ಲಿ ಗಂಡು ಮಗು ಹೊಂದಿರುವವರಿಗೆ ಹೆಣ್ಣು ಮಗು ಪಡೆಯಲು, ಹೆಣ್ಣು ಮಗು ಹೊಂದಿರುವವರಿಗೆ ಗಂಡು ಮಗು ಪಡೆಯಲು ಸುಶ್ರುತ ಮತ್ತು ವಾಗ್ಭಟ ಔಷಧ ಸಂಶೋಧಿಸಿದ್ದರು. ‘ಲಕ್ಷ್ಮಣ ಬೇರಿನ’ ರಸವನ್ನು ನಿಗದಿತ ಮುಹೂರ್ತದಲ್ಲಿ ತೆಗೆದು, ಗರ್ಭಿಣಿಯ ಮೂಗಿನ ಮೂಲಕ ಆ ರಸವನ್ನು ಗೊತ್ತುಪಡಿಸಲಾದ ವಿಧಾನದಲ್ಲಿ ಹಾಕಲಾಗುತ್ತದೆ. ಈ ಬಗ್ಗೆ 10–12 ಶ್ಲೋಕಗಳನ್ನು ಬರೆಯಲಾಗಿದೆ. ಈ ರಸವು ವರ್ಣತಂತುಗಳಲ್ಲಿ (ಕ್ರೋಮೋಸೋಮ್‌) ವ್ಯತ್ಯಾಸ ಮಾಡಿ, ಇಚ್ಛೆಯ ಮಗು ಪಡೆಯಲು ಸಹಕಾರಿಯಾಗುತ್ತಿತ್ತು. ಈ ಔಷಧದ ಬಗ್ಗೆ ಸಂಶೋಧನೆಯಾಗಬೇಕು’ ಎಂದು ಹೇಳಿದರು‌.

ADVERTISEMENT

‘ಮಿದುಳಿನಲ್ಲಿ 72 ಸಾವಿರ ನರತಂತುಗಳು ಇರುವ ಬಗ್ಗೆ ಮೂರು ಸಾವಿರ ವರ್ಷಗಳ ಹಿಂದೆಯೇ ಸುಶ್ರುತ ಸಂಹಿತೆಯಲ್ಲಿ ಉಲ್ಲೇಖಿಸಲಾಗಿದೆ. ಈಗ ಸಿಟಿ ಸ್ಕ್ಯಾನ್ ಮೂಲಕ ಹೇಳುವುದನ್ನು, ವಿದ್ಯುತ್ ಇಲ್ಲದ ಕಾಲದಲ್ಲಿಯೇ ಹೇಳಿರುವುದು ನಮ್ಮ ದೇಶದ ಹಿರಿಮೆ. ಸರ್ಪಸುತ್ತನ್ನು ಮೂರೇ ದಿನದಲ್ಲಿ ಗುಣಪಡಿಸುವ ಔಷಧ ಆಯುರ್ವೇದಲ್ಲಿದೆ’ ಎಂದರು. 

ಹುಬ್ಬಳ್ಳಿಯ ಮೂರುಸಾವಿರ ಮಠದ ಪೀಠಾಧಿಪತಿ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ‘ಭಾರತೀಯ ಆರೋಗ್ಯ ಸಂಸ್ಕೃತಿಯ ಮೂಲ ಆಯುರ್ವೇದ. ಎಲ್ಲ ಗಿಡಮೂಲಿಕೆಗಳ ಜ್ಞಾನ ಎಲ್ಲರಿಗೂ ಲಭ್ಯವಾಗುವುದಿಲ್ಲ. ಅಷ್ಟು ಗಿಡಮೂಲಿಕೆ ಪ್ರಪಂಚದಲ್ಲಿದೆ. ಆಯುರ್ವೇದದಲ್ಲಿ ಎಲ್ಲ ರೋಗಕ್ಕೂ ಔಷಧಗಳಿವೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಈ ಚಿಕಿತ್ಸಾ ಪದ್ಧತಿಯ ಉಪಚಾರದಿಂದ ಆರೋಗ್ಯ ವೃದ್ಧಿಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.  

ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್ ಸಂಸ್ಥಾಪಕ ಡಾ.ಗಿರಿಧರ ಕಜೆ, ‘ಈಗಾಗಲೇ ಇರುವ ಹಾಗೂ ಹೊಸದಾಗಿ ಕಾಣಿಸಿಕೊಳ್ಳುವ ರೋಗಗಳ ತಡೆಗೆ ಆಯುರ್ವೇದ ಸಹಕಾರಿ. ಕೋವಿಡ್ ಸಂದರ್ಭದಲ್ಲಿ ಆಯುರ್ವೇದದ ಮಹತ್ವ ಜನರ ಅರಿವಿಗೆ ಬಂದಿದೆ’ ಎಂದು ಹೇಳಿದರು. 

ಆಯುರ್ವೇದ ಚಿಕಿತ್ಸಾ ಪದ್ಧತಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಂಶೋಧನೆ ನಡೆಯಬೇಕು. ಆಯುರ್ವೇದ ವಿಜ್ಞಾನವು ಪಾಶ್ಚಾತ್ಯ ವಿಜ್ಞಾನಕ್ಕಿಂತ ಕಡಿಮೆಯಿಲ್ಲ

-ಸ್ವಾಮಿ ನಿರ್ಭಯಾನಂದ ಸರಸ್ವತಿ ರಾಮಕೃಷ್ಣ ವಿವೇಕಾನಂದ ಆಶ್ರಮ

ಆಯುರ್ವೇದದಲ್ಲಿ ವೈಜ್ಞಾನಿಕ ಸಂಶೋಧನೆಗಳು ನಡೆದು ಆರೋಗ್ಯ ಕ್ಷೇತ್ರದಲ್ಲಿ ಈ ಪದ್ಧತಿ ಮುನ್ನೆಲೆಗೆ ಬರಬೇಕು. ಇಡೀ ಜಗತ್ತಿಗೆ ಇದರ ಶಕ್ತಿ ಪರಿಚಯವಾಗಬೇಕ

- ಬಿ.ಎ. ಪಾಟೀಲ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ವಿಶ್ವ ದಾಖಲೆ ನಿರ್ಮಾಣ

ಆಯುರ್ವೇದ ವಿಶ್ವ ಸಮ್ಮೇಳನದಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ‘ಅಷ್ಟಾಂಗ ಹೃದಯ ಸಂಹಿತೆ’ಯ ‘ದಿನಚರ್ಯೆ’ ಅಧ್ಯಾಯವನ್ನು ಪಠಣ ಮಾಡಿದರು. ಈ ಪಠಣವು ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ಹಾಗೂ ಏಷ್ಯಾ ಬುಕ್ಸ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಯಿತು. ಡಾ. ಗಿರಿಧರ ಕಜೆ ಅವರಿಗೆ ಈ ಬಗ್ಗೆ ಪ್ರಮಾಣಪತ್ರವನ್ನು ಸಮಾರಂಭದಲ್ಲಿ ವಿತರಿಸಲಾಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.