ADVERTISEMENT

ಅಜೀಂ ಪ್ರೇಮ್‌ಜಿ ಫೌಂಡೇಷನ್‌: 2.5 ಲಕ್ಷ ಹೆಣ್ಣುಮಕ್ಕಳಿಗೆ ವಿದ್ಯಾರ್ಥಿ ವೇತನ

​ಪ್ರಜಾವಾಣಿ ವಾರ್ತೆ
Published 15 ಮೇ 2025, 16:03 IST
Last Updated 15 ಮೇ 2025, 16:03 IST
ಅನುರಾಗ್‌ ಬೆಹರ್
ಅನುರಾಗ್‌ ಬೆಹರ್   

ಬೆಂಗಳೂರು: ಅಜೀಂ ಪ್ರೇಮ್‌ಜಿ ಫೌಂಡೇಷನ್‌ 2025–26ನೇ ಶೈಕ್ಷಣಿಕ ಸಾಲಿನಲ್ಲಿ 2.5 ಲಕ್ಷ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ನಿರ್ಧರಿಸಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾಹಿತಿ ನೀಡಿದ ಫೌಂಡೇಷನ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುರಾಗ್‌ ಬೆಹರ್‌, 2024-25ನೇ ಶೈಕ್ಷಣಿಕ ಸಾಲಿನಲ್ಲಿ ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾ ನ ಮತ್ತು ಜಾರ್ಖಂಡ್‌ನ 25 ಸಾವಿರಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗಿತ್ತು. ಈ ಬಾರಿ ಕರ್ನಾಟಕ ಸೇರಿದಂತೆ 18 ರಾಜ್ಯಗಳಿಗೆ ವಿಸ್ತರಿಸಲಾಗಿದೆ. 10 ಮತ್ತು 12ನೇ ತರಗತಿ ಉತ್ತೀರ್ಣರಾಗಿ ಮುಂದಿನ ಹಂತದ ಶಿಕ್ಷಣ ಪಡೆಯುವ ಹೆಣ್ಣು ಮಕ್ಕಳಿಗೆ ನೆರವು ಸಿಗಲಿದೆ ಎಂದರು.

ನಗರ ಹಾಗೂ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ–ಕಾಲೇಜು, ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳು ನಡೆಸುವ ಶಾಲೆಗಳಲ್ಲಿ ಕಲಿತವರು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು. ಸರ್ಕಾರಿ, ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳು ನಡೆಸುವ ಡಿಪ್ಲೊಮಾ, ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಪ್ರತಿಭಾವಂತರಿಗೆ ಸೌಲಭ್ಯ ಸಿಗಲಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿರುವ ಕೆಲ ಖಾಸಗಿ ಸಂಸ್ಥೆಗಳ ವಿದ್ಯಾರ್ಥಿನಿಯರನ್ನೂ ಪರಿಗಣಿಸಲಾಗುವುದು. ವಾರ್ಷಿಕ ₹750 ಕೋಟಿಯಂತೆ ಮೂರು ವರ್ಷಗಳಿಗೆ ₹2,250 ಕೋಟಿ ಮೀಸಲಿಡಲಾಗಿದೆ. ಪ್ರತಿ ವಿದ್ಯಾರ್ಥಿನಿಗೂ ಅವರ ಕೋರ್ಸ್‌ ಮುಗಿಯುವವರೆಗೂ ಪ್ರತಿ ವರ್ಷ ₹30 ಸಾವಿರ ನೀಡಲಾಗುವುದು. ಈ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಷಕ್ಕೆ ಎರಡು ಬಾರಿ ಜಮೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

ಹೆಣ್ಣುಮಕ್ಕಳು ಶಿಕ್ಷಣ ಪಡೆಯುವಲ್ಲೂ ಸಾಮಾಜಿಕ ಮತ್ತು ಆರ್ಥಿಕ ಅಡೆತಡೆ ಎದುರಿಸುತ್ತಿದ್ದಾರೆ. ತಮ್ಮ ಜೀವನದ ಹಾದಿಯಲ್ಲಿ ಸ್ವಾವಲಂಬನೆ ಸಾಧಿಸಲು ಉನ್ನತ ಶಿಕ್ಷಣ ಪಡೆಯಲೇಬೇಕು. ಪ್ರಯಾಣ ವೆಚ್ಚ, ಬಟ್ಟೆ, ಪುಸ್ತಕ ಸೇರಿದಂತೆ ಕೆಲ ವೆಚ್ಚಗಳು ಭಾರ ಎನಿಸಬಹುದು. ಅದಕ್ಕಾಗಿ ಅಜೀಂ ಪ್ರೇಮ್‌ಜಿ ಫೌಂಡೇಷನ್‌ ನೆರವಾಗುತ್ತಿದೆ ಎಂದರು.

ಕರ್ನಾಟಕದಲ್ಲಿ ಜಾರಿಗೆ ತಂದಿರುವ ಮೂರು ಪರೀಕ್ಷಾ ಪದ್ಧತಿ ವೆಬ್‌ಕಾಸ್ಟಿಂಗ್‌ ದೇಶಕ್ಕೇ ಮಾದರಿ. ಪ್ರತಿಭಾವಂತರನ್ನು ರೂಪಿಸಲು ಪರೀಕ್ಷಾ ಭಯ ಹೋಗಲಾಡಿಸಲು ಸಹಕಾರಿಯಾಗಿವೆ

–ಅನುರಾಗ್‌ ಬೆಹರ್ ಸಿಇಒ ಅಜೀಂ ಪ್ರೇಮ್‌ಜಿ ಫೌಂಡೇಷನ್‌

–––

ಸೆಪ್ಟೆಂಬರ್‌ಗೆ ಅರ್ಜಿ ಸಲ್ಲಿಕೆ  2025–26ನೇ ಸಾಲಿಗೆ ಡಿಪ್ಲೊಮಾ ಎಂಜನಿಯರಿಂಗ್‌ ಸೇರಿದಂತೆ ವಿವಿಧ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿನಿಯರು ಸೆಪ್ಟೆಂಬರ್‌ 1ರಿಂದ ಅರ್ಜಿ ಸಲ್ಲಿಸಬಹುದು. ವಿವಿಧ ಮಾಧ್ಯಮಗಳಲ್ಲಿ ಈ ಕುರಿತು ಮಾಹಿತಿ ನೀಡಲಾಗುವುದು. ಅಜೀಂ ಪ್ರೇಮ್‌ಜಿ ಫೌಂಡೇಷನ್‌ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಕೆಯ ಲಿಂಕ್‌ ಬಿಡುಗಡೆ ಮಾಡಲಾಗುವುದು. ಅಂಕಗಳ ಅರ್ಹತೆಯ ಆಧಾರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅನುರಾಗ್‌ ಬೆಹರ್‌ ಮಾಹಿತಿ ನೀಡಿದರು. 

ಯಾರಿಗೆ ಸಿಗಲಿದೆ ಸೌಲಭ್ಯ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಲಿತವರು ಡಿಪ್ಲೊಮಾಕ್ಕೆ ಸೇರಿದ ವಿದ್ಯಾರ್ಥಿನಿಯರು ಎಂಜಿನಿಯರಿಂಗ್‌ ವೈದ್ಯಕೀಯ ವಿದ್ಯಾರ್ಥಿನಿಯರು ಇತರೆ ಪದವಿ ಕೋರ್ಸ್‌ಗಳ ವಿದ್ಯಾರ್ಥಿನಿಯರು ––– ₹750 ಕೋಟಿ ಮೀಸಲಿಟ್ಟ ವಾರ್ಷಿಕ ಮೊತ್ತ ₹2250 ಕೋಟಿ ಮೂರು ವರ್ಷಗಳ ನೆರವು 2.50 ಲಕ್ಷ ನೆರವು ಪಡೆಯುವ ವಿದ್ಯಾರ್ಥಿನಿಯರು ₹30 ಸಾವಿರ ಒಬ್ಬರಿಗೆ ನೀಡುವ ವಾರ್ಷಿಕ ನೆರವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.