ಬೆಂಗಳೂರು: ಬಿ. ಫಾರ್ಮಾ ಕೋರ್ಸ್‌ಗೆ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳಿಂದ ಕಟ್ಟಿಸಿಕೊಂಡಿದ್ದ ಹೆಚ್ಚುವರಿ ಶುಲ್ಕವನ್ನು ಎರಡು ಕಾಲೇಜುಗಳು ಹಿಂದಿರುಗಿಸಿವೆ.
ನಗರದ ಆಚಾರ್ಯ ಮತ್ತು ಬಿ.ಎಂ. ರೆಡ್ಡಿ ಫಾರ್ಮಸಿ ಕಾಲೇಜುಗಳು ಒಟ್ಟು ₹5.40 ಲಕ್ಷ ಹೆಚ್ಚುವರಿ ಶುಲ್ಕ ಕಟ್ಟಿಸಿಕೊಂಡಿದ್ದವು. ಈ ಕುರಿತು ಎಂಟು ವಿದ್ಯಾರ್ಥಿಗಳು ಸಮಿತಿ ಅಧ್ಯಕ್ಷರಾದ ನ್ಯಾಯಮೂರ್ತಿ ಬಿ. ಶ್ರೀನಿವಾಸಗೌಡ ಅವರ ಅಧ್ಯಕ್ಷತೆಯ ಶುಲ್ಕ ನಿಯಂತ್ರಣ ಸಮಿತಿಗೆ ದೂರು ನೀಡಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳನ್ನು ಕರೆಸಿ, ವಿಚಾರಣೆ ನಡೆಸಿದ ನಂತರ ಹೆಚ್ಚುವರಿ ಶುಲ್ಕ ವಾಪಸ್ ನೀಡಲಾಗಿದೆ.
ವೈದ್ಯಕೀಯ ಶುಲ್ಕ 8 ಲಕ್ಷ ವರ್ಗಾವಣೆ: ಮಂಗಳೂರಿನ ಜಿ.ಆರ್. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಾದ ಪೂಜಿತಾ ಜೆ. ಅಂಗಡಿ ಅವರಿಗೆ ₹7 ಲಕ್ಷ, ತುಷಾರ್ ಬಿ.ಭಾಸ್ಮೆ ಅವರಿಗೆ ₹1 ಲಕ್ಷ ಶುಲ್ಕವನ್ನು ಸಮಿತಿ ವರ್ಗಾವಣೆ ಮಾಡಿಕೊಟ್ಟಿದೆ.
ಕಾಲೇಜಿನ ಮಾನ್ಯತೆ ರದ್ದಾದ ನಂತರ ಆ ಕಾಲೇಜಿನ ವಿದ್ಯಾರ್ಥಿಗಳನ್ನು ಬೇರೆ ಕಾಲೇಜುಗಳಿಗೆ ವರ್ಗಾಯಿಸಲಾಗಿತ್ತು. ಆದರೆ, ಶುಲ್ಕ ವರ್ಗಾವಣೆ ಆಗಿರಲಿಲ್ಲ. ಹಾಗಾಗಿ, ವಿದ್ಯಾರ್ಥಿಗಳು ಸಮಿತಿಗೆ ದೂರು ನೀಡಿದ್ದರು.
ಎಂ.ಬಿ.ಎ.ಕೋರ್ಸ್ ಪ್ರವೇಶಕ್ಕಾಗಿ ಮೂವರು ವಿದ್ಯಾರ್ಥಿಗಳಿಂದ ಆಚಾರ್ಯ ಬೆಂಗಳೂರು ಬಿ-ಸ್ಕೂಲ್ ಸಂಗ್ರಹಿಸಿದ್ದ ಹೆಚ್ಚುವರಿ ಶುಲ್ಕವನ್ನೂ ಸಮಿತಿ ವಾಪಸ್ ಕೊಡಿಸಿದೆ. ಕೆಇಎ ನಿಗದಿಪಡಿಸಿದ ಶುಲ್ಕದ ಜತೆಗೆ ₹31 ಸಾವಿರ ಕಟ್ಟಿಸಿಕೊಳ್ಳಲು ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.