ADVERTISEMENT

ಮಹಾರಾಷ್ಟ್ರಕ್ಕೆ ಸಾಸಿವೆ ಕಾಳಷ್ಟೂ ಜಾಗ ಬಿಡೆವು: ಸಚಿವ ಬಿ. ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 16:29 IST
Last Updated 13 ಮಾರ್ಚ್ 2021, 16:29 IST
ಬಿ. ಶ್ರೀರಾಮುಲು
ಬಿ. ಶ್ರೀರಾಮುಲು   

ಚಿತ್ರದುರ್ಗ: ‘ಮರಾಠಿಗರ ಪುಂಡಾಟಿಕೆ ಸಹಿಸುವುದಿಲ್ಲ. ಬೆಳಗಾವಿ ಅಷ್ಟೇ ಅಲ್ಲ; ರಾಜ್ಯದಲ್ಲಿನ ಸಾಸಿವೆ ಕಾಳಿನಷ್ಟು ಜಾಗವನ್ನೂ ಮಹಾರಾಷ್ಟ್ರಕ್ಕೆ ರಾಜ್ಯ ಸರ್ಕಾರ ಬಿಟ್ಟುಕೊಡುವುದಿಲ್ಲ’ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.

ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ ಶನಿವಾರ ಮಾತನಾಡಿದ ಅವರು, ‘ಕನ್ನಡನಾಡಿನ ವಿಚಾರ ಬಂದಾಗ ಪಕ್ಷಭೇದ ಮರೆತು ಹೋರಾಟಕ್ಕೆ ಸಿದ್ಧನಿದ್ದೇನೆ. ಯಾವ ಕಾರಣಕ್ಕೂ ಭೂಮಿ ಬಿಟ್ಟುಕೊಡುವುದಿಲ್ಲ’ ಎಂದು ಪುನರುಚ್ಚರಿಸಿದರು.

‘ಭದ್ರಾವತಿ ಶಾಸಕ ಸಂಗಮೇಶ್ವರ ಮಗನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ ಎಂಬ ಕಾರಣಕ್ಕೆ ಕಾಂಗ್ರೆಸ್‌ ‘ಶಿವಮೊಗ್ಗ ಚಲೋ’ ಕಾರ್ಯಕ್ರಮ ಆಯೋಜಿಸಿದೆ. ಶಿವಮೊಗ್ಗ ಮತ್ತು ಭದ್ರಾವತಿಯನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಇದು ಕಾಂಗ್ರೆಸ್‌ ನಾಯಕರ ಬೂಟಾಟಿಕೆಯಾಗಿದೆ. ದೇಶದ ಜನರಿಗೆ ಕಾಂಗ್ರೆಸ್‌ನವರ ನಿಜ ಬಣ್ಣ, ಚಾಳಿ ಏನೆಂಬುದು ಗೊತ್ತಿದೆ’ ಎಂದರು.

ADVERTISEMENT

‘ಸೇಡಿನ ರಾಜಕಾರಣ ಬಿಜೆಪಿ ಮಾಡುತ್ತಿಲ್ಲ. ಶಾಸಕರ ಮಗ ಮಾಡಿರುವ ತಪ್ಪಿಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಬಳಿಕ ತಪ್ಪಿತಸ್ಥರು ಯಾರೆಂಬುದು ತಿಳಿಯಲಿದೆ. ಅವರಿಗೆ ಕಾನೂನಾತ್ಮಕವಾಗಿ ಶಿಕ್ಷೆಯಾಗಲಿದೆ’ ಎಂದು ಹೇಳಿದರು.

‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌ ಸೇರಿ ಹಿಂದೂಪರ ಸಂಘಟನೆಗಳ ಸುಮಾರು 4 ಸಾವಿರ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಷ್ಟೇ ಅಲ್ಲ, ಕೇವಲ 24 ತಾಸಿನೊಳಗೆ ರೌಡಿಶೀಟರ್‌ ಪಟ್ಟಿಗೆ ಸೇರಿಸುವ ಕೆಲಸ ಮಾಡಿದ್ದರು. ಇಂತಹ ಕೆಲಸ ನಾವು ಮಾಡುವುದಿಲ್ಲ’ ಎಂದರು.

‘ರಮೇಶ ಜಾರಕಿಹೊಳಿ ಅವರನ್ನು ರಾಜಕೀಯವಾಗಿ ಸಂಪೂರ್ಣ ಮುಗಿಸಬೇಕು ಎಂಬ ಷಡ್ಯಂತ್ರ ಅಡಗಿದೆ. ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಆದಷ್ಟು ತ್ವರಿತವಾಗಿ ನನ್ನ ಸ್ನೇಹಿತ ಆರೋಪಮುಕ್ತನಾಗಿ ಹೊರಬರುವ ವಿಶ್ವಾಸವಿದೆ’ ಎಂದು ಹೇಳಿದರು.

‘ಸೀಡಿ ಬಿಡುಗಡೆ ಷಡ್ಯಂತ್ರಗಳು ಈಚೆಗೆ ಹೆಚ್ಚುತ್ತಿವೆ. ಎಷ್ಟೇ ಸೀಡಿ ಬಿಡುಗಡೆಯಾಗಲಿ; ತಪ್ಪಿತಸ್ಥರು ಎಂದು ತನಿಖೆ ಮೂಲಕ ಸಾಬೀತಾದರೆ, ಕಾನೂನಾತ್ಮಕವಾಗಿ ಶಿಕ್ಷೆ ಅನುಭವಿಸಲಿದ್ದಾರೆ’ ಎಂದು ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.