ADVERTISEMENT

ಹರ್ಷನ ಹತ್ಯೆ: ಬಜರಂಗದಳ, ವಿಎಚ್‌ಪಿ ಪ್ರತಿಭಟನೆ

ಹರ್ಷನ ಹತ್ಯೆ ಆರೋಪಿಗಳಿಗೆ ಶಿಕ್ಷೆ ವಿಧಿಸಲು ಒತ್ತಾಯ l ಎ‌ಸ್‌ಡಿಪಿಐ, ಪಿಎಫ್ಐ ನಿಷೇಧಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2022, 19:34 IST
Last Updated 23 ಫೆಬ್ರುವರಿ 2022, 19:34 IST
ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ‘ವಿಶ್ವ ಹಿಂದೂ ಪರಿಷತ್’ ಹಾಗೂ ‘ಹಿಂದೂ ಜಾಗರಣ ವೇದಿಕೆ’ ನೇತೃತ್ವದಲ್ಲಿ ಬೆಂಗಳೂರಿನ ಪುರಭವನ ಎದುರು ಬುಧವಾರ ಪ್ರತಿಭಟನೆ ನಡೆಯಿತು – ಪ್ರಜಾವಾಣಿ ಚಿತ್ರ
ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ‘ವಿಶ್ವ ಹಿಂದೂ ಪರಿಷತ್’ ಹಾಗೂ ‘ಹಿಂದೂ ಜಾಗರಣ ವೇದಿಕೆ’ ನೇತೃತ್ವದಲ್ಲಿ ಬೆಂಗಳೂರಿನ ಪುರಭವನ ಎದುರು ಬುಧವಾರ ಪ್ರತಿಭಟನೆ ನಡೆಯಿತು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆಯನ್ನು ಖಂಡಿಸಿ ರಾಜ್ಯದ ಬಹುತೇಕ ಜಿಲ್ಲೆ ಹಾಗೂ ಕೆಲ ತಾಲ್ಲೂಕು ಕೇಂದ್ರಗಳಲ್ಲಿ ಬಜರಂಗದಳ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್‌), ಶ್ರೀರಾಮಸೇನೆ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೆಲ ಜಿಲ್ಲಾ ಕೇಂದ್ರಗಳ ಪ್ರಮುಖ ಬೀದಿಗಳಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆ ಸಾಗಿದ ಪ್ರತಿಭಟನಕಾರರು, ಹರ್ಷ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಪಿಎಫ್‌ಐ, ಎಸ್‌ಡಿಪಿ ನಿಷೇಧಿಸಲು ಆಗ್ರಹ: ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು, ಹಿಜಾಬ್‌ ಮತ್ತು ಹರ್ಷ ಹತ್ಯೆ ‌ಪ್ರಕರಣಗಳಲ್ಲಿ ಒಂದೇ ಸಿದ್ದಾಂತದ ಸಂಘಟನೆಗಳ ಕೈವಾಡವಿದೆ. ಆದ್ದರಿಂದ ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ), ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌ಡಿಪಿಐ)ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು. ಹರ್ಷ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಎನ್‌ಐಎಗೆ ವಹಿಸಬೇಕು. ಇಲ್ಲವಾದರೆ ಹಿಂದೂ ಧರ್ಮಿಯರ ಸ್ವಯಂ ರಕ್ಷಣೆಗಾಗಿ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.

ADVERTISEMENT

‘ಇಂಚಿಂಚಾಗಿ ಕಡಿಯುತ್ತೇವೆ’: ವಿಜಯಪುರ ನಗರದಲ್ಲಿ ಪ್ರತಿಭಟನೆ ವೇಳೆ ಮಾತನಾಡಿದ ಎಬಿವಿಪಿ ನಗರ ಪ್ರಮುಖರಾದ ಪೂಜಾ ವೀರಶೆಟ್ಟಿ ಅವರು ‘ಭಾರತವನ್ನು ಹಿಜಾಬ್‌ಮಯ ಮಾಡಲು ಬಂದರೆ ಛತ್ರಪತಿ ಶಿವಾಜಿ ಕೈಯಲ್ಲಿರುವ ಖಡ್ಗದಿಂದ ಇಂಚಾಗಿ ಕಡಿಯುತ್ತೇವೆ’ ಎಂದರು.

‘ಆರೋಪಿಗಳ ಬಂಧನವಾದರೆ ಸಾಲದು, ಅವರಿಗೆ ತಕ್ಕ ಶಿಕ್ಷೆಯಾಗಬೇಕು. ನಿಮ್ಮ ಕೈಯಲ್ಲಿ ಆಗದಿದ್ದರೆ ನಮ್ಮ ಕೈಗೆ ಒಂದು ತಾಸು ಅಧಿಕಾರ ಕೊಟ್ಟು ನೋಡಿ, ಮಾಡಿ ತೋರಿಸುತ್ತೇವೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರಕ್ಕೆ ಒತ್ತಾಯ: ಕಲಬುರಗಿಯ ಸೂಪರ್‌ ಮಾರ್ಕೆಟ್‌ನ ಚೌಕದಿಂದ ಜಗತ್‌ ವೃತ್ತದವರೆಗೆ ಮೆರವಣಿಗೆ ನಡೆಸಿದ ಸಹಸ್ರಾರು ಕಾರ್ಯಕರ್ತರು, ಬೃಹತ್ ಗಾತ್ರದ ಭಗವಾ ಧ್ವಜವನ್ನು ಹಿಡಿದು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ಸರ್ಕಾರ ಕೂಡಲೇ ಮೃತ ಯುವಕನ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಿಂದಾಗಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರದಲ್ಲಿ ವ್ಯತ್ಯಯವಾಯಿತು.

ಬೆಂಗಳೂರು, ರಾಮನಗರ, ಹೊಸಪೇಟೆ, ಮಡಿಕೇರಿ, ಚಿತ್ರದುರ್ಗ, ಬೀದರ್‌ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆಗಳ ನಡೆದಿವೆ.

ಸರ್ಕಾರದ ವಿರುದ್ಧ ಘೋಷಣೆ

ಮೈಸೂರು: ಇಲ್ಲಿನ ಚಿಕ್ಕಗಡಿಯಾರದ ಆವರಣದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಶಾಸಕ ಎಲ್.ನಾಗೇಂದ್ರ ಅವರ ವಿರುದ್ಧವೇ ಪ್ರತಿಭಟನಕಾರರು ಧಿಕ್ಕಾರ ಕೂಗಿದರು.

ಶಾಸಕರು ಮಾತನಾಡುವಾಗ ಪ್ರತಿಭಟನಕಾರರ ಒಂದು ಗುಂಪು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿತು. ‘ಬಿಜೆಪಿ ಸರ್ಕಾರ ಇರುವಾಗಲೇ ಹಿಂದೂಗಳ ಕೊಲೆ ನಡೆಯುತ್ತಿದೆ. ಅದನ್ನು ತಡೆಯಲು ಸರ್ಕಾರ ಸಂಪೂರ್ಣ ವಿಫಲವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿತು. ‘ಆರೋಪಿಗಳನ್ನು ಎನ್‌ಕೌಂಟರ್ ಮಾಡಬೇಕು, ಇಂತಹ ಕೊಲೆ ನಡೆಯದಂತೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಹರ್ಷ ಕೊಲೆ ಹೊಣೆ ಸರ್ಕಾರದ್ದೇ’

ಮೈಸೂರು: ‘ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆಯ ಹೊಣೆಯನ್ನು ಸರ್ಕಾರವೇ ಹೊರಬೇಕು. ಪ್ರಕರಣ ಕುರಿತು ಸಮಗ್ರ ತನಿಖೆ ನಡೆಯಬೇಕು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಆಗ್ರಹಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಆರಗ ಜ್ಞಾನೇಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಅವರ ತವರು ಜಿಲ್ಲೆಯಲ್ಲೇ ಹೀಗಾದರೆ ಉಳಿದ ಜಿಲ್ಲೆಗಳ ಸ್ಥಿತಿ ಹೇಗಿರಬಹುದು?’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.