ನಾಗಮೋಹನ್ ದಾಸ್
ಬೆಂಗಳೂರು: ‘ರಾಜ್ಯದಲ್ಲಿ ಬಂಜಾರ ಸಮುದಾಯದ ಸುಮಾರು 27 ಲಕ್ಷ ಮಂದಿ ಇದ್ದು, ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗದ ವರದಿಯು ಬಂಜಾರ ಸಮುದಾಯದ 14.05 ಲಕ್ಷ ಜನರಷ್ಟೇ ಇದ್ದಾರೆ ಎಂದು ಕಡಿಮೆ ತೋರಿಸಿದೆ’ ಎಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘವು ಹೇಳಿದೆ.
ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಿ.ರಾಮಾನಾಯಕ್ ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿದ್ದು, ‘ಆಯೋಗದ ವರದಿಯಲ್ಲಿ ನಮ್ಮ ಸಮುದಾಯದ ಜನಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ತೋರಿಸಿರುವುದು ಅತ್ಯಂತ ಕಳವಳಕಾರಿ ಬೆಳವಣಿಗೆ’ ಎಂದಿದ್ದಾರೆ.
‘ಬಂಜಾರರು ಗ್ರಾಮಗಳಿಂದ ದೂರದಲ್ಲಿರುವ ತಾಂಡಾಗಳಲ್ಲಿ ವಾಸಿಸುತ್ತಾರೆ. ರಾಜ್ಯದಲ್ಲಿ ಇಂತಹ 3,384 ತಾಂಡಾಗಳು ಇವೆ ಎಂಬುದನ್ನು ಸರ್ಕಾರದ ಈ ಹಿಂದಿನ ಹಲವು ಸಮೀಕ್ಷೆಗಳು ದಾಖಲಿಸಿವೆ’ ಎಂದು ಅವರು ವಿವರಿಸಿದ್ದಾರೆ.
‘50 ಕುಟುಂಬಗಳಷ್ಟೇ ಇರುವ ತಾಂಡಾಗಳಿಂದ ಆರಂಭವಾಗಿ 4,000 ಕುಟುಂಬಗಳು ನೆಲಸಿರುವಂತಹ ದೊಡ್ಡ ತಾಂಡಾಗಳೂ ರಾಜ್ಯದಲ್ಲಿವೆ. ಹೀಗೆ, ಪ್ರತಿ ತಾಂಡಾಗೆ 200 ಕುಟುಂಬಗಳನ್ನು ಸರಾಸರಿ ಲೆಕ್ಕ ಹಾಕಿದರೂ 6.76 ಲಕ್ಷ ಕುಟುಂಬಗಳು ಇವೆ. ಒಂದು ಕುಟುಂಬಕ್ಕೆ ನಾಲ್ಕು ಜನರಂತೆ ಸಮುದಾಯದ ಒಟ್ಟು ಜನಸಂಖ್ಯೆ 27.07 ಲಕ್ಷವಾಗುತ್ತದೆ’ ಎಂದಿದ್ದಾರೆ.
‘ದೋಷಪೂರಿತ ಅಂಕಿಅಂಶಗಳನ್ನು ಒಳಗೊಂಡ ಈ ವರದಿಯನ್ನು ಸರಿಪಡಿಸದೆಯೇ ಸ್ವೀಕರಿಸಿದರೆ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯ ಎಲ್ಲದರಲ್ಲೂ ಬಂಜಾರ ಸಮುದಾಯಕ್ಕೆ ಅನ್ಯಾಯವಾಗುತ್ತದೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.