ADVERTISEMENT

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಪ್ರತಾಪ ಸಿಂಹ ಆರೋಪ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2025, 6:29 IST
Last Updated 27 ಆಗಸ್ಟ್ 2025, 6:29 IST
   

ಮೈಸೂರು: ‌ನಮ್ಮ‌ ಆಚಾರ, ವಿಚಾರ ಹಾಗೂ ಸಂಸ್ಕೃತಿಯನ್ನು ಒಡೆದು ಹಾಕಲು ಘಜ್ನಿ, ಮೊಗಲರು ಯತ್ನಿಸಿದರು. ಇದೇ ರೀತಿ ನಮ್ಮ ನಂಬಿಕೆಯನ್ನು ಸಾಹಿತಿ ಬಾನು ಮುಷ್ತಾಕ್ ಒಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.

ಇಲ್ಲಿ ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನ ಸಾಹಿತ್ಯ ಭಾಷಣದಲ್ಲಿ ಅವರ ಭಾಷಣ ಏನಿತ್ತು? ಮುಸ್ಲಿಮರು ಕನ್ನಡ ಕಲಿಯಲು ಭುವನೇಶ್ವರಿ ತಾಯಿಯ ಮೂರ್ತಿ ಅಡ್ಡಿಯಾಯಿತು ಎಂದು ಅವರು ಹೇಳಿದ್ದಾರೆ. ಭುವನೇಶ್ವರಿಗೆ ಅರಿಸಿನ-ಕುಂಕುಮ ಇಟ್ಟಿದ್ದರಿಂದ ಮುಸ್ಲಿಮರು ಕನ್ನಡ ಕಲಿಯಲು ಆಗಿಲ್ಲ ಎಂದು ಹೇಳಿದ್ದು ಸತ್ಯ ತಾನೇ? ಎಂದು ಕೇಳಿದರು.

ಕನ್ನಡವನ್ನು ಭುವನೇಶ್ವರಿ ಆಗಿ ಒಪ್ಪದ ಬಾನು ಮುಷ್ತಾಕ್ ನಾಡದೇವಿ ರೂಪದಲ್ಲಿನ ಚಾಮುಂಡಿಯನ್ನು ಒಪ್ಪುತ್ತಾರಾ? ಅರಿಸಿನ ಕುಂಕುಮದ ಬಗ್ಗೆ ಅವರಿಗೆ ತಕಾರರು - ಕಿರಿಕಿರಿ ಏಕಿದೆ? ಹಿಂದೂಗಳ ಮನೆಗೆ ಯಾರೇ ಸುಮಂಗಲಿ ಹೋದರೂ‌ ಅರಿಸಿನ- ಕುಂಕುಮ ಕೊಡುತ್ತಾರೆ. ದೇವಸ್ಥಾನಕ್ಕೆ ಹೋದರೆ ಕುಂಕುಮವನ್ನು ಪ್ರಸಾದವಾಗಿ ಕೊಡುತ್ತಾರೆ. ಇಂತಹ ಕುಂಕುಮವೇ ಬಾನು ಮುಷ್ತಾಕ್ ಅವರಿಗೆ ಕಿರಿಕಿರಿ ಉಂಟು ಮಾಡಿದೆ. ಅರಿಸಿನ-ಕುಂಕುಮದ ಬಗ್ಗೆ ಅವರಿಗೆ ದ್ವೇಷದ ಭಾವನೆ ಇದೆ ಎಂದು ದೂರಿದರು.

ADVERTISEMENT

ಬಾನು ಅವರೇ ನೀವು ನಂಬಿರುವ ನಿಮ್ಮ‌ ಅಲ್ಲಾ ನಿಮ್ಮನ್ನು ಮಸೀದಿಗೆ ಕರೆಸಿಕೊಳ್ಳುವುದಿಲ್ಲ. ನಮ್ಮ ದೇವರು ಹೇಗೆ ಕರೆಸಿಕೊಳ್ಳುತ್ತಾರೆ? ತಮಿಳುನಾಡಿನಲ್ಲಿ ಮುಸ್ಲಿಮರಿಗೆ ಮಾತೃ ಭಾಷೆ ತಮಿಳು. ಕರ್ನಾಟಕದಲ್ಲೇಕೆ ಮುಸ್ಲಿಮರ ಮಾತೃ ಭಾಷೆ ಕನ್ನಡ ಆಗುವುದಿಲ್ಲ ಎಂದು ಕೇಳಿದರು.

ಬಾನು ಮುಷ್ತಾಕ್ ಮುಸ್ಲಿಂ ಅನ್ನುವ ಕಾರಣಕ್ಕೆ ನಾನು ವಿರೋಧಿಸುತ್ತಿಲ್ಲ. ಮುಸ್ಲಿಮರ ಬಗ್ಗೆಯೂ ನಮಗೇನೂ ಕೆಟ್ಟ ಭಾವನೆಗಳಿಲ್ಲ.‌ ಟಿಪ್ಪು ಜಯಂತಿ ಮಾಡಿ ಎಂದು ಮುಸ್ಲಿಮರು ಕೇಳಿರಲಿಲ್ಲ. ಸಿದ್ದರಾಮಯ್ಯ ಮುಸ್ಲಿಮರ ಓಲೈಕೆಗಾಗಿ ಟಿಪ್ಪು ಜಯಂತಿ ಮಾಡಿದರು. ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯಿರಿ ಎಂದು ಯಾವ ಮುಸ್ಲಿಮರೂ ಕೇಳಿರಲಿಲ್ಲ. ಅದರೂ ಸಿದ್ದರಾಮಯ್ಯ ಮಾಡಿದರು ಎಂದು ಟೀಕಿಸಿದರು.

ತಲೆ ಮಾಸಿದ ಕಾಂಗ್ರೆಸ್ ನಾಯಕರು ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಾನು ಆಯ್ಕೆಯನ್ನು ಸಂಸದ ಯದುವೀರ್ ಸ್ವಾಗತಿಸಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರತಾಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು ಏನು ಮಾತನಾಡುತ್ತಾರೆಯೋ ಅದೇ ನಮ್ಮ ಮಾತು. ಅದೇ ನಮ್ಮ ನಿಲುವು. ನಮ್ಮ ಪಕ್ಷದ ನಿಲುವನ್ನೇ ನಾನೂ ಹೇಳಿದ್ದೇನೆ. ಭುವನೇಶ್ವರಿ ಬಗ್ಗೆ ಅವಮಾನಕಾರಿಯಾಗಿ ಮಾತನಾಡಿದ ಬಾನು ಮುಷ್ತಾಕ್ ದಸರಾ ಉದ್ಘಾಟಿಸಬೇಕಾ? ಮೈಸೂರಿನ ಜನರೇ ಹೇಳಲಿ ಎಂದರು.

ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ, ಶಿವನ ಕಪಾಲಿ ಬೆಟ್ಟವನ್ನೇ ಯೇಸು ಬೆಟ್ಟ ಮಾಡಲು ಹೊರಟ ಶಿವಕುಮಾರ್ ಅವರಿಂದ ನಮಗೆ ಧರ್ಮದ ಪಾಠ ಬೇಡ. ಅನ್ಯ ಧರ್ಮದವರ ಓಲೈಕೆಗಾಗಿ ಬ್ರದರ್ಸ್ ಎಂದು ಕರೆಯುವ ಅವರು ಧರ್ಮದ ಬಗ್ಗೆ ತಿಳಿವಳಿಕೆ ಹೇಳುವುದು ಬೇಡ‌ ಎಂದು ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಅವರ ತಂತ್ರ ಕಾಂಗ್ರೆಸ್ ಮೂರ್ಖರಿಗೆ ಅರ್ಥ ಆಗುತ್ತಿಲ್ಲ. ಮುಸ್ಲಿಮರನ್ನು ಬೆನ್ನ ಹಿಂದೆ ಇಟ್ಟುಕೊಳ್ಳಲು ಬಾನು ಮುಷ್ತಾಕ್ ಅವರನ್ನು ಸಿದ್ದರಾಮಯ್ಯ ದಸರಾ ಉದ್ಘಾಟನೆಗೆ ಕರೆದಿದ್ದಾರೆ. ನಾಳೆ ಸಿಎಂ ಕುರ್ಚಿಗೆ ಕಂಟಕ ಬಂದಾಗ ಮುಸ್ಲಿಂ ಶಕ್ತಿಯನ್ನು ಹಿಂದೆ ನಿಲ್ಲಿಸಿಕೊಳ್ಳಲು ಸಿದ್ದರಾಮಯ್ಯ ಎಣೆದಿರುವ ತಂತ್ರ ಇದು. ಕಾಂಗ್ರೆಸ್ ಬ್ಲ್ಯಾಕ್ ಮೇಲ್ ಮಾಡಲು ಸಿದ್ದರಾಮಯ್ಯ ಮಾಡಿರುವ ಪ್ಲಾನ್ ಕಾಂಗ್ರೆಸ್‌ನವರಿಗೆ ಅರ್ಥ ಆಗುತ್ತಿಲ್ಲ ಎಂದು ದೂರಿದರು.

ಸದನದಲ್ಲಿ ಆರ್‌ಎಸ್‌ಎಸ್ ಗೀತೆ ಹೇಳಿದ್ದಕ್ಕೆ ಕ್ಷಮೆ ಕೇಳುವ ಪರಿಸ್ಥಿತಿ ಕೆಪಿಸಿಸಿ ಅಧ್ಯಕ್ಷರಿಗೆ ಬಂದಿದೆ ಎಂದರೆ, ಕಾಂಗ್ರೆಸ್‌ಗೆ ಮಾತೃಭೂಮಿಗೆ ಎಷ್ಟು ಗೌರವವಿದೆ ಎನ್ನುವುದನ್ನು ತೋರಿಸುತ್ತದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.