
ಬೆಂಗಳೂರು: ಭಾರತ ಇಂದು ಮೂಲಭೂತವಾದದ ಬಿಕ್ಕಟ್ಟು ಎದುರಿಸುತ್ತಿದೆ. ಆಡಳಿತ ನಡೆಸುತ್ತಿರುವ ಸರ್ಕಾರಗಳು ದ್ವೇಷಗಳನ್ನು ದಾಟದ ಕಾರಣ ಮಾನವತಾವಾದ, ಸೌಹಾರ್ದ ಮರೆಯಾಗುತ್ತಿವೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
ಜನಪ್ರಕಾಶನ, ಸೌಹಾರ್ದ ಕರ್ನಾಟಕ ಶನಿವಾರ ಆಯೋಜಿಸಿದ್ದ ತಮ್ಮ ಕೃತಿ ‘ಸೌಹಾರ್ದ ಭಾರತ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪಕ್ಷಪಾತ, ಪೂರ್ವಗ್ರಹ, ಅಸಮಾನತೆ, ಮತೀಯತೆ ಮಿತಿ ಮೀರುತ್ತಿದೆ. ಅದಕ್ಕಾಗಿ ಸೌಹಾರ್ದ ಮತ್ತು ಸಮಾನತೆ ಭಾರತದ ಎರಡು ಕಣ್ಣುಗಳು ಎಂದು ಭಾವಿಸಿ ಸಮಾಜದ ಸ್ವಾಸ್ಥ್ಯ ಕಾಪಾಡಬೇಕಾದುದು ಎಲ್ಲರ ಹೊಣೆಗಾರಿಕೆ. ಸೌಹಾರ್ದ ಮತ್ತು ಸಮಾನತೆಯನ್ನು ಏಕಕಾಲದಲ್ಲಿ ಪ್ರತಿಪಾದಿಸಬೇಕು. ಇಂತಹ ನಡೆ ವೇದಿಕೆಯ ಮೇಲಿನ ವೀರಾವೇಶಕ್ಕೆ ಸೀಮಿತವಾಗದೆ, ಜನರ ಬಳಿಗೆ ವಿಚಾರಗಳು ತಲುಪಬೇಕು. ಜನಾಕ್ಷರ ಆಂದೋಲನವಾಗಬೇಕು’ ಎಂದು ಅವರು ಪ್ರತಿಪಾದಿಸಿದರು.
ಸಾಹಿತಿ ಎಚ್.ಎಲ್.ಪುಷ್ಪಾ ಮಾತನಾಡಿ, ‘ಭಾರತದ ಸಂವಿಧಾನ ಇಂದು ಅಪಾಯಕ್ಕೆ ಸಿಲುಕಿದೆ. ಸಹಿಷ್ಣುತೆ, ಸೌಹಾರ್ದ, ಪಂಥೀಯವಾದ ಹೆಚ್ಚು ಚರ್ಚೆಯಾಗುತ್ತಿವೆ. ಎಂತಹ ಭಾರತದಲ್ಲಿ ಜೀವಿಸುತ್ತಿದ್ದೇವೆ ಎಂದು ಕಳವಳವಾಗುತ್ತಿದೆ. ಬಳ್ಳಾರಿಯಂತಹ ಘಟನೆಗಳು ಆಘಾತ ಮೂಡಿಸಿವೆ’ ಎಂದರು.
ಬರಗೂರು ಅವರು ವಿವಿಧ ಸಮಯದಲ್ಲಿ ಬರೆದ ‘ಸ್ವಾಮಿ ವಿವೇಕಾನಂದ: ಸೌಹಾರ್ದ ಸಂಕೇತ’ ‘ದ್ವೇಷ ಬಿಟ್ಟು; ದೇಶ ಕಟ್ಟು’ ‘ಒಂದೇ ದಿನ ಹುತಾತ್ಮರಾದ ಹಿಂದೂ–ಮುಸ್ಲಿಂ ದೇಶ ಭಕ್ತರು’ ಗಾಂಧೀಜಿ: ಪರಧರ್ಮ ಸಹಿಷ್ಣುತೆಯ ಪ್ರತೀಕ’ ‘ಡಾ.ಅಂಬೇಡ್ಕರ್ ದೃಷ್ಟಿಯಲ್ಲಿ ಸಮಾನತೆ ಮತ್ತು ಸೌಹಾರ್ದ’ ‘ಮನುಷ್ಯರು ಬೇಕಾಗಿದ್ದಾರೆ ಹುಡುಕೋಣ ಬನ್ನಿ’ ‘ಮತೀಯತ್ವಕ್ಕೆ ಕನ್ನಡದಲ್ಲಿ ಉತ್ತರ’ ‘ತಾಯ್ತನವನ್ನು ಕಳೆದುಕೊಳ್ಳುತ್ತಿರುವ ಸಮಾಜ’ ಮತ್ತು ಧಾರ್ಮಿಕ–ಸೌಹಾರ್ದತೆ’ ಎಂಬ ಒಂಬತ್ತು ಲೇಖನಗಳು ಸೌಹಾರ್ದ ಭಾರತ ಕೃತಿಯಲ್ಲಿವೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಕುಲಪತಿ ಬಿ.ರಮೇಶ್, ದಲಿತ ಮುಖಂಡ ಮಾವಳ್ಳಿ ಶಂಕರ್, ಮೋಹನ್ ರಾಜ್, ಮಲ್ಲಿಗೆ, ಜ್ಯೋತಿ ಅನಂತ ಸುಬ್ಬರಾವ್, ರಾಜಶೇಖರ ಮೂರ್ತಿ ಉಪಸ್ಥಿತರಿದ್ದರು.
'ಭಗತ್ ಸಿಂಗ್ ಅವರಿಗೂ ಬಲವಂತವಾಗಿ ಜನಿವಾರ ಹಾಕುವ ಕೆಲಸ ನಡೆದಿದೆ. ಸ್ವಾಮಿ ವಿವೇಕಾನಂದ ಅವರನ್ನು ಕೇಶವ ಕೃಪದಲ್ಲಿ ಇರಿಸುವ ಕಾರ್ಯ ನಡೆದಿದೆ. ಕಾಂಗ್ರೆಸ್ ಒಳಗೆ ಇರುವ ಎಲ್ಲರೂ ಜಾತ್ಯಾತೀತರು ಎಂದು ಹೇಳುವ ಧೈರ್ಯವೂ ಇಲ್ಲವಾಗಿದೆ’ ಎಂದು ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಹೇಳಿದರು. ಯಾವುದೇ ಪಕ್ಷದ ಪ್ರಣಾಳಿಕೆಯಲ್ಲಿ ದೇಶವನ್ನು ಸುಡುತ್ತೇವೆ. ಜಗಳ ಹಚ್ಚುತ್ತೇವೆ ಎಂದು ಹೇಳಿಲ್ಲ. ಆದರೂ ಈಗ ಬೆಂಕಿಹಚ್ಚುವ ಕೆಲಸ ನಡೆಯುತ್ತಿದೆ. ಚುನಾವಣಾ ಆಯೋಗ ಸುಪ್ರೀಂಕೋರ್ಟ್ ಮೇಲಿನ ವಿಶ್ವಾಸವೂ ಕಡಿಮೆಯಾಗುತ್ತಿದೆ ಹೋಗಿದೆ ಎಂದರು. ‘ಸಮಾಜಕ್ಕೆ ಕೊಡುಗೆ ನೀಡಿದ ಅರಸು ಅವರಿಗೂ ಅನ್ಯಾಯ ಮಾಡಲಾಯಿತು. ಸುಳ್ಳನ್ನು ಸತ್ಯ ಎಂದು ಹೇಳುವವರಿಗೆ ಸಮಾಜದಲ್ಲಿ ಹೆಚ್ಚಿನ ಮನ್ನಣೆ ಸಿಗುತ್ತಿದೆ. ರಾಜಕೀಯ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ಮಾಯವಾಗಿದೆ. ಮೃಗೀಯ ಮನಸುಗಳಿಗೆ ಸ್ಥಾನ ಮಾನ ಸಿಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.