ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಬಸವರಾಜ ಪಾಟೀಲ ಯತ್ನಾಳ
ಪ್ರಜಾವಾಣಿ ಚಿತ್ರ
ಕೊಪ್ಪಳ: ಕೋವಿಡ್ ಹೆಸರಿನಲ್ಲಿ ಹಿಂದಿನ ಬಿಜೆಪಿ ಸರ್ಕಾರ ₹ 40 ಸಾವಿರ ಕೋಟಿ ಅಕ್ರಮ ನಡೆಸಿದೆ ಎಂದು ಆರೋಪ ಮಾಡಿರುವ ಆ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತನಿಖಾ ಆಯೋಗಕ್ಕೆ ಈ ಕುರಿತು ದಾಖಲೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಿಂಧನೂರಿಗೆ ತೆರಳುವ ಮೊದಲು ಇಲ್ಲಿಗೆ ಸಮೀಪದ ಬಸಾಪುರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಸಾಕಷ್ಟು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಯತ್ನಾಳ ನೇರ ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಹಗರಣ ಕುರಿತು ತನಿಖೆಗಾಗಿ ಆಯೋಗ ರಚಿಸಿದ್ದೇವೆ. ಆರೋಪ ಮಾಡಿದವರು ಆಯೋಗಕ್ಕೆ ದಾಖಲೆಗಳನ್ನು ಒದಗಿಸಬೇಕು ಎಂದರು.
ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರನ್ನು ಸಿಎಂ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಿದ್ದಕ್ಕೆ ಎಚ್.ಡಿ.ಕುಮಾರಸ್ವಾಮಿ 'ರಾಯರಡ್ಡಿ ಆರ್ಥಿಕ ತಜ್ಞರೇ' ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಕೇಳಲಾದ ಪ್ರಶ್ನೆಗೆ 'ರಾಯರಡ್ಡಿ ಆರ್ಥಿಕವಾಗಿ ಸಾಕಷ್ಟು ವಿಷಯ ತಿಳಿದುಕೊಂಡಿದ್ದಾರೆ. ಹಾಗಾಗಿ ಆರ್ಥಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಯಡಿಯೂರಪ್ಪ ಸಿಎಂ ಇದ್ದಾಗಲೂ ಆರ್ಥಿಕ ಸಲಹೆಗಾರರನ್ನು ನೇಮಿಸಿಕೊಂಡಿದ್ದರು. ಆವಾಗ ಯಾರೂ ಕೇಳಲಿಲ್ಲ' ಎಂದರು.
ಬಳಿಕ ಕುಮಾರಸ್ವಾಮಿ ಆರೋಪಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದರು.
ಡಿಸಿ ವಿರುದ್ಧ ಗರಂ: ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹ ಲಕ್ಷ್ಮೀಯ ಕೆಲ ಫಲಾನುಭವಿಗಳಿಗೆ ಎರಡ್ಮೂರು ತಿಂಗಳಿಂದ ಹಣ ಬಂದಿಲ್ಲ ಎಂದು ಮಾಧ್ಯಮದವರು ಪ್ರಶ್ನೆ ಕೇಳಿದರು.
ಇದಕ್ಕೆ ಪಕ್ಕದಲ್ಲಿಯೇ ಇದ್ದ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರನ್ನು ಪ್ರಶ್ನಿಸಿದಾಗ ಕೆಲವರಿಗೆ ಜಮೆಯಾಗಿದೆ, ಇನ್ನೂ ಕೆಲವರಿಗೆ ಆಗುತ್ತಿದೆ ಎಂದರು. ಇದರಿಂದ ಮುಖ್ಯಮಂತ್ರಿ ಗರಂ ಆದರು.
ಹಂತ ಹಂತವಾಗಿ ಹಣ ಬಿಡುಗಡೆ ಮಾಡಲಾಗುತ್ತಿದೆ. ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜೊತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.