ADVERTISEMENT

ಬಿಎಸ್‌ವೈ, ವಿಜಯೇಂದ್ರ ಜೈಲಿಗೆ ಹೋಗ್ತಾರೆ: ಬಸನಗೌಡ ಪಾಟೀಲ ಯತ್ನಾಳ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 2:00 IST
Last Updated 17 ಜೂನ್ 2022, 2:00 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಬೇಲೂರು (ಹಾವೇರಿ ): ‘ಬಿ.ಎಸ್‌.ಯಡಿಯೂರಪ್ಪನ ಮಗ ವಿಜಯೇಂದ್ರ ದುಬೈಗೆ ಏಕೆ ಪದೇ ಪದೇ ಹೋಗುತ್ತಾರೆ? ಎಷ್ಟು ಆಸ್ತಿ ಮಾಡಿದ್ದೀರಿ, ಎಷ್ಟು ದುಡ್ಡು ಹೊಡೆದಿದ್ದೀರಿ, ಮಾರಿಷಸ್‌ನಲ್ಲಿ ಎಷ್ಟು ರೆಸಾರ್ಟ್‌ ಮಾಡಿದ್ದೀರಿ ಎಲ್ಲ ಗೊತ್ತಿದೆ. ಅವರಿಗೂ ಕಾಲ ಬರುತ್ತದೆ. ಅವರೂ ಜೈಲಿಗೆ ಹೋಗುತ್ತಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ರಾಣೆಬೆನ್ನೂರು ತಾಲ್ಲೂಕು ಬೇಲೂರು ಗ್ರಾಮದಲ್ಲಿ ಗುರುವಾರ ರಾತ್ರಿ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ನಿಮಗೆ ಭವಿಷ್ಯ ಹೇಳ್ತಿದ್ದೀನಿ ಕೇಳಿ. ಬರಿ ಸೋನಿಯಾ ಗಾಂದಿ, ರಾಹುಲ್ ಗಾಂಧಿ ಮೇಲೆ ಅಷ್ಟೇ ರೈಡ್ ಮಾಡಲ್ಲ. ಬಿಜೆಪಿ ನಾಯಕರ ಮೇಲೂ ರೈಡ್ ಮಾಡಿದ್ದೆವು. ಹಿಂದೆ, ಉಮೇಶ್ ಅಂತ ಒಬ್ಬ ಕಂಡಕ್ಟರ್ ಯಡಿಯೂರಪ್ಪ ಅವರ ಪಿ.ಎ ಆಗಿದ್ದ. 4 ಹಣ ಎಣಿಕೆ ಯಂತ್ರಗಳನ್ನಿಟ್ಟಿದ್ದ. ಅವನ ಮನೆಯಲ್ಲಿ 10 ಸಾವಿರ ಕೋಟಿ ಸಿಕ್ಕಿತ್ತು. ಅದು ಯಾರ ದುಡ್ಡು? ಆ ದುಡ್ಡು ವಿಜಯೇಂದ್ರನಿಗೆ ಸೇರಿದ್ದಲ್ಲವಾ? ಎಂದು ಗಂಭೀರ ಆರೋಪ ಮಾಡಿದರು.

ಲೂಟಿ ಮಾಡಿದ್ದು ಖರೆ:

ADVERTISEMENT

ಕಾಂಗ್ರೆಸ್‌ ನಾಯಕರು ದೇಶ ಲೂಟಿ ಮಾಡಿದ್ದು ಖರೆ ಐತಿ. ಅದು ಜಗಜ್ಜಾಹೀರಾಗಿದೆ. ಸೋನಿಯಾ ಮತ್ತು ರಾಹುಲ್‌ಗಾಂಧಿ ಇಟಲಿಯಲ್ಲಿ ಅಕ್ರಮ ಆಸ್ತಿ ಮಾಡಿದ್ದಾರೆ. ಇಂಗ್ಲೆಂಡ್ ಮಹಾರಾಣಿ ಬಳಿಕ ಜಗತ್ತಿನ ಶ್ರೀಮಂತರೆಂದರೆ ಸೋನಿಯಾ ಗಾಂಧಿ. ಸೋನಿಯಾ ಗಾಂಧಿ ಅವರಪ್ಪ ಏನು ಮಾಡ್ತಿದ್ದ? ಅವರ ಅಪ್ಪ ಇಟಲಿಯಲ್ಲಿ ಮೂರ್ತಿ ಮಾರುತ್ತಿದ್ದ. ಬೇಲೂರು, ಹಳೇಬೀಡಿನಲ್ಲಿರುವ ರೀತಿಯ ಮೂರ್ತಿಗಳನ್ನು ಇಲ್ಲಿಂದ ತೆಗೆದುಕೊಂಡು ಹೋಗಿ ಇಟಲಿಯಲ್ಲಿ ಮಾರುತ್ತಿದ್ದ. ಇಂಥ ಭ್ರಷ್ಟ ಕುಟುಂಬದ ಮೇಲೆ ರೈಡ್ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ಕುಟುಂಬ ರಾಜಕಾರಕ್ಕೆ ಬ್ರೇಕ್‌:

ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ, ಕುಟುಂಬ ರಾಜಕಾರಣವನ್ನು ಬಂದ್ ಮಾಡುತ್ತಾರೆ. ಬಿಜೆಪಿಯಲ್ಲಿ ಈಗಾಗಲೇ ನಾಲ್ಕು ಮಂದಿ ಜಾಕೆಟ್ ಹೊಲಿಸಿಕೊಂಡಿದ್ದಾರೆ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಅಂತ ಆಗಿದೆ. ಇನ್ಯಾರಾದರೂ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳು ಅಂತ ಅಂದರೆ ಕೇಳಲ್ಲ. ರಾಜಾಹುಲಿ, ಬೆಟ್ಟದ ಹುಲಿ, ಅವನಿಂದಲೇ ಬಿಜೆಪಿ ಉದ್ಧಾರ ಆಯ್ತು ಅವೆಲ್ಲ ಸುಳ್ಳು ಎಂದು ಬಿಎಸ್‌ವೈ ಅವರನ್ನು ಟೀಕಿಸಿದರು.

10 ಕೋಟಿ ವ್ಯವಹಾರ:

ನಮ್ಮ ಕೂಡಲ ಸಂಗಮದ ಸ್ವಾಮಿಗಳು ಮಠಕ್ಕಾಗಿ ಹಣ ತಗೊಂಡು ಕೂತವರಲ್ಲ. ಕೆಲ ಸ್ವಾಮಿಗಳು ಮಠಕ್ಕೆ ₹10 ಕೋಟಿ ತಗೊಂಡು ಗಪ್ ಕೂತರು. ಅಸೆಂಬ್ಲಿಯೊಳಗೆ ಈ ವಿಷಯದ ಬಗ್ಗೆ ಧ್ವನಿ ಎತ್ತುತ್ತೇನೆ. ಪಂಚಮಸಾಲಿಗಳನ್ನು ₹10 ಕೋಟಿ ಕೊಟ್ಟು ಖರೀದಿ ಮಾಡಿದ್ದೇವೆ ಅನ್ಕೊಂಡಿದ್ರು ವಿಜಯೇಂದ್ರ ಯಡಿಯೂರಪ್ಪ. ಸದ್ಯದಲ್ಲೇ 10 ಕೋಟಿ ವ್ಯವಹಾರವೂ ಆಚೆ ಬರುತ್ತದೆ ಎಂದು ಹೊಸ ಬಾಂಬ್‌ ಸಿಡಿಸಿದರು.

ಪುಗಸಟ್ಟೆ ಕ್ರೆಡಿಟ್‌ ಸಿಗಲ್ಲ:

ಬೊಮ್ಮಾಯಿಯವರೇ ಮೀಸಲಾತಿ ಕೊಡೋದ್ರಲ್ಲಿ ಗಡಿಬಿಡಿ ಮಾಡಬೇಡಿ, ಬಹಳ ಬೇಗ ಕೊಡಬೇಡಿ ಅಂದವರು ಯಾಕೆ ನಿನ್ನೆ ಮನವಿ ಕೊಟ್ಟರು? ಪುಗಸಟ್ಟೆ ಕ್ರೆಡಿಟ್ ಸಿಗಲ್ಲಾರಿ. ಇಲ್ಲಿ ಬಂದು ಓಡಾಡಲಿ ಎಂದು ಹೆಸರು ಹೇಳದೇ ಹರಿಹರ ಪೀಠದ ವಚನಾನಂದ ಸ್ವಾಮೀಜಿ ಬಗ್ಗೆ ಯತ್ನಾಳ ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.