ADVERTISEMENT

Live| ಬಸವರಾಜ ಬೊಮ್ಮಾಯಿ ಸಂಪುಟದ ಮೊದಲ ಸಭೆ ಸಂಜೆ 5ಕ್ಕೆ

ಭಾನುವಾರ ರಾತ್ರಿಯಿಂದಲೇ ನಡೆದಿರುವ ಕರ್ನಾಟಕ ಬಿಜೆಪಿ ಸರ್ಕಾರದ ಸಂಪುಟ ರಚನೆಯ ಕಸರತ್ತು ಮಂಗಳವಾರ ತಡರಾತ್ರಿ ವೇಳೆಗೆ ಪೂರ್ಣಗೊಂಡಿದೆ. ಬಸವರಾಜ ಬೊಮ್ಮಾಯಿ ಸಂಪುಟದ 29 ಮಂದಿ ಹೊಸ ಸಚಿವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕಿರಿಯ ಮಗ ಬಿ.ವೈ. ವಿಜಯೇಂದ್ರಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಆಯಕಟ್ಟಿನ ಖಾತೆಯೇ ಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಪಟ್ಟು ಹಿಡಿದಿದ್ದರು. ಆದರೆ, ಉಪಮುಖ್ಯಮಂತ್ರಿ ಸ್ಥಾನ ಈ ಸಂಪುಟದಲ್ಲಿ ಇರುವುದಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಹಾಗೇ ಈಗಿನ ಪಟ್ಟಿಯಲ್ಲಿ ವಿಜಯೇಂದ್ರ ಅವರ ಹೆಸರೂ ಇಲ್ಲ ಎಂದು ಹೇಳಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭ ಮತ್ತು ಸಂಬಂಧಿತ ರಾಜಕೀಯ ಬೆಳವಣಿಗೆಗಳ ಕ್ಷಣಕ್ಷಣದ ಅಪ್‌ಡೇಟ್ ಇಲ್ಲಿ ಲಭ್ಯ.

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:31 IST
Last Updated 4 ಆಗಸ್ಟ್ 2021, 10:31 IST

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ 29 ಸಚಿವರು ಸೇರ್ಪಡೆಯಾಗಿದ್ದು, ಸಚಿವರ ಜೊತೆ ಮೊದಲ ಸಂಪುಟ ಸಭೆ ಸಂಜೆ 5 ಗಂಟೆಗೆ ನಡೆಯಲಿದೆ.

29 ಸಚಿವರ ಪ್ರಮಾಣವಚನ ಸ್ವೀಕಾರ ಮುಕ್ತಾಯ. ರಾಷ್ಟ್ರಗೀತೆಯೊಂದಿಗೆ ಸಮಾರಂಭಕ್ಕೆ ತೆರೆ.

ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಮುನಿರತ್ನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ

ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ ಸಚಿವರಾಗಿ ದೇವರು, ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ

ಯಲಬುರ್ಗಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ

ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ತಿಪಟೂರು ಕ್ಷೇತ್ರದ ಶಾಸಕ ಬಿ.ಸಿ. ನಾಗೇಶ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ

ಕೆ.ಆರ್. ಪೇಟೆ ಶಾಸಕ ಕೆ.ಸಿ. ನಾರಾಯಣ ಗೌಡ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜು ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಜೊಲ್ಲೆ ಸಚಿವೆಯಾಗಿ ಪ್ರಮಾಣವಚನ ಸ್ವೀಕಾರ

ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಕೆ. ಸುಧಾಕರ್ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಕೆ.ಆರ್. ಪುರ ವಿಧಾನಸಭಾ ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಸಿ. ಪಾಟೀಲ ಅವರು ಸಚಿವರಾಗಿ ರೈತರು ಹಾಗೂ ಜಗಜ್ಯೋತಿ ಬಸವೇಶ್ವರರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಟಿ. ಸೋಮಶೇಖರ್ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಅರಬೈಲ್ ಶಿವರಾಂ ಹೆಬ್ಬಾರ್ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಬೀಳಗಿ ಶಾಸಕ ಮುರುಗೇಶ ಆರ್. ನಿರಾಣಿ ಅವರು ದೇವರು ಮತ್ತು ರೈತರ ಹೆಸರಿನಲ್ಲಿ ರಾಜ್ಯದ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು

ಔರಾದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಗೋಮಾತೆ ಹಾಗೂ ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರತಿಜ್ಞೆಯನ್ನೂ ಮಾಡಿದರು.

ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿ ಪ್ರಮಾಣವಚನ

ವಿಜಯನಗರ ಜಿಲ್ಲೆ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ನೂತನ ಸಚಿವರಾಗಿ ವಿಜಯನಗರ ಪಂಪಾ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ್ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಮಲ್ಲೇಶ್ವರದ ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಶಶಿಕಲಾ ಜೊಲ್ಲೆ ತಲುಪಿದ್ದಾರೆ. ಸಚಿವೆಯಾಗಿ ಅವರು ಪ್ರಮಾಣವಚನ ಸ್ವೀಕರಿಸಲು ನೇರವಾಗಿ ರಾಜಭವನದತ್ತ ಝೀರೋ ಟ್ರಾಫಿಕ್‌ನಲ್ಲಿ ಬಂದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರು ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಶಾಸಕ ಜೆ.ಸಿ. ಮಾಧುಸ್ವಾಮಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಅವರು ಕೂಡ ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ್ ಕತ್ತಿ‌ ಪ್ರಮಾಣವಚನ

ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸೋಮಣ್ಣ ಅವರು ನೂತನ ಸಚಿವರಾಗಿ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು.

ರಾಜಭವನ ಒಳಗೆ ನೂತನ ಸಚಿವರ ಪ್ರತಿಜ್ಞಾ ವಿಧಿ ಆರಂಭವಾಗುತ್ತಿದ್ದಂತೆ ಹೊರಗೆ ಅವರ ಅವರ ಬೆಂಬಲಿಗರು, ಅಭಿಮಾನಿಗಳ ಸಂಭ್ರಮ, ಮುಗಿಲುಮುಟ್ಟಿದೆ.

ಮೊಳಕಾಲ್ಮೂರು ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು ಪ್ರಮಾಣವಚನ ಸ್ವೀಕಾರ

ಮೊದಲಿಗೆ ಹಿರಿಯ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ಆರ್‌. ಅಶೋಕ ಪ್ರಮಾಣ ವಚನ ಸ್ವೀಕಾರ

ಶಿವಮೊಗ್ಗ ನಗರ ಕ್ಷೇತ್ರದ ಶಾಸಕ ಕೆ.ಎಸ್. ಈಶ್ವರಪ್ಪ ಪ್ರಮಾಣವಚನ ಸ್ವೀಕಾರ

ಮುಧೋಳ ಶಾಸಕ ಗೋವಿಂದ ಕಾರಜೋಳ ಸಚಿವನಾಗಿ ಪ್ರಮಾಣ ವಚನ ಸ್ವೀಕಾರ

ವಿಮಾನ ವಿಳಂಬ: ಶಶಿಕಲಾ ಜೊಲ್ಲೆ ಕರೆತರಲು ಸಿಗ್ನಲ್ ಫ್ರೀ ಸಂಚಾರಕ್ಕೆ ವ್ಯವಸ್ಥೆ

ಬೆಂಗಳೂರು: ನೂತನ ಸಚಿವೆ ಶಶಿಕಲಾ ಜೊಲ್ಲೆ ಅವರು ಪ್ರಯಾಣಿಸುತ್ತಿರುವ ವಿಮಾನದ ಸಂಚಾರ ವಿಳಂಬವಾಗಿದೆ. ಈ ಕಾರಣದಿಂದ ಅವರನ್ನು ಪ್ರಮಾಣವಚನಕ್ಕೆ ಕರೆತರಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಕರೆತರಲು ಸಿಗ್ನಲ್ ಫ್ರೀ ಸಂಚಾರದ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಜೊಲ್ಲೆ ಅವರು ಪ್ರಯಾಣಿಸುತ್ತಿರುವ ವಿಮಾನ ಮಧ್ಯಾಹ್ನ 1.30ಕ್ಕೆ ಕೆಐಎ ತಲುಪಬೇಕಿತ್ತು. ಆದರೆ, ತಡವಾಗಿ ತಲುಪುತ್ತಿದೆ. ವಿಮಾನ ನಿಲ್ದಾಣದಿಂದ ರಾಜಭವನದವರೆಗೂ ತಡೆರಹಿತವಾಗಿ ಕರೆತರಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ರಾಜಭವನ ತಲುಪಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಭವನ ತಲುಪಿದ್ದಾರೆ. ನೂತನ ಸಚಿವರಲ್ಲಿ ಬಹುತೇಕರು ರಾಜಭವನಕ್ಕೆ ಬಂದಿದ್ದಾರೆ.

ADVERTISEMENT

ರಾಜಭವನಕ್ಕೆ ಬಂದ ಬಿಎಸ್‌ವೈ

29 ಸಚಿವರ ಪ್ರಮಾಣವಚನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೂ ರಾಜಭವನಕ್ಕೆ ಬಂದಿದ್ದಾರೆ.

ಪ್ರಮಾಣ ವಚನ ಸಮಾರಂಭಕ್ಕೆ ಸಿದ್ಧತೆ

ರಾಜಭವನದ ಸುತ್ತ ಭಾರಿ ಸಂಭ್ರಮ, ಮತ್ತೊಂದೆಡೆ ತೀವ್ರ ಆಕ್ರೋಶ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟಕ್ಕೆ ಸಚಿವರಾಗಿ ಸೇರಲಿರುವ ಶಾಸಕರ ಬೆಂಬಲಿಗರು ರಾಜಭವನದಲ್ಲಿ ಸುತ್ತ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದು, ಜೈಕಾರ ಕೂಗುತ್ತ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಸಚಿವ ಸ್ಥಾನ ವಂಚಿತ ಶಾಸಕರ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ರಾಜಭವನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರಿಂದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ವಿವರ: ರಾಜಭವನದ ಸುತ್ತ ಭಾರಿ ಸಂಭ್ರಮ, ಮತ್ತೊಂದೆಡೆ ತೀವ್ರ ಆಕ್ರೋಶ

ರಾಜಭವನ ಸುತ್ತಮುತ್ತ ವಾಹನಗಳ ದಟ್ಟಣೆ

ಬೆಂಗಳೂರು: ನೂತನ ಸಚಿವರ ಪ್ರಮಾಣ ವಚನ ಸ್ವೀಕಾರಕ್ಕೆ ರಾಜಭವನದಲ್ಲಿ ತಯಾರಿ ನಡೆಸಲಾಗುತ್ತಿದ್ದು, ಮಧ್ಯಾಹ್ನದಿಂದಲೇ ರಾಜಭವನ ರಸ್ತೆಯಲ್ಲಿ ವಾಹನಗಳ ಓಡಾಟ ಭಾಗಶಃ ಬಂದ್ ಮಾಡಲಾಗಿದೆ. ಇದರಿಂದ ವಿಪರೀತ ದಟ್ಟಣೆ ಉಂಟಾಗಿದೆ.

ಇಂದು ಸಂಜೆ ಕಾರ್ಯಕ್ರಮವಿದ್ದು, ಬೆಳಿಗ್ಗೆಯಿಂದಲೇ ಪೊಲೀಸರು ರಾಜಭವನ ಸುತ್ತ ಭದ್ರತೆ ಒದಗಿಸಿದ್ದಾರೆ. ಮಾರ್ಗಗಳ ಬದಲಾವಣೆ ಸಹ ಮಾಡುತ್ತಿದ್ದಾರೆ.

ಕೈ ತಪ್ಪಿದ ಸಚಿವ ಸ್ಥಾನ: ಬಿಎಸ್‌ವೈ ಎದುರು ಗದ್ಗದಿತರಾದ ರೇಣುಕಾಚಾರ್ಯ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಸ್ಥಾನ ಸಿಗದ ಸುರಪುರ ಶಾಸಕ ರಾಜೂಗೌಡ ಮತ್ತು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮುಂದೆ ಅಳಲು ತೋಡಿಕೊಂಡು ಭಾವುಕರಾಗಿದ್ದಾರೆ.

ಸಚಿವ ಸ್ಥಾನ ಕೈತಪ್ಪಿರುವುದು ಖಚಿತವಾದಂತೆ ಯಡಿಯೂರಪ್ಪ ಅವರ ನಿವಾಸ ಕಾವೇರಿಗೆ ಬುಧವಾರ ಬೆಳಿಗ್ಗೆ ಭೇಟಿ ನೀಡಿದ ಈ ಇಬ್ಬರು, ಎರಡು ಗಂಟೆಗೂ ಹೆಚ್ಚು ಹೊತ್ತು ಚರ್ಚೆ ನಡೆಸಿದ್ದಾರೆ. ಮಾತುಕತೆ ವೇಳೆ ಭಾವುಕರಾದ ರೇಣುಕಾಚಾರ್ಯ, ಒಂದು ಹಂತದಲ್ಲಿ ಗದ್ಗದಿತರಾಗಿ‌‌ ಕಣ್ಣೀರಿಟ್ಡಿದ್ದಾರೆ. ವಿವರ: ಕೈ ತಪ್ಪಿದ ಸಚಿವ ಸ್ಥಾನ: ಬಿಎಸ್‌ವೈ ಎದುರು ಗದ್ಗದಿತರಾದ ರೇಣುಕಾಚಾರ್ಯ, ರಾಜೂಗೌಡ

ಶಾಸಕ ನೆಹರು ಓಲೇಕಾರ ಬೆಂಬಲಿಗರಿಂದ ರಸ್ತೆ ತಡೆ, ಉರುಳು ಸೇವೆ

ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಉರುಳು ಸೇವೆ ಮಾಡಿದರು.

'ಬೆಲ್ಲದಗೆ ಸಚಿವ ಸ್ಥಾನ ತಪ್ಪಲು ಶೆಟ್ಟರ್, ಜೋಶಿ ಕಾರಣ'

‘ಹುಬ್ಬಳ್ಳಿ-ಧಾರವಾಡ ಬಿ.ಆರ್.ಟಿ.ಎಸ್. ಯೋಜನೆ ಕಾಮಗಾರಿ ಬಗ್ಗೆ ಶಾಸಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಅವರಿಗೆ ಸಚಿವ ಸ್ಥಾನ ಕೈ ತಪ್ಪುವಂತೆ ಮಾಡಲಾಗಿದೆ’ ಎಂದು ಹುಬ್ಬಳ್ಳಿ–ಧಾರವಾಡ ಬಿಜೆಪಿ ರೈತ ಮೋರ್ಚಾ ಘಟಕದ ಅಧ್ಯಕ್ಷ ಮಹಾದೇವಪ್ಪ ಪೂಜಾರಿ ಆರೋಪಿಸಿದರು.

‘ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆಸಿದ್ದ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ಸಿಗದೆ ಇರಲು ಶಾಸಕ ಜಗದೀಶ ಶೆಟ್ಟರ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೇ ಕಾರಣ. ಬೆಲ್ಲದ ಅವರು ಸಚಿವರಾದರೆ, ತಾವು ತೆರೆಮರೆಗೆ ಸರಿಯಬಹುದು ಎನ್ನುವ ಆತಂಕ ಅವರಲ್ಲಿತ್ತು’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಟ್ವೀಟ್

'ಪಕ್ಷ ಕಟ್ಟಿ ಬೆಳೆಸಿ, ಅರ್ಹತೆ ಹೊಂದಿ ಸಚಿವರಾಗಿ ಪ್ರಮಾಣವಚನ ತೆಗೆದುಕೊಳ್ಳುತ್ತಿರುವ ನೂತನ ಸಚಿವರಿಗೆ ಅಭಿನಂದನೆಗಳು. ಕರ್ನಾಟಕವನ್ನು ದೇಶದಲ್ಲಿ ನಂ.1 ಮಾಡಲು ತಾವೆಲ್ಲ ಶ್ರಮಿಸುತ್ತೀರೆಂದು ನಂಬಿರುತ್ತೇನೆ. ತಮ್ಮೆಲ್ಲರಿಗೂ ತಾಯಿ ಚಾಮುಂಡೇಶ್ವರಿ ಶುಭವನ್ನುಂಟುಮಾಡಲಿ ಎಂದು ಪ್ರಾರ್ಥಿಸುತ್ತೇನೆ.'

ಜೊಲ್ಲೆ ನೆರವಿಗೆ ಬಂದ ಸಂತೋಷ್?

ಶಾಸಕಿ ಶಶಿಕಲಾ ಜೊಲ್ಲೆ ಮತ್ತೊಮ್ಮೆ ಸಂಪುಟ ಸೇರಿರುವುದು ಪಕ್ಷದಲ್ಲಿ ಹಲವರ ಹುಬ್ಬೇರುವಂತೆ ಮಾಡಿದ್ದು, ಜೊಲ್ಲೆ ಹೆಸರು ಪಟ್ಟು ಹಿಡಿದು ಸೇರಿಸುವಲ್ಲಿ ಪಕ್ಷದ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್ ಅವರ ಪ್ರಮುಖ ಪಾತ್ರ ವಹಿಸಿದ್ದಾರೆ.

ಗೊಲ್ಲ ಸಮುದಾಯಕ್ಕೆ ಸೇರಿದ್ದ ಪೂರ್ಣಿಮಾ ಶ್ರೀನಿವಾಸ್ ಅವರ ಹೆಸರು ಬಹುತೇಕ ಅಂತಿಮಗೊಳಿಸಲಾಗಿತ್ತು. ಆದರೆ, ಸಂತೋಷ್‌ ಅವರು ಜೊಲ್ಲೆಯ ಅವರ ಹೆಸರು ಪಟ್ಟಿಯಿಂದ ಕೈಬಿಡದಂತೆ ನೋಡಿಕೊಂಡರು ಎಂದು ಮೂಲಗಳು ಹೇಳಿವೆ.

ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನಕ್ಕೆ ಒತ್ತಾಯ; ಉರುಳು ಸೇವೆ


ಶಾಸಕ ನೆಹರು ಓಲೇಕಾರ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಹಾವೇರಿ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಉರುಳು ಸೇವೆ ಮಾಡಿದರು

ಬಿಎಸ್‌ವೈ ನೆರಳಿನಿಂದ ಹೊರ ಬರಲು ಬೊಮ್ಮಾಯಿಗೆ ಸೂಚನೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಅವರಿಗೆ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬೇಸರಗೊಂಡಿದ್ದಾರೆ.

ಮಂಗಳವಾರ ರಾತ್ರಿ ಬಹಳ ಹೊತ್ತಿನವರೆಗೆ ಬಸವರಾಜ ಬೊಮ್ಮಾಯಿ ಮೂಲಕ ತಮ್ಮ ಪುತ್ರನ ಪರವಾಗಿ ಒತ್ತಡ ಹೇರಿದ್ದ ಯಡಿಯೂರಪ್ಪ ಅವರು, ಬುಧವಾರ ಪಟ್ಟಿಯಲ್ಲಿ ಪುತ್ರನ ಹೆಸರು ಕಾಣಿಸಿಕೊಳ್ಳದ ಕಾರಣ ಬೇಸರಿಸಿಕೊಂಡಿದ್ದರು. ಇದೇ ಕಾರಣಕ್ಕೆ ಅವರು ದುಡುಕಿನ ಹೆಜ್ಜೆ ಹಾಕಬಾರದು ಎಂದು ವರಿಷ್ಠರು ಯಡಿಯೂರಪ್ಪ ಅವರ ಜತೆ  ಸುಮಾರು ಒಂದು ಗಂಟೆಯಷ್ಟು ದೂರವಾಣಿ ಮೂಲಕ ಮಾತುಕತೆ ನಡೆಸಿ, ಸಮಾಧಾನಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ರಾಮನಗರ ಜಿಲ್ಲೆಗಿಲ್ಲ ಸಚಿವ ಸ್ಥಾನ; ಸಿಪಿವೈ, ಬೆಂಬಲಿಗರಿಗೆ ನಿರಾಸೆ

ರಾಮನಗರ ಜಿಲ್ಲೆಗೆ ಈ ಬಾರಿ ಸಚಿವ ಸ್ಥಾನ ಕೈ ತಪ್ಪಿದ್ದು, ಚನ್ನಪಟ್ಟಣದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಸಂಪುಟದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.

ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೊದಲೆರಡು ಬಾರಿಯ ಸಂಪುಟ ವಿಸ್ತರಣೆಯಲ್ಲಿಯೂ ಯೋಗೇಶ್ವರ್ ಅವರಿಗೆ ಅವಕಾಶ ದೊರೆತಿರಲಿಲ್ಲ. ನಂತರದಲ್ಲಿ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ ನಂತರ ಪ್ರವಾಸೋದ್ಯಮ, ಪರಿಸರ ಸಚಿವರಾಗಿ ಜವಾಬ್ದಾರಿ ನೀಡಲಾಗಿತ್ತು.

ಕಲಬುರ್ಗಿ ಜಿಲ್ಲೆಗೆ ಸಿಗದ ಪ್ರಾತಿನಿಧ್ಯ: ಕಾರ್ಯಕರ್ತರಲ್ಲಿ ಬೇಸರ

ಈ ಬಾರಿಯಾದರೂ ಕಲಬುರ್ಗಿ ಜಿಲ್ಲೆಯ ಒಬ್ಬ ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಹಾಗೂ ಜಿಲ್ಲೆಯ ಜನತೆಗೆ ತೀವ್ರ ‌ನಿರಾಸೆಯಾಗಿದೆ.

ಸಚಿವ ಹುದ್ದೆಯ ರೇಸ್ ನಲ್ಲಿ ಕಲ್ಯಾಣ ‌ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್ ಡಿಬಿ)  ಅಧ್ಯಕ್ಷ, ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆದ ಸೇಡಂ ಶಾಸಕ ರಾಜಕುಮಾರ ‌ಪಾಟೀಲ ತೆಲ್ಕೂರ, ಕಲಬುರ್ಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ ಮುಂಚೂಣಿಯಲ್ಲಿದ್ದರು. ಜಿಲ್ಲೆಯಲ್ಲಿ ಐವರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಪ್ರಾತಿನಿಧ್ಯ ಸಿಗದಿರುವುದು ಬೇಸರ ಮೂಡಿಸಿದೆ.

ನವಲಗುಂದದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ

ನವಲಗುಂದ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಧಾರವಾಡ ಜಿಲ್ಲೆಯ ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಸಚಿವ ಸ್ಥಾನ ಖಚಿತವಾಗುತ್ತಿದ್ದಂತೆ, ಅವರ ಬೆಂಬಲಿಗರು ಪಟಾಕಿ‌ ಸಿಡಿಸಿ ಸಂಭ್ರಮಿಸಿದರು.

ಮಂತ್ರಿಯಾಗಲಿರುವ 29 ಶಾಸಕರ ಅಧಿಕೃತ ಪಟ್ಟಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಜೆಪಿಯ 29 ಶಾಸಕರ ಅಧಿಕೃತ ಪಟ್ಟಿ ಇಲ್ಲಿದೆ.

1. ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ

2. ಆರ್.ಅಶೋಕ್- ಪದ್ಮನಾಭ ನಗರ

3. ಬಿ.ಸಿ ಪಾಟೀಲ - ಹಿರೇಕೇರೂರು

4. ಡಾ.ಸಿ.ಎನ್.ಅಶ್ವತ್ಥ ನಾರಾಯಣ - ಮಲ್ಲೇಶ್ವರ

5. ಬಿ.ಶ್ರೀ ರಾಮುಲು- ಮೊಳಕಾಲುಮ್ಮೂರು

6. ಉಮೇಶ್ ಕತ್ತಿ- ಹುಕ್ಕೇರಿ

7. ಎಸ್.ಟಿ.ಸೋಮಶೇಖರ್- ಯಶವಂತಪುರ

8. ಡಾ.ಕೆ.ಸುಧಾಕರ್ - ಚಿಕ್ಕಬಳ್ಳಾಪುರ

9. ಬೈರತಿ‌ ಬಸವರಾಜ - ಕೆ ಆರ್ ಪುರಂ

10. ಮುರುಗೇಶ್ ನಿರಾಣಿ - ಬಿಳಿಗಿ

11. ಶಿವರಾಂ ಹೆಬ್ಬಾರ್- ಯಲ್ಲಾಪುರ

12. ಶಶಿಕಲಾ ಜೊಲ್ಲೆ- ನಿಪ್ಪಾಣಿ

13. ಕೆ.ಸಿ.ನಾರಾಯಣ ಗೌಡ - ಕೆ‌.ಆರ್ ಪೇಟೆ

14. ಸುನೀಲ್ ಕುಮಾರ್ - ಕಾರ್ಕಳ

15. ಆರಗ ಜ್ಞಾನೇಂದ್ರ - ತೀರ್ಥ ಹಳ್ಳಿ

16. ಗೋವಿಂದ ಕಾರಜೋಳ-ಮುಧೋಳ

17. ಮುನಿರತ್ನ- ಆರ್.ಆರ್ ನಗರ

18. ಎಂ.ಟಿ.ಬಿ ನಾಗರಾಜ್ - ಎಂ ಎಲ್ ಸಿ

19. ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

20. ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ

21. ಹಾಲಪ್ಪ ಆಚಾರ್ - ಯಲ್ಬುರ್ಗ

22 . ಶಂಕರ್ ಪಾಟೀಲ್ ಮುನೇನಕೊಪ್ಪ - ನವಲುಗುಂದ

23. ಕೋಟಾ ಶ್ರೀನಿವಾಸ ಪೂಜಾರಿ - ಎಂ.ಎಲ್.ಸಿ

24. ಪ್ರಭು ಚೌವ್ಹಾಣ್ - ಔರಾದ್

25. ವಿ.ಸೋಮಣ್ಣ - ಗೋವಿಂದ್ ರಾಜನಗರ

26. ಎಸ್ ಅಂಗಾರ- ಸುಳ್ಯ

27. ಆನಂದ್ ಸಿಂಗ್ - ಹೊಸಪೇಟೆ

28. ಸಿ.ಸಿ‌ ಪಾಟೀಲ - ನರಗುಂದ

29. ಬಿಸಿ ನಾಗೇಶ್ - ತಿಪಟೂರು

ಪಟ್ಟಿಯಲ್ಲಿ ವಿಜಯೇಂದ್ರ ಹೆಸರು ಇಲ್ಲ

ವಿಜಯೇಂದ್ರ ಹೆಸರು ಈಗಿನ ಪಟ್ಟಿಯಲ್ಲಿ ಇಲ್ಲ. 29 ಶಾಸಕರು ಹೆಸರುಗಳು ಪಟ್ಟಿಯಲ್ಲಿ ಇವೆ.– ಬೊಮ್ಮಾಯಿ ಸ್ಪಷ್ಟನೆ

* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಮುಖಂಡರಾದ ಯಡಿಯೂರಪ್ಪ ಅವರೊಂದಿಗೆ ಮಾತನಾಡಿದ್ದಾರೆ. ರಾಜ್ಯದ ಉಸ್ತುವಾರಿ ಹೊತ್ತಿರುವ ಅರುಣ್‌ ಜೀ ವಿಜಯೇಂದ್ರ ಅವರೊಂದಿಗೆ ಮಾತನಾಡಿದ್ದಾರೆ.

ನೂತನ ಸಚಿವರ ಪಟ್ಟಿಯಲ್ಲಿ...

ನೂತನ ಸಚಿವರ ಪಟ್ಟಿಯಲ್ಲಿ– 8 ಮಂದಿ ಲಿಂಗಾಯತ ವರ್ಗದವರು, ಇತರೆ ಹಿಂದುಳಿದ ವರ್ಗದ 7 ಶಾಸಕರು, 7 ಒಕ್ಕಲಿಗ ಶಾಸಕರು, ಮೂವರು ದಲಿತರು, ಒಬ್ಬರು ಎಸ್‌ಸಿ, ಎಸ್‌ಟಿ, ರೆಡ್ಡಿ ಹಾಗೂ ಮಹಿಳೆ. ವಿವರ: ಇಂದು ಸಚಿವರಾಗಿ ಒಟ್ಟು 29 ಶಾಸಕರ ಪ್ರಮಾಣ ವಚನ: ಬೊಮ್ಮಾಯಿ

ರಾಜ್ಯಪಾಲರ ಕಚೇರಿಯಿಂದ ಪಟ್ಟಿ

ಯಾವುದೇ ಗೊಂದಲಗಳು ಇಲ್ಲ. ರಾಜ್ಯಪಾಲರ ಕಚೇರಿಯಿಂದ ಕೆಲ ನಿಮಿಷಗಳಲ್ಲಿ ಸಚಿವರ ಪಟ್ಟಿ ಬಿಡುಗಡೆ ಆಗಲಿದೆ.

ಒಟ್ಟು 29 ಶಾಸಕರು ಸಚಿವರಾಗಿ ಪ್ರಮಾಣ ವಚನ

* ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ 29 ಶಾಸಕರ ಪಟ್ಟಿ ಅಂತಿಮವಾಗಿದೆ.

* ಉಪಮುಖ್ಯಮಂತ್ರಿ ಸ್ಥಾನ ಇರುವುದಿಲ್ಲ.

* ಅನುಭವಿಗಳು ಮತ್ತು ಹೊಸಬರ ಮಿಶ್ರಣ ಸಚಿವರಲ್ಲಿ ಇರಲಿದೆ.

ಉತ್ತರ ಕನ್ನಡದ ಪ್ರವಾಹ ಪರಿಸ್ಥಿತಿ ವೀಕ್ಷಣೆ. ಸ್ಥಳದಲ್ಲಿಯೇ ಪರಿಹಾರ ಘೋಷಣೆ ಮಾಡಿದ್ದೇನೆ. –ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುರುಗೇಶ್ ನಿರಾಣಿಗೂ ಕರೆ

ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜಭವನಕ್ಕೆ ಬರುವಂತೆ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕರೆ ಮಾಡಿ ತಿಳಿಸಿರುವುದಾಗಿ ಬೀಳಗಿ ವಿಧಾನಸಭಾ ಕ್ಷೇತ್ರದ ಶಾಸಕರ ಮುರುಗೇಶ್ ಆರ್ ನಿರಾಣಿಗೂ ತಿಳಿಸಿದ್ದಾರೆ.

ರಾಜೀನಾಮೆ ಹೇಳಿಕೆಗೆ ಬದ್ಧ: ಶಾಸಕ ಆನಂದ ಮಾಮನಿ

‘ಸಚಿವ ಸ್ಥಾನ ಸಿಗದಿದ್ದರೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವುದಾಗಿ ನೀಡಿರುವ ಹೇಳಿಕೆಗೆ ಈಗಲೂ ಬದ್ಧವಿದ್ದೇನೆ. ನನಗೆ ಮುಖ್ಯಮಂತ್ರಿ ಕಚೇರಿಯಿಂದ ಈವರೆಗೂ ಕರೆ ಬಂದಿಲ್ಲ’ ಎಂದು ಸವದತ್ತಿ–ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ತಿಳಿಸಿದರು. ಇದರೊಂದಿಗೆ, ಸಚಿವ ಸಂಪುಟ ರಚನೆಯ ಬೆನ್ನಲ್ಲೆ ಬಿಜೆಪಿಯಲ್ಲಿ ಬೆಳಗಾವಿಯಿಂದಲೇ ಬಂಡಾಯದ ಕಹಳೆ ಮೊಳಗುವ ಸಾಧ್ಯತೆ ನಿಚ್ಚಳವಾಗಿದೆ.

ಸಚಿವರಾಗುವವರಿಗೆ ಮುಖ್ಯಮಂತ್ರಿ ಕಚೇರಿಯಿಂದ ಕರೆ

ಸಚಿವರಾಗುವಂತೆ ಮುಖ್ಯಮಂತ್ರಿ ಸಚಿವಾಲಯದಿಂದ ಶಾಸಕರಿಗೆ ಕರೆ ಹೋಗಿದೆ. ಈವರೆಗೆ 15ಕ್ಕೂ ಹೆಚ್ಚು ಶಾಸಕರಿಗೆ ಕರೆ ಹೋಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಕರೆ ಬಂದ ಶಾಸಕರು ಖಚಿತಗೊಳಿಸಿದ್ದಾರೆ.

ಕರೆ ಹೋಗಿರುವ ಶಾಸಕರು (ಸಂಭವನೀಯ ಸಚಿವರು)

  1. ಗೋವಿಂದ ಕಾರಜೋಳ
  2. ವಿ.ಸೋಮಣ್ಣ
  3. ಬಿ.ಶ್ರೀರಾಮುಲು
  4. ಉಮೇಶ ಕತ್ತಿ
  5. ಬೈರತಿ ಬಸವರಾಜ
  6. ಕೆ.ಎಸ್‌.ಈಶ್ವರಪ್ಪ
  7. ಆರ್‌.ಅಶೋಕ
  8. ಡಾ. ಸಿ.ಎನ್‌. ಅಶ್ವತ್ಥನಾರಾಯಣ
  9. ಎಸ್‌.ಟಿ. ಸೋಮಶೇಖರ್‌
  10. ಬಿ.ಸಿ.ಪಾಟೀಲ
  11. ಪೂರ್ಣಿಮಾ ಶ್ರೀನಿವಾಸ್‌
  12. ಎಸ್‌.ಅಂಗಾರ
  13. ಆರಗ ಜ್ಞಾನೇಂದ್ರ
  14. ಶಂಕರಪಾಟೀಲ ಮುನೇನಕೊಪ್ಪ
  15. ಡಾ.ಸುಧಾಕರ್‌
  16. ಅರವಿಂದ ಲಿಂಬಾವಳಿ
  17. ಮುನಿರತ್ನ
  18. ಕೆ. ಗೋಪಾಲಯ್ಯ
  19. ಜೆ.ಸಿ. ಮಾಧುಸ್ವಾಮಿ
  20. ವಿ. ಸುನಿಲ್‌ಕುಮಾರ್‌

ಎರಡು ವಿಷಯದ ಬಗ್ಗೆ ವರಿಷ್ಠರು ತಿಳಿಸಬೇಕಿದೆ: ಬೊಮ್ಮಾಯಿ

‘ಸಂಪುಟಕ್ಕೆ ಯಾರನ್ನೆಲ್ಲ ಸೇರಿಸಬೇಕೆಂಬ ಬಗ್ಗೆ ವರಿಷ್ಠರು ಎರಡು ದಿನ ಚರ್ಚೆ ಮಾಡಿದ್ದಾರೆ. ಎರಡು ವಿಷಯಗಳ ಬಗ್ಗೆ ಮಾತ್ರ ವರಿಷ್ಠರು ತಿಳಿಸಬೇಕಿದೆ. ಬೆಳಿಗ್ಗೆ 10 ಗಂಟೆಗೆ ತಿಳಿಸುತ್ತೇನೆ ಎಂದಿದ್ದಾರೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಬುಧವಾರ ಬೆಳಿಗ್ಗೆ ಮಾತನಾಡಿದ ಅವರು, ‘ವರಿಷ್ಠರು ಯಾವುದೇ ಸಂದರ್ಭದಲ್ಲಿ ತಿಳಿಸಬಹುದು’ ಎಂದರು.

ರಾಜಭವನದಿಂದ ಪಟ್ಟಿ ಬಿಡುಗಡೆ: ಬೊಮ್ಮಾಯಿ

ಬೆಂಗಳೂರು: ನೂತನ ಸಚಿವರ ಪಟ್ಟಿ ಬೆಳಿಗ್ಗೆ 11ರಿಂದ 11.30ರ ಮಧ್ಯೆ ರಾಜಭವನದಿಂದ ಅಧಿಕೃತವಾಗಿ ಬಿಡುಗಡೆ ಆಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬುಧವಾರ ಬೆಳಿಗ್ಗೆ ದೆಹಲಿಯಿಂದ ಮರಳಿದ ಬೊಮ್ಮಾಯಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು.

ರಾಜಭವನನದ ಗಾಜಿನ ಮನೆಯಲ್ಲಿ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ನಡೆಯಲಿದೆ ಎಂದೂ ಅವರು ಹೇಳಿದರು.

ಚಿಕ್ಕಬಳ್ಳಾಪುರ: ಸುಧಾಕರ್‌ಗೆ ಸಚಿವ ಸ್ಥಾನ ಖಚಿತ

ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಸಚಿವ ಸ್ಥಾನ ಖಚಿತವಾಗಿದೆ ಎಂದು ಅವರ ಬೆಂಬಲಿಗರು ಬೆಂಗಳೂರಿನತ್ತ ತೆರಳಲು ಸಿದ್ಥವಾಗಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ತೆರಳಲು ನಗರಸಭೆ ಅಧ್ಯಕ್ಷ, ಸದಸ್ಯರು ಹಾಗೂ‌ ಮುಖಂಡರು ಮುಂದಾಗಿದ್ದಾರೆ.

ಸುಧಾಕರ್ ಅವರಿಗೆ ಸಚಿವ ಸ್ಥಾನ ದೊರೆಯಲಿದೆ. 10.30ಕ್ಕೆ ನಗರದ ಶನೈಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಿ ಬೆಂಗಳೂರಿಗೆ ತೆರಳುತ್ತೇವೆ ಎಂದು ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು ತಿಳಿಸಿದ್ದಾರೆ. ವಿವರ: ಚಿಕ್ಕಬಳ್ಳಾಪುರ: ಸುಧಾಕರ್‌ಗೆ ಸಚಿವ ಸ್ಥಾನ ಖಚಿತ, ಬೆಂಗಳೂರಿನತ್ತ ಬೆಂಬಲಿಗರು

ಸಂಪುಟ ಸಚಿವರ ಪ್ರಮಾಣ ವಚನ: ಆಹ್ವಾನ ಪತ್ರಿಕೆ

ಬೆಂಗಳೂರಿನಲ್ಲಿರುವ ರಾಜಭವನದಲ್ಲಿ ಇಂದು ಮಧ್ಯಾಹ್ನ 2:15ಕ್ಕೆ ಸಂಪುಟ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ರಾಜ್ಯಪಾಲರಾದ ಥಾಮರ್‌ಚಂದ್ ಗೆಹಲೋತ್‌ ಅವರು ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಹೂವಿನ ಬೊಕ್ಕೆಗಳನ್ನು ತರದಂತೆ ಆಹ್ವಾನ ಪತ್ರಿಕೆಯಲ್ಲಿ ಸೂಚನೆ ನೀಡಲಾಗಿದೆ.

ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟು ಸಂಪುಟಕ್ಕೆ ಹಿರಿ–ಕಿರಿಯರ ಸೇರ್ಪಡೆ: ಬೊಮ್ಮಾಯಿ

ಒಂದೆರಡು ಮೂರು ಹೆಸರು ಸೇರಿಸಬೇಕೆ? ಬೇಡವೇ? ಎಂಬುದು ಅಂತಿಮವಾಗಿಲ್ಲ. ಡಿಸಿಎಂ ಯಾರಾಗಬೇಕೆಂಬುದೂ ಅಂತಿಮವಾಗಿಲ್ಲ. ಈ ಎರಡೂ ವಿಚಾರಗಳು ವರಿಷ್ಠರು ಅಂತಿಮಗೊಳಿಸಿ ಅಂತಿಮಪಟ್ಟಿ ಕೊಡುತ್ತಾರೆ. ಬಳಿಕ ಪಟ್ಟಿಯನ್ನು ಪ್ರಕಟಿಸುತ್ತೇನೆ. ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಉತ್ತಮ ಆಡಳಿತಕ್ಕಾಗಿ ಹಿರಿ–ಕಿರಿಯರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ.

–ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಮತ್ತಷ್ಟು ವಿವರ: ಸಚಿವ ಸಂಪುಟ ರಚನೆ: ಬುಧವಾರ ಬೆಳಿಗ್ಗೆ ವರಿಷ್ಠರಿಂದ ಅಂತಿಮ ಮುದ್ರೆ– ಬೊಮ್ಮಾಯಿ

ಆನಂದ್ ಸಿಂಗ್‌ಗೆ ಮತ್ತೆ ಸಚಿವ ಸ್ಥಾನ

ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್‌ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ.

ಆನಂದ್ ಸಿಂಗ್ ಅವರು ಮಂಗಳವಾರವೇ ಬೆಂಗಳೂರಿಗೆ ಪಯಣ ಬೆಳೆಸಿದ್ದಾರೆ. ಬುಧವಾರ ಮಧ್ಯಾಹ್ನ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಪ್ರಮಾಣ ವಚನ ಸ್ವೀಕರಿಸುವರು ಎಂದು ತಿಳಿದು ಬಂದಿದೆ.

ವಿವರ: ವಿಜಯನಗರ: ಆನಂದ್ ಸಿಂಗ್‌ಗೆ ಮತ್ತೆ ಸಚಿವ ಸ್ಥಾನ

ಶಂಕರಪಾಟೀಲ ಮುನೇನಕೊಪ್ಪಗೆ ಸಚಿವ ಸ್ಥಾನ

ಧಾರವಾಡ ಜಿಲ್ಲೆಯ ನವಲಗುಂದ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಅವರು ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ.

ನವಲಗುಂದ‌ ವಿಧಾನಸಭಾ ಕ್ಷೇತ್ರದಿಂದ ಎರಡನೇ ಬಾರಿಗೆ ಆಯ್ಕೆಯಾಗಿದ್ದಾರೆ. ಇವರು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿದವರು. ವಿವರ: ಹುಬ್ಬಳ್ಳಿ: ಶಂಕರಪಾಟೀಲ ಮುನೇನಕೊಪ್ಪಗೆ ಸಚಿವ ಸ್ಥಾನ

ಬಿ.ಸಿ.ಪಾಟೀಲ್‌ಗೆ ಮತ್ತೆ ಸಚಿವ ಸ್ಥಾನ?

ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರು ಬೊಮ್ಮಾಯಿ ಅವರ ಸಂಪುಟದಲ್ಲಿ ಸಚಿವನಾಗಿ ಮಧ್ಯಾಹ್ನ 2.15ಕ್ಕೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

22ರಿಂದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ಬುಧವಾರ ಮಧ್ಯಾಹ್ನ 2.15ಕ್ಕೆ ನಡೆಯಲಿದೆ ಎಂದು ರಾಜ್ಯ ಶಿಷ್ಟಾಚಾರ ವಿಭಾಗ ಮಾಹಿತಿ ನೀಡಿದೆ. 

22ರಿಂದ 24 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಬಿಎಸ್‌ವೈ ಮೇಲೆ ಶಾಸಕರ ಒತ್ತಡ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ಸ್ಥಾನ ಗಿಟ್ಟಿಸಲು ಶತಾಯಗತಾಯ ಯತ್ನಿಸುತ್ತಿರುವ ಹಲವು ಶಾಸಕರು, ಮಂಗಳವಾರವೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದರು.

ದೆಹಲಿಯಲ್ಲಿ ಸಂಭಾವ್ಯ ಸಚಿವರ ಪಟ್ಟಿ ಸಿದ್ಧಗೊಂಡಿದ್ದರೂ ಕೊನೆಯ ಕ್ಷಣದ ಪ್ರಯತ್ನವನ್ನು ಶಾಸಕರು ಮುಂದುವರಿಸಿದರು. ತಮ್ಮ ಮಾತು ನಡೆಯುವುದಿಲ್ಲ ಎಂದು ಯಡಿಯೂರಪ್ಪ ಹೇಳಿದರೂ ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಶಾಸಕರು ಇರಲಿಲ್ಲ.

ಮತ್ತಷ್ಟು ವಿವರ: ಸಚಿವಗಿರಿ: ಬಿಎಸ್‌ವೈಗೆ ಶಾಸಕರ ಮೊರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.