ADVERTISEMENT

ಸಭಾಪತಿ ವಿರುದ್ಧ ಪ್ರಕರಣ; ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 4:24 IST
Last Updated 18 ಮಾರ್ಚ್ 2022, 4:24 IST

ಬೆಂಗಳೂರು: ಧಾರವಾಡ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ ವಿಷಯ ವಿಧಾನಪರಿಷತ್‌ನಲ್ಲಿ ಗುರುವಾರ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಯಿತು. ಹಿರಿಯ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂತು.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ, ‘ಸಭಾಪತಿ ಸಾಂವಿಧಾನಿಕ ಹುದ್ದೆ. ಆ ಸ್ಥಾನದಲ್ಲಿರುವ ಹೊರಟ್ಟಿ ಅವರ ವಿರುದ್ಧ ಇಲ್ಲಿ ನಿಯಮಾವಳಿಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜಾತಿ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಭಾಪತಿಗೆ ಅಗೌರವವಾಗಿದೆ. ಶಿಷ್ಟಾಚಾರ ಪಾಲನೆಯಾಗಿಲ್ಲ. ಸರ್ಕಾರ ಸಬ್ ಇನ್‌ಸ್ಪೆಕ್ಟರ್‌ ಒಬ್ಬರನ್ನು ಅಮಾನತುಪಡಿಸಿ ಕೈತೊಳೆದುಕೊಳ್ಳುತ್ತಿದೆ. ಈ ಪ್ರಕರಣಕ್ಕೆ ಕಾರಣರಾದ ಡಿವೈಎಸ್‌ಪಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ಆಗ ಮುಖ್ಯಮಂತ್ರಿ, ‘ರಾಜ್ಯಪಾಲರ ಬಳಿಕ ಸಭಾಪತಿ ಹುದ್ದೆ ಹೆಚ್ಚು ಗೌರವಯುತ ಸ್ಥಾನ ಎಂಬುದು ಶಿಷ್ಟಾಚಾರದಲ್ಲಿ ದಾಖಲಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿ ಇರುವವರ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಶಿಷ್ಟಾಚಾರ ಪಾಲಿಸಬೇಕು. ವಿಷಯ ತಿಳಿದ ಬಳಿಕ ನಾನು ಸಭಾಪತಿ ಜೊತೆ ಮಾತನಾಡಿದ್ದೇನೆ. ಅವರು ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದಾರೆ. ಈಗಾಗಲೇ ಸಬ್ ಇನ್‌ಸ್ಪೆಕ್ಟರ್‌ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪ್ರಕರಣದ ವಿಚಾರಣಾಧಿಕಾರಿ ಡಿವೈಎಸ್‌ಪಿ ವಿರುದ್ಧ ಕ್ರಮಕ್ಕೆ ಪರಿಶೀಲಿಸಲಾಗುತ್ತಿದೆ’ ಎಂದರು.

ADVERTISEMENT

‘ಈ ಪ್ರಕರಣದಲ್ಲಿ ಕೆಳಹಂತದ ಅಧಿಕಾರಿಯನ್ನಷ್ಟೇ ಬಲಿಪಶು ಮಾಡಲಾಗಿದೆ. ಹಿರಿಯ ಅಧಿಕಾರಿಯನ್ನು ರಕ್ಷಿಸಲಾಗುತ್ತಿದೆ. ಸಭಾಪತಿಗೆ ಅವಮಾನ ಆದಾಗಲೂ ಸರ್ಕಾರ ಈ ರೀತಿ ನಿರ್ಲಕ್ಷ್ಯ ತೋರುವುದು ಸರಿಯಲ್ಲ’ ಎಂದು ಕಾಂಗ್ರೆಸ್ಸಿನ ಸಲೀಂ ಅಹಮ್ಮದ್, ಯು.ಬಿ. ವೆಂಕಟೇಶ್ ಆಕ್ಷೇಪ ವ್ಯಕ್ತಪಡಿಸಿದರು.

‘ಪರಿಶಿಷ್ಟ ಸಮುದಾಯದ ಪಿಎಸ್ಐಯನ್ನು ಹರಕೆಯ ಕುರಿ ಮಾಡಲಾಗಿದೆ’ ಎಂದು ವಿರೋಧ ಪಕ್ಷದ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ಷೇಪಿಸಿದರು. ಎಸ್‌ಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.