ADVERTISEMENT

ಪಠ್ಯಪುಸ್ತಕ ಪರಿಷ್ಕರಣೆ | ‘ಸಂವಿಧಾನ ಶಿಲ್ಪಿ’ ಪದ ಬಿಟ್ಟಿರುವುದು ತಪ್ಪು: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2022, 19:37 IST
Last Updated 6 ಜೂನ್ 2022, 19:37 IST
   

ಕಾರವಾರ: ‘ಪಠ್ಯಪುಸ್ತಕ ಪರಿಷ್ಕರಣೆಯ ಗಲಾಟೆ ನಡೆದಿದ್ದು ಕೇವಲ ರಾಜಕೀಯಕ್ಕಾಗಿ. ಎಲ್ಲರೂ ರಾಜಕೀಯ ಮಾಡುತ್ತಿದ್ದಾರೆ. ಶಿಕ್ಷಣದ ವಿಷಯದಲ್ಲಿ ವಿವಾದ ಮಾಡಬಾರದು’ ಎಂದು ವಿಧಾನಪರಿಷತ್ತಿನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್‌ ಸಂಸ್ಥಾಪಕ ಹೆಡಗೇವಾರ್‌ ಅವರ ಬಗ್ಗೆ ಪಾಠ ಸೇರಿಸಿದ್ದರಿಂದ ಮಕ್ಕಳಲ್ಲಿ ಕೋಮು ಭಾವನೆ ಬೆಳೆಯುತ್ತದೆ ಎಂಬುದು ಸುಳ್ಳು. ನಾನದನ್ನು ಒಪ್ಪುವುದಿಲ್ಲ’ ಎಂದರು.

‘ಪ‌ಠ್ಯಪುಸ್ತಕ ಪರಿಷ್ಕರಣಾ ಸಮಿತಿ ಪಠ್ಯಪುಸ್ತಕದಿಂದ ಅಂಬೇಡ್ಕರ್ ಅವರ ಹೆಸರಿನ ಮುಂದೆ ಇದ್ದ ಸಂವಿಧಾನ ಶಿಲ್ಪಿ ಪದ ತೆಗೆದಿರುವುದು ತಪ್ಪು. ಅಂತೆಯೇ ಸಾವಿತ್ರಿಬಾಯಿ ಫುಲೆ ಕುರಿತಾದ ಪಾಠವನ್ನು ತೆಗೆದಿರುವುದೂ ಸರಿಯಲ್ಲ. ಇದು ಯಾರೇ ಮಾಡಿದ್ದರೂ ಸಮರ್ಥನೀಯವಲ್ಲ’ ಎಂದರು.

ADVERTISEMENT

ಮಠಾಧೀಶರಿಂದ ಪ್ರತಿಭಟನೆ
ಹುಕ್ಕೇರಿ/ರಾಮದುರ್ಗ (ಬೆಳಗಾವಿ ಜಿಲ್ಲೆ):ವಿಶ್ವಗುರು ಬಸವಣ್ಣನವರ ಚರಿತ್ರೆ ಮತ್ತು ಚಾರಿತ್ರ್ಯಕ್ಕೆ ಧಕ್ಕೆ ತರುವ ಲೋಪದೋಷಗಳನ್ನು ತಕ್ಷಣ ಸರಿಪಡಿಸಿ ಮಕ್ಕಳಿಗೆ ಪಠ್ಯ ವಿತರಿಸುವಂತೆ ಒತ್ತಾಯಿಸಿ ಲಿಂಗಾಯತ ಸಮುದಾಯದ ವಿವಿಧ ಸ್ವಾಮೀಜಿಗಳು ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ, ರಾಷ್ಟ್ರೀಯ ಬಸವ ಸೇನೆಯ ಸ್ವಾಮೀಜಿಗಳು ಮತ್ತು ವಿವಿಧ ಗ್ರಾಮಗಳ ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

‘ಶಿಕ್ಷಣ ಸಚಿವರ ಮೈಯಲ್ಲಿ ಹೆಡಗೇವಾರ್ ದೆವ್ವ ಹೊಕ್ಕಿದೆ’
ತಿಪಟೂರು (ತುಮಕೂರು): ‘ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಅವರ ಮೈಯಲ್ಲಿ ಹೆಡಗೇವಾರ್ ದೆವ್ವ ಹೊಕ್ಕಿದೆ. ಹಾಗಾಗಿಯೇ, ಶಾಲಾ ಪಠ್ಯದಲ್ಲಿ ಪುರೋಹಿತಶಾಹಿ ವಿಚಾರಗಳನ್ನು ಅಳವಡಿಸಲು ಪ್ರಯತ್ನಿಸುತ್ತಿದ್ದು, ಅಲ್ಪಸಂಖ್ಯಾತರನ್ನು ಮೂಲೆಗುಂಪು ಮಾಡಲಾಗುತ್ತಿದೆ’ ಎಂದು ಸಾಹಿತಿ ಕುಂ.ವೀರಭದ್ರಪ್ಪ ಟೀಕಿಸಿದರು.

ನಗರದಲ್ಲಿ ಸೋಮವಾರ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ‘ಸಮಾನತೆಯ ಬಸವಣ್ಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.