ADVERTISEMENT

ರಾಜಾಹುಲಿ ಪಂಜರದಲ್ಲಿ ಒದ್ದಾಡುತ್ತಿದೆ: ಹೊರಟ್ಟಿ

ಇನ್ನಿಬ್ಬರು ಡಿಸಿಎಂ ಅನಿವಾರ್ಯ– ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 21:21 IST
Last Updated 20 ಫೆಬ್ರುವರಿ 2020, 21:21 IST
ಬಸವರಾಜ ಹೊರಟ್ಟಿ
ಬಸವರಾಜ ಹೊರಟ್ಟಿ   

ಬೆಂಗಳೂರು: ‘ವಾಸ್ತವವಾಗಿ ಒಬ್ಬ ಉಪಮುಖ್ಯಮಂತ್ರಿ ಸಾಕಿತ್ತು. ದಲಿತ ನಾಯಕ ಎಂಬ ಕಾರಣಕ್ಕೆ ಗೋವಿಂದ ಕಾರಜೋಳ ಅವರೊಬ್ಬರೇ ಇರಬಹುದಿತ್ತು. ಆದರೆ ಮೂವರನ್ನು ಮಾಡಿದ್ದೀರಿ, ಯಡಿಯೂರಪ್ಸ ಕುರ್ಚಿಉಳಿಯಬೇಕಾದರೆ ಇನ್ನೂ ಇಬ್ಬರನ್ನು ಮಾಡಬೇಕಾಗುತ್ತದೆ’ ಎಂದು ವಿಧಾನ ಪರಿಷತ್‌ ಜೆಡಿಎಸ್‌ ಸದಸ್ಯ ಬಸವರಾಜ ಹೊರಟ್ಟಿ ಕುಟುಕಿದರು.

ಪರಿಷತ್‌ನಲ್ಲಿ ಗುರುವಾರ ರಾಜ್ಯಪಾಲರ ಭಾಷಣಕ್ಕೆ ವಂದನೆ ಸೂಚಿಸುವ ಗೊತ್ತುವಳಿ ಮೇಲೆ ಮಾತನಾಡಿ, ‘ರಾಜಾಹುಲಿ ನಿಮ್ಮ ಕೈಯಲ್ಲಿ ಸಿಲುಕಿ ಪಂಜರದ ಹುಲಿಯಂತೆ ಒದ್ದಾಡುತ್ತಿದೆ’ ಎಂದು ಚುಚ್ಚಿದರು.

‘ಮುಖ್ಯಮಂತ್ರಿಯಾಗಿದ್ದ ಜಗದೀಶ ಶೆಟ್ಟರ್‌ ಮಂತ್ರಿಯಾಗಲೇಬಾರದಿತ್ತು. ಈ ಹಿಂದೆ ಉಪಮುಖ್ಯಮಂತ್ರಿಗಳಾಗಿದ್ದ ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ ಅವರೂ ಮಂತ್ರಿ ಆಗಬಾರದಿತ್ತು. ಆದರೆ ಇಂದು ಡಿಸಿಎಂ ಮಾಡುವ ವಿಚಾರದಲ್ಲಿ ಬಿಜೆಪಿ ದಾಖಲೆ ಬರೆದು ಬಿಟ್ಟಿದೆ. ಯಾರದೋ ದುಡ್ಡು, ಯಲ್ಲಮ್ಮನ ಜಾತ್ರೆಯಂತಾಗಿದೆ’ ಎಂದು ಟೀಕಿಸಿದರು.

ADVERTISEMENT

‘ಹೊರಟ್ಟಿಯವರನ್ನು ಪಕ್ಷ ಹೇಗೆ ನಡೆಸಿಕೊಂಡಿದೆ?’ ಎಂದು ರವಿಕುಮಾರ್ ಕಾಲೆಳೆದಾಗ, ‘ಅದು ನನ್ನ ಹಣೆಬರಹ, ಯಾವ ಕಾರಣಕ್ಕೂ ನಾನು ಪಕ್ಷ ಬಿಟ್ಟು ಹೋಗುವವನಲ್ಲ’ ಎಂದರು.

ದುಡ್ಡಿದ್ದವರಿಗೆ ಮೇಲ್ಮನೆ
‘ದುಡ್ಡಿದ್ದವರಷ್ಟೇ ಮೇಲ್ಮನೆಗೆ ಬರುತ್ತಾರೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದು ತೀವ್ರ ಚರ್ಚೆಗೆ ಕಾರಣವಾಯಿತು.

‘ಮೇಲ್ಮನೆಗೆ ಕಲಾವಿದರು, ಬುದ್ಧಿಜೀವಿಗಳು ಬರುವುದು ವಿರಳವಾಗಿದೆ, ದುಡ್ಡಿದ್ದವರು, ಚುನಾವಣೆಯಲ್ಲಿ ಸೋತವರಿಗೆ ಆಸರೆತಾಣವಾಗಿದೆ’ ಎಂದು ಅವರು ಹೇಳಿದಾಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಲವು ಸದಸ್ಯರು ತಿರುಗಿಬಿದ್ದರು. ಸಚಿವ ಸೋಮಣ್ಣ ಅವರು ತಾವೇ ಎರಡು ಬಾರಿ ವಿಧಾನ ಪರಿಷತ್‌ಗೆ ಪ್ರವೇಶಿಸಿದ್ದನ್ನು ಉಲ್ಲೇಖಿಸಿ,ಸುಧಾಕರ್‌ ಮಾತನ್ನು ಖಂಡಿಸಿದರು.

‘ಸುಧಾಕರ್‌, ಮುಂದೆ ನೀವೇ ಇಲ್ಲಿಗೆ ಬರುವ ಸ್ಥಿತಿ ನಿರ್ಮಾಣವಾಗಬಹುದು’ ಎಂದು ಸೋಮಣ್ಣ ಎಚ್ಚರಿಸಿದರು. ‘113 ವರ್ಷ ಇತಿಹಾಸ ಇರುವ ಈ ಮೇಲ್ಮನೆಯನ್ನು ಲಘುವಾಗಿ ಪರಿಗಣಿಸಬೇಡಿ’ ಎಂದು ಹೊರಟ್ಟಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.