
ವಿಧಾನ ಸಭೆ
ಸುವರ್ಣ ವಿಧಾನಸೌಧ (ಬೆಳಗಾವಿ): ವಿರೋಧ ಪಕ್ಷದ ಸದಸ್ಯರ ತೀವ್ರ ವಿರೋಧ, ವಾಕ್ಸಮರ, ಕೋಲಾಹಲ, ಗದ್ದಲದ ನಡುವೆಯೇ ದ್ವೇಷ ಭಾಷಣ ಮತ್ತು ದ್ವೇಷಾಪರಾಧ ಎಸಗುವವರನ್ನು ಶಿಕ್ಷೆಗೆ ಗುರಿಪಡಿಸುವ ಮಸೂದೆಗೆ ವಿಧಾನಸಭೆ ಗುರುವಾರ ಅಂಗೀಕಾರ ನೀಡಿತು.
‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ–2025’ಗೆ ಅನುಮೋದನೆ ನೀಡುವಂತೆ ಗೃಹ ಸಚಿವ ಜಿ. ಪರಮೇಶ್ವರ ಪ್ರಸ್ತಾಪಿಸಿದರು.
ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ‘ಕೇಂದ್ರ ಸರ್ಕಾರ ಜಾರಿಗೆ ತಂದ ಬಿಎನ್‌ಎಸ್ ಕಾಯ್ದೆಯು ದ್ವೇಷ ಭಾಷಣ ತಡೆಗೆ ಅವಕಾಶ ಕಲ್ಪಿಸಿದೆ. ಹಾಗಿದ್ದರೂ ಎದುರಾಳಿಗಳನ್ನು ಹತ್ತಿಕ್ಕಲು ಮಸೂದೆ ತರಲಾಗುತ್ತಿದೆ’ ಎಂದು ದೂರಿದರು.
ಪರ–ವಿರೋಧದ ಚರ್ಚೆಯ ಮಧ್ಯೆಯೇ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ‘ಕರಾವಳಿಯಲ್ಲಿ ಬೆಂಕಿ ಹಚ್ಚಿದ್ದೀರ, ಇಲ್ಲಿಯೂ ಬೆಂಕಿ ಹಚ್ಚುತ್ತೀರ’ ಎಂದು ಹೇಳಿದ್ದು, ಕರಾವಳಿ ಭಾಗದ ಬಿಜೆಪಿ ಸದಸ್ಯರನ್ನು ಕೆರಳಿಸಿತು. ಸಚಿವರು ಕ್ಷಮೆ ಯಾಚಿಸಿಬೇಕು ಎಂದು ಬಿಜೆಪಿ ಸದಸ್ಯರು ಪಟ್ಟುಹಿಡಿದರು. ಈ ವೇಳೆ ಮಾತಿನ ಚಕಮಕಿ ನಡೆಯಿತು.
‘ಸಚಿವರ ಹೇಳಿಕೆಯನ್ನು ಕಡತದಿಂದ ತೆಗೆದುಹಾಕುತ್ತೇನೆ’ ಎಂದು ಸಭಾಧ್ಯಕ್ಷ ಯು.ಟಿ. ಖಾದರ್ ಭರವಸೆ ನೀಡಿದರು. ಅದಕ್ಕೆ ಸಮಾಧಾನಗೊಳ್ಳದ ಬಿಜೆಪಿ ಸದಸ್ಯರು, ಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ಬಂದು ಘೋಷಣೆ ಕೂಗಿದರು. ಈ ವೇಳೆ ಅಶೋಕ ಅವರು ಮಸೂದೆ ಪ್ರತಿ ಹರಿದುಹಾಕಿದರು. ಗದ್ದಲದ ಮಧ್ಯೆಯೇ ಪರಮೇಶ್ವರ ಅವರು ಮಸೂದೆಗೆ ಅಂಗೀಕಾರ ಪಡೆದರು.
ಪರಮೇಶ್ವರ ಹೇಳಿದ್ದೇನು?:
‘ರಾಜ್ಯದಲ್ಲಿ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ ಪ್ರಸರಣ, ಪ್ರಕಟಣೆ ಅಥವಾ ಪ್ರಚಾರ ಮಾಡಿ ಸಮಾಜದ ಸಾಮರಸ್ಯ ಹದಗೆಡಿಸುವುದು ಮತ್ತು ದ್ವೇಷ ಹರಡುವವರಿಗೆ ಕಡಿವಾಣ ಹಾಕಲು ಮತ್ತು ಅಂತಹ ಅಪರಾಧಗಳನ್ನು ಎಸಗುವ ವ್ಯಕ್ತಿ, ವ್ಯಕ್ತಿಗಳು, ಸಂಘಟನೆಯವರಿಗೆ ಶಿಕ್ಷೆ ವಿಧಿಸುವ ಉದ್ದೇಶದಿಂದ ಈ ಮಸೂದೆ ರೂಪಿಸಲಾಗಿದೆ’ ಎಂದು ಪರಮೇಶ್ವರ ಪ್ರತಿಪಾದಿಸಿದರು.
‘ಇತ್ತೀಚೆಗೆ ದ್ವೇಷ ಮಾತು, ಶಬ್ದಗಳ ಬಳಕೆಯಿಂದ ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯ ಎತ್ತಿ ಕಟ್ಟುವ ಕೆಲಸಗಳಾಗುತ್ತಿವೆ. ದ್ವೇಷ ಭಾಷಣಗಳಿಂದ ಎಷ್ಟೋ ಕೊಲೆಗಳು, ಹೊಡೆದಾಟಗಳು ನಡೆದಿವೆ. ಇದರಿಂದ ಸಮಾಜದ ಸ್ವಾಸ್ಥ್ಯ ಮತ್ತು ಸಾಮರಸ್ಯ ಹಾಳಾಗುತ್ತಿದೆ. ಪೂರ್ವಗ್ರಹಪೀಡಿತವಾಗಿ ಧರ್ಮ, ಜನಾಂಗ, ಭಾಷೆ, ಜನ್ಮಸ್ಥಳ, ಜಾತಿ, ಲಿಂಗ ಆಧಾರದಲ್ಲಿ ದ್ವೇಷದ ಭಾಷಣ ಮಾಡುವವರನ್ನು ನಿರ್ಬಂಧಿಸಲು ಈ ಮಸೂದೆ ರೂಪಿಸಲಾಗಿದೆ’ ಎಂದರು.
‘ಗುಪ್ತಚರ ವರದಿ ಆಧರಿಸಿ ಇತ್ತೀಚೆಗೆ ವ್ಯಕ್ತಿಯೊಬ್ಬರನ್ನು ಬೇರೆ ಜಿಲ್ಲೆಗೆ ಹೋಗದಂತೆ ನಿಷೇಧಿಸಿದ್ದೇವೆ. ಹೀಗೆ ಎಷ್ಟು ಜನರನ್ನು ನಿಷೇಧಿಸುವುದು? ಇಂತಹ ದ್ವೇಷ ಭಾಷಣ ಹಾಗೂ ದ್ವೇಷಾಪರಾಧಿಗಳಿಗೆ ಕಡಿವಾಣ ಹಾಕಲು ಕಾನೂನು ಅಗತ್ಯವಿದೆ. ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ಭಾಷೆ, ವಾಸಸ್ಥಳ, ಅಂಗವೈಕಲ್ಯ ಅಥವಾ ಬುಡಕಟ್ಟು ಜನರ ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವುದು ಅಥವಾ ದ್ವೇಷ ಉತ್ತೇಜಿಸುವುದು ಅಥವಾ ಪ್ರಚಾರ ಮಾಡುವುದನ್ನು ದ್ವೇಷಾಪರಾಧ ಎಂದು ಪರಿಗಣಿಸಲಾಗುವುದು’ ಎಂದು ಹೇಳಿದರು.
‘ದ್ವೇಷಾಪರಾಧವನ್ನು ಜಾಮೀನುರಹಿತ ಅಪರಾಧ ಎಂದು ಪರಿಗಣಿಸಲಾಗುವುದು. ನೋಂದಾಯಿತ, ನೋಂದಾಯಿತವಲ್ಲದ ಸಂಘಟನೆಗಳು, ಸಂಸ್ಥೆಗಳು, ವಿದ್ಯುನ್ಮಾನ ಮಾಧ್ಯಮಗಳು, ಯುಟ್ಯೂಬ್‌ಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತವೆ. ದ್ವೇಷ ಬಿತ್ತುವ ಪುಸ್ತಕಗಳು, ಚಿತ್ರಗಳು, ಪ್ರಕಟಣೆಗಳು, ಕರಪತ್ರಗಳಿಗೂ ಅನ್ವಯವಾಗುತ್ತದೆ’ ಎಂದು ಪರಮೇಶ್ವರ ವಿವರಿಸಿದರು.
ಆಗ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ವಿ. ಸುನಿಲ್ ಕುಮಾರ್, ‘ಇದು ಮುಂದಾಲೋಚನೆ ಇಲ್ಲದೆ ತಂದ ಮಸೂದೆಯಾಗಿದ್ದು, ಅಪಾಯದ ಸೂಚನೆ ನೀಡುತ್ತಿದೆ’ ಎಂದರು. ಅದಕ್ಕೆ ಪರಮೇಶ್ವರ, ‘ಬಿಎನ್ಎಸ್ ಕಾಯ್ದೆ ವ್ಯಾಪ್ತಿಗೆ ಬಾರದನ್ನು ಈ ಮಸೂದೆಯಡಿ ತಂದಿದ್ದೇವೆ. ಹೀಗಾಗಿ ಮಸೂದೆಗೆ ಅಂಗೀಕಾರ ನೀಡಬೇಕು’ ಎಂದು ಕೋರಿದರು.
ಶಿಕ್ಷೆ ಪ್ರಮಾಣ ಎಷ್ಟು
*ಮೊದಲ ಬಾರಿಯ ಕೃತ್ಯಕ್ಕೆ 1 ವರ್ಷದಿಂದ 7 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ
*ಪುನರಾವರ್ತಿತವಾದರೆ 2 ವರ್ಷದಿಂದ 10 ವರ್ಷದವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಲು ಮೊದಲು ಅವಕಾಶ ಕಲ್ಪಿಸಲಾಗಿತ್ತು. ಮಸೂದೆ ಅಂಗೀಕರಿಸುವಾಗ, ಪುನರಾವರ್ತಿತ ಪ್ರಕರಣದಲ್ಲಿ ಜೈಲು ಶಿಕ್ಷೆಯನ್ನು 2 ವರ್ಷದಿಂದ 7 ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಕಲ್ಪಿಸಲಾಗಿದೆ.
ಬಿಜೆಪಿ–ಜೆಡಿಎಸ್ ಸಭಾತ್ಯಾಗ
ಮಸೂದೆಯ ಕುರಿತು ತಮ್ಮ ಸದಸ್ಯರಿಗೆ ಮಾತನಾಡಲು ಅವಕಾಶ ನೀಡದ್ದನ್ನು ವಿರೋಧಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ತರಾತುರಿಯಲ್ಲಿ ಮಸೂದೆ ಅಂಗೀಕಾರ ಮಾಡಿದ್ದನ್ನು ಖಂಡಿಸಿ ಭೋಜನ ವಿರಾಮದ ಬಳಿಕ ಬಿಜೆಪಿ–ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿ ನಡೆಸಿದರು. ತಮ್ಮನ್ನು ಮತ್ತು ಆಡಳಿತ
ಪಕ್ಷದವರನ್ನು ಕರೆಸಿ ಚರ್ಚೆ ನಡೆಸುವಂತೆ ವಿರೋಧ ಪಕ್ಷದ ನಾಯಕ
ಆರ್.ಅಶೋಕ, ಬಿಜೆಪಿಯ ವಿ.ಸುನಿಲ್‌ಕುಮಾರ್ ಸಲಹೆ ನೀಡಿದರು. ಬಳಿಕ ಸಭಾಧ್ಯಕ್ಷ ಖಾದರ್ ಅವರು ಕಲಾಪ ಮುಂದೂಡಿ ಸಭೆಯನ್ನು ಕರೆದರು. ಕಲಾಪ ಸೇರಿದಾಗ ವಿರೋಧ ಪಕ್ಷದ ನಾಯಕ ಆರ್.ಅಶೋಕ ಅವರು ಸದನ ಸಮಿತಿಗೆ ಒಪ್ಪಿಸುವಂತೆ ಒತ್ತಾಯಿಸಿದರು. ಸರ್ಕಾರ ಇದಕ್ಕೆ ಒಪ್ಪದೇ ಇದ್ದಾಗ ವಿರೋಧಪಕ್ಷಗಳು ಸಭಾತ್ಯಾಗ ನಡೆಸಿದವು.
ಪೊಲೀಸರು ಹಿಟ್ಲರ್ ಆಗುತ್ತಾರೆ: ಅಶೋಕ
ಕಾಯ್ದೆ ಜಾರಿಯಾದರೆ ಅಭಿವ್ಯಕ್ತಿ ಸ್ವಾತಂತ್ರ್ಯ ಮರೆಯಾಗಿ, ಪೊಲೀಸರು ಹಿಟ್ಲರ್‌ಗಳಂತೆ ವರ್ತಿಸತೊಡಗುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
ಮಸೂದೆ ವಿರೋಧಿಸಿ ಮಾತನಾಡಿದ ಅವರು, ‘ದ್ವೇಷ ಭಾಷಣಕ್ಕೆ ಬಿಎನ್ಎಸ್ ಕಾಯ್ದೆಯಡಿ ಶಿಕ್ಷೆ ವಿಧಿಸುವ ಅವಕಾಶ ಇದೆ. ರಾಜಕೀಯ ದ್ವೇಷ ತೀರಿಸಿಕೊಳ್ಳಲು ಮಸೂದೆ ಬ್ರಹ್ಮಾಸ್ತ್ರವಾಗಲಿದೆ. ಮಸೂದೆ ತಂದಿರುವುದರ ಹಿಂದೆ ಮತ ಬ್ಯಾಂಕ್ ರಾಜಕಾರಣವಿದೆ. ಯಾರನ್ನೋ ಸಂತೃಪ್ತಿಪಡಿಸಲು ಯಾರನ್ನೋ ಜೈಲಿಗೆ ಹಾಕಲಾಗುತ್ತದೆ. ಲೋಕಸಭೆಯಲ್ಲಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಕಾಂಗ್ರೆಸ್ ಇಲ್ಲಿ ಸ್ವಾತಂತ್ರ್ಯ ಹತ್ತಿಕ್ಕಲಿದೆ’ ಎಂದರು.
‘ಪತ್ರಿಕಾ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಿದೆ. ಭ್ರಷ್ಟಾಚಾರದ ಸುದ್ದಿ ಪ್ರಸಾರ ಮಾಡಿದವರು ಜೈಲು ಸೇರಬೇಕಾಗುತ್ತದೆ. ವ್ಯಕ್ತಿ ಹೇಳಿಕೆ ನೀಡಿದರೆ, ಸಂಸ್ಥೆ ಮೇಲೆ ಕೇಸ್. ಯಾವ ಉದ್ದೇಶಕ್ಕೆ ಈ ಮಸೂದೆ ತರುತ್ತಿದ್ದೀರಿ? ಪೊಲೀಸ್ ಇಲಾಖೆ ಮತ್ತಷ್ಟು ಭ್ರಷ್ಟಾಚಾರ, ದುಡ್ಡು ವಸೂಲಿ ಮಾಡಲು ಅವಕಾಶ ನೀಡುತ್ತಿದ್ದೀರಾ? ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರಿಂದ ಮತ್ತೇನು ನಿರೀಕ್ಷೆ ಮಾಡಲು ಸಾಧ್ಯ?’ ಎಂದು ಟೀಕಿಸಿದರು.
‘ಕರಾವಳಿ ಬೆಂಕಿ’ಯ ಕಿಡಿ
ಚರ್ಚೆಯ ವೇಳೆ ಸಚಿವ ಸಂತೋಷ್ ಲಾಡ್ ಅವರ ಮಾತಿನಿಂದ ಕೆರಳಿದ ಕರಾವಳಿ ಭಾಗದ ಬಿಜೆಪಿ ಸದಸ್ಯರು, ‘ಅಂಬೇಡ್ಕರ್ ಸತ್ತಾಗ ಸಮಾಧಿ ಮಾಡಲು ದೆಹಲಿಯಲ್ಲಿ ಜಾಗ ಕೊಡಲಿಲ್ಲ’ ಎಂದು ಆಡಳಿತ ಪಕ್ಷದವರ ಕಾಲೆಳೆದರು. ಈ ವೇಳೆ ಸದನದಲ್ಲಿ ಗದ್ದಲ ಏರ್ಪಟ್ಟಿತು. ಆಗ ಸಚಿವ ಬೈರತಿ ಸುರೇಶ್, ‘ನೀವು ಏಕೆ ಪಕ್ಷಪಾತಿಗಳಾಗಿದ್ದೀರಿ’ ಎಂದು ಪ್ರಶ್ನಿಸಿದರು. ಅದಕ್ಕೆ ಕರಾವಳಿ ಭಾಗದ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ರೊಚ್ಚಿಗೆದ್ದ ಸಚಿವ ಬೈರತಿ, ‘ಕರಾವಳಿ ಯಲ್ಲಿ ಬೆಂಕಿ ಹಾಕಿ, ಈಗ ಇಲ್ಲಿ ಏಕೆ ಬೆಂಕಿ ಹಾಕುವಿರಿ’ ಎಂದು ಹರಿಹಾಯ್ದರು. ಈ ಮಾತಿನಿಂದ ಸದನದಲ್ಲಿ ಗದ್ದಲ ಹೆಚ್ಚಾಯಿತು. ಕರಾವಳಿ ಭಾಗದ ಶಾಸಕರು ಆಕ್ರೋಶ ವ್ಯಕ್ತಪಡಿಸಿದಾಗ ಕೆರಳಿದ ಸಚಿವ ಬೈರತಿ, ‘ನಿಮ್ಮ ಬಾಸಿಸಂಗೆ ಹೆದರುವುದಿಲ್ಲ’ ಎಂದು ಕಿಡಿಕಾರಿದರು. ಬಿಜೆಪಿಯ ವಿ.ಸುನಿಲ್ ಕುಮಾರ್, ‘ಕರಾವಳಿ ಬಿಟ್ಟಿ ಬಿದ್ದಿದೆಯಾ? ಕರಾವಳಿ ಬಗ್ಗೆ ಹಗುರವಾಗಿ ಮಾತನಾಡಬಾರದು’ ಎಂದರು. ‘ಕರಾವಳಿ ಬಗ್ಗೆ ಹಗುರವಾಗಿ ಮಾತನಾಡಿದ ಸಚಿವರು ಕ್ಷಮೆ ಕೇಳಬೇಕು’ ಎಂದು ಆ ಭಾಗದ ಸದಸ್ಯರು ಆಗ್ರಹಿಸಿದರು. ‘ಸಭಾಧ್ಯಕ್ಷರೇ ನೀವೂ ಕರಾವಳಿ ಭಾಗದವರು. ಇಂತಹ ಮಾತು ಕೇಳಿಯೂ ನೀವು ಹೇಗೆ ಪೀಠದ ಮೇಲೆ ಕೂರುತ್ತೀರಿ’ ಎಂದು ಕೇಳಿದರು. ಬಳಿಕ ಬಿಜೆಪಿ, ಜೆಡಿಎಸ್ ಶಾಸಕರು ಸಭಾಧ್ಯಕ್ಷರ ಪೀಠದ ಎದುರು ಪ್ರತಿಭಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.