ADVERTISEMENT

National Herald | ಬೆಳಗಾವಿ: ಕೇಂದ್ರದ ವಿರುದ್ಧ ಕಾಂಗ್ರೆಸ್‌ ನಾಯಕರ ಪ್ರತಿಭಟನೆ

ನ್ಯಾಷನಲ್ ಹೆರಾಲ್ಡ್ ವಿರುದ್ಧ ಪ್ರಕರಣ ದಾಖಲು ವಿರೋಧಿಸಿ ಸುವರ್ಣ ವಿಧಾನಸೌಧದ ಬಳಿ ಒಂದೂವರೆ ತಾಸು ಧರಣಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:50 IST
Last Updated 17 ಡಿಸೆಂಬರ್ 2025, 23:50 IST
ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಧರಣಿ ನಡೆಸಲಾಯಿತು– ಚಿತ್ರ: ರಂಜು ಪಿ
ಮುಖ್ಯಮಂತ್ರಿ ಸಿದ್ದರಾಮಯ್ಯ ,ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಧರಣಿ ನಡೆಸಲಾಯಿತು– ಚಿತ್ರ: ರಂಜು ಪಿ   

ಬೆಳಗಾವಿ: ‘ನ್ಯಾಷನಲ್ ಹೆರಾಲ್ಡ್’ ವಿರುದ್ಧದ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ರಾಜಕೀಯಪ್ರೇರಿತ ಕ್ರಮ ಕೈಗೊಳ್ಳುತ್ತಿದೆ ಎಂದು ದೂರಿ ರಾಜ್ಯದ ಕಾಂಗ್ರೆಸ್ ನಾಯಕರು ಬುಧವಾರ ಸುವರ್ಣ ವಿಧಾನಸೌಧದ ಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ‌ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೆಲ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಒಂದೂವರೆ ತಾಸು, ಸದನ ಕಲಾಪಗಳಿಂದ ಹೊರಗುಳಿದು ಧರಣಿ ಕುಳಿತರು. ಬೆಳಿಗ್ಗೆ 11.40ರ ನಂತರ ಸದನದೊಳಗೆ ಹೋದರು.

ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ‌ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಜಾರಿ‌ ನಿರ್ದೇಶನಾಲಯ (ಇ.ಡಿ) ವಿರುದ್ಧ ಧಿಕ್ಕಾರ ಕೂಗಿದರು. ‘ಪ್ರಧಾ‌ನಿ‌ ಮೋದಿ ಲಜ್ಜೆಗೇಡಿ, ಅಮಿತ್ ಶಾಗೆ ಛೀಮಾರಿ, ದಮನಕಾರಿ ನೀತಿಯ ಕೇಂದ್ರ ಸರ್ಕಾರ ಮತಿಗೇಡಿ’ ಎಂದು ಶಾಸಕರು, ಸಚಿವರು ನಿರಂತರ ಘೋಷಣೆ ಕೂಗಿದರು.

ADVERTISEMENT

‘ಬಿಜೆಪಿಯವರಿಗೆ ಮಹಾತ್ಮ ಗಾಂಧಿ ಅವರನ್ನು ಕಂಡರೆ ಆಗಿಬರುವು
ದಿಲ್ಲ. ಅಂಬೇಡ್ಕರ್ ಅವರನ್ನು ಸಹಿಸಿ
ಕೊಳ್ಳಲ್ಲ. ಗಾಂಧಿ ಪರಿವಾರ ನಾಶಪಡಿಸಲು ಇನ್ನಿಲ್ಲದ ಸುಳ್ಳು ಆರೋಪ‌ ಹೊರೆಸಿದ್ದಾರೆ. ಮಹಾತ್ಮ‌ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಹೆಸರನ್ನು ಜಿ ರಾಮ್‌ ಜಿ ಎಂದು ಬದಲಿಸಿದ್ದಾರೆ. ಗಾಂಧೀಜಿ ವಿರುದ್ಧವೂ ಸರ್ವಾಧಿಕಾರಿ ಧೋರಣೆ ತಾಳಿದ್ದಾರೆ’ ಎಂದು ಸಿದ್ದರಾಮಯ್ಯ ಹೇಳಿದರು.

‘ಬಿಜೆಪಿ ದ್ವೇಷ ರಾಜಕಾರಣದಲ್ಲಿ ತೊಡಗಿದ್ದು, ಕಾಂಗ್ರೆಸ್ ನಾಯಕರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಅಪಪ್ರಚಾರ ಮಾಡುತ್ತಿದೆ. ಬಿಜೆಪಿಯ ಈ ಕುತಂತ್ರಕ್ಕೆ ಉತ್ತರವಾಗಿ ನ್ಯಾಯಾಲಯದಲ್ಲಿ ನ್ಯಾಯ ಸಿಕ್ಕಿದೆ. ಬಿಜೆಪಿ ಸರ್ಕಾರದ ತಪ್ಪುಗಳನ್ನು ಮರೆ ಮಾಚಲು ವಿರೋಧ ಪಕ್ಷದ ನಾಯಕರ ಮೇಲೆ ಇಂಥ ಆರೋಪ ಮಾಡಿ, ನ್ಯಾಯಾಲಯಕ್ಕೆ ಓಡಾಡುವಂತೆ ಮಾಡುವುದು ಇವರ ಕುತಂತ್ರ’ ಎಂದರು.

ಸಚಿವರಾದ ಎಚ್.ಕೆ.ಪಾಟೀಲ, ಲಕ್ಷ್ಮೀ ಹೆಬ್ಬಾಳಕರ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್‌ ಮಾತನಾಡಿದರು.

ನರೇಗಾ ಯೋಜನೆಯ ಹೆಸರಿನಲ್ಲಿ ಈಗ ಗಾಂಧೀಜಿ ಹೆಸರು ತೆಗೆದು ಜಿ.ರಾಮ್‌ ಜಿ ಹೆಸರು ಸೇರಿಸಿದ್ದಾರೆ. ಮುಂದಿನ ದಿನಗಳಲ್ಲಿ ಜಿ.ರಾಮ್‌ ಜಿ ಹೋಗಿ ಜಿ‌‌ ಮೋದಿ ಜಿ ಅಗುವುದರಲ್ಲಿ ಸಂದೇಹವಿಲ್ಲ
ಸಿದ್ದರಾಮಯ್ಯ ಮುಖ್ಯಮಂತ್ರಿ
ಯೋಜನೆಗಳ ಹೆಸರಿನಿಂದ ಗಾಂಧೀಜಿ ಹೆಸರು ತೆಗೆದಿದ್ದೀರಿ. ನೋಟುಗಳ ಮೇಲೆ ಇರುವ ಗಾಂಧೀಜಿ ಭಾವಚಿತ್ರ ತೆಗೆದು ಗೋಡ್ಸೆ ಭಾವಚಿತ್ರ ಹಾಕುತ್ತೀರೇನು?
ಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ

‘ಷೇರು ಇಟ್ಟುಕೊಂಡರೂ ಪ್ರಕರಣ’

‘ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿ ಕುಟುಂಬ ಸಾವಿರಾರು ಕೋಟಿ ಮೌಲ್ಯದ ಆಸ್ತಿಯನ್ನು ಪಕ್ಷಕ್ಕೆ ಕೊಟ್ಟುಬಿಟ್ಟರು. ಒಂದೆರಡು ಷೇರುಗಳು ಅವರವರಿಗೆ ಬರುತ್ತವೆ. ಅದನ್ನೇ ಅಕ್ರಮ ಎನ್ನುವುದು ಎಷ್ಟು ಸರಿ’ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು. ‘ದುರುದ್ದೇಶದಿಂದ ಕಾಂಗ್ರೆಸ್ ನಾಯಕ‌ರ‌ ಮೇಲೆ‌ ಪ್ರಕರಣ ದಾಖಲಿಸಿ‌‌ ಕೇಂದ್ರ ಹಿಂಸೆ‌‌ ನೀಡಿದೆ. ಇವರು ಎಂಥವರು ಎಂಬುದನ್ನು ನ್ಯಾಯಾಲಯದ ಆದೇಶವೇ ಬಹಿರಂಗ ಮಾಡಿದೆ. ಇವತ್ತಿನಿಂದ ಬಿಜೆಪಿ ಅವನತಿ ಆರಂಭವಾಗಿದೆ’ ಎಂದು ಕಿಡಿ ಕಾರಿದರು. ‘ನ್ಯಾಷನಲ್‌ ಹೆರಾಲ್ಡ್’ ಪತ್ರಿಕೆಯನ್ನು ನೆಹರೂ ಅವರು ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಆರಂಭಿಸಿದರು. ಕಾಂಗ್ರೆಸ್‌ ನವರಾದ ನಾವು ಪತ್ರಿಕೆಗೆ ಹಣ ಕೊಟ್ಟಿದ್ದೇವೆ. ನನ್ನ ಮೇಲೆ ನನ್ನ ತಮ್ಮನ ಮೇಲೂ ಈ ಸಂಬಂಧ ಪ್ರಕರಣ ದಾಖಲಿಸಿದ್ದಾರೆ. ನ್ಯಾಷನಲ್‌ ಹೆರಾಲ್ಡ್‌ನ ಹಣ ಕಾಂಗ್ರೆಸ್‌ ನಾಯಕರ ಮನೆಗೇನೂ ಹೋಗಿಲ್ಲ. ದ್ವೇಷದ ರಾಜಕಾರಣ ಬಿಟ್ಟು ಬಿಡಿ ಎಂದು ನ್ಯಾಯಾಲಯ ಕೆಂದ್ರ ಸರ್ಕಾರಕ್ಕೆ ಚಾಟಿ ಬೀಸಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.