
ಬೆಳಗಾವಿ: ವಿಧಾನಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಈ ಬಾರಿ ಮೈ ಕೊರೆಯುವ ಚಳಿ ಮಧ್ಯೆಯೂ 118 ಪ್ರತಿಭಟನೆ ನಡೆದವು. ಪ್ರತಿಭಟನಕಾರರಿಗೆ ಎಂದಿನಂತೆ ಭರವಸೆಗಳಷ್ಟೇ ಉಳಿದವು. ಸಂಘಟನಗಳ ಬೇಡಿಕೆಗಳಿಗೆ ಸ್ಪಷ್ಟ ಪರಿಹಾರ ಸಿಗಲಿಲ್ಲ, ತಾರ್ಕಿಕ ಅಂತ್ಯ ಕಾಣಲಿಲ್ಲ.
ಸುವರ್ಣ ವಿಧಾನಸೌಧ ಬಳಿ ಹಾಗೂ ನಗರದ ಬಿ.ಎಸ್.ಯಡಿಯೂರಪ್ಪ ಮಾರ್ಗದ ಬಳಿ ಈ ಬಾರಿ ಪ್ರತಿಭಟನೆಗಳಿಗಾಗಿಯೇ ವೇದಿಕೆ ನಿರ್ಮಿಸಲಾಗಿತ್ತು. ಡಿಸೆಂಬರ್ 8 ರಿಂದ 19ರವರೆಗೆ (10 ದಿನ) ಇವೆರಡೂ ವೇದಿಕೆಗಳು ಪ್ರತಿಭಟನಕಾರರಿಂದ ಕಿಕ್ಕಿರಿದು ತುಂಬಿದ್ದವು. ನಿರಂತರ ಘೋಷಣೆಗಳು ಕಿವಿಗೆ ಬಿದ್ದವು.
‘ಬೆಳಗಾವಿ ಅಧಿವೇಶನ ಪ್ರತಿಭಟನೆಗೆ ಸೀಮಿತ’ ಎಂಬ ಆರೋಪವಿದೆ. ಹಾಗಾಗಿ ಅಧಿವೇಶನಕ್ಕೂ ಮೊದಲೇ ವಿವಿಧ ಸಂಘಟನೆಯವರ ಜತೆ ಸಭೆ ನಡೆಸಿ, ಪ್ರತಿಭಟನೆಗಳ ಅಬ್ಬರ ತಗ್ಗಿಸಲು ಜಿಲ್ಲಾಡಳಿತ ಯೋಜಿಸಿತ್ತು.
ಇದರ ಮಧ್ಯೆಯೂ, ರೈತರು, ಅಂಗವಿಕಲರು, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳು, ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಪ್ರಥಮದರ್ಜೆ ಕಾಲೇಜು ಅತಿಥಿ ಉಪನ್ಯಾಸಕರು, ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ನಿವೃತ್ತ ನೌಕರರು, ವಿವಿಧ ಸಮುದಾಯಗಳ ಸಂಘಟನೆಗಳವರು ಧರಣಿ ಮಾಡಿ ತಮ್ಮ ಹಕ್ಕೊತ್ತಾಯ ಮಂಡಿಸಿದರು.
‘ಈ ಬಾರಿ 118 ಪ್ರತಿಭಟನೆ ನಡೆದಿವೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ‘ಪ್ರಜಾವಾಣಿ’ಗೆ ತಿಳಿಸಿದರು.
ದಿನಕ್ಕೆ ಒಬ್ಬರು ಅಥವಾ ಇಬ್ಬರು ಸಚಿವರು ಪ್ರತಿಭಟನಾ ವೇದಿಕೆಗಳತ್ತ ಬಂದು, ಎಲ್ಲ ಟೆಂಟುಗಳನ್ನು ಸುತ್ತಾಡಿ ಮನವಿ ಸ್ವೀಕರಿಸಿದರು. ಹೆಚ್ಚಿನ ಬೇಡಿಕೆಗಳಿಗೆ ಖಚಿತ ಸ್ಪಂದನೆ ಸಿಗಲಿಲ್ಲ.
‘ನಿಮ್ಮ ಬೇಡಿಕೆ ಈಡೇರಿಸಲು ಪ್ರಯತ್ನಿಸುತ್ತೇನೆ. ಮುಖ್ಯಮಂತ್ರಿ ಮತ್ತು ಸಂಬಂಧಿತ ಸಚಿವರ ಗಮನಕ್ಕೆ ತರುತ್ತೇನೆ’ ಎಂದು ಸಚಿವರು ಆಶ್ವಾಸನೆ ನೀಡಿದರು. ಇಷ್ಟಕ್ಕೆ ಪ್ರತಿಭಟನಕಾರರು ತೃಪ್ತರಾಗಬೇಕಾಯಿತು.
ರಾಜ್ಯದ ವಿವಿಧೆಡೆಯ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಸಂಬಂಧಿತ ಸಚಿವರು ವೇದಿಕೆಗಳತ್ತ ಬರಲಿಲ್ಲ. ಕೆಲವರು ಕಾಟಾಚಾರಕ್ಕೆ ಎಂಬಂತೆ ಮನವಿ ಪಡೆದುಹೋದರು.ಶಿವಲಿಂಗ ಟಿರಕಿ ಅಧ್ಯಕ್ಷ ಕರ್ನಾಟಕ ರಾಜ್ಯ ನೇಕಾರ ಸೇವಾಸಂಘ
ಅಧಿವೇಶನ ವೇಳೆ ಪ್ರತಿಭಟಿಸಿದವರ ಪೈಕಿ ನಮ್ಮ ಹಂತದಲ್ಲಿ ಬಗೆಹರಿಸಬೇಕಿರುವ ಬೇಡಿಕೆ ಈಡೇರಿಸುತ್ತೇವೆ. ಉಳಿದವುಗಳನ್ನು ಆಯಾ ಇಲಾಖೆ ಸಚಿವರ ಗಮನಕ್ಕೆ ತರುತ್ತೇವೆಮೊಹಮ್ಮದ್ ರೋಷನ್ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.