ADVERTISEMENT

ಬೆಂಗಳೂರು ಗಲಭೆ ಹಿಂದೆ ಯಾವುದೇ ಸಂಘಟನೆಯಿದ್ದರೂ ನಿಷೇಧಿಸಲು ಹೊರಟ್ಟಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 6:17 IST
Last Updated 15 ಆಗಸ್ಟ್ 2020, 6:17 IST
ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ
ಜೆಡಿಎಸ್‌ ಮುಖಂಡ ಬಸವರಾಜ ಹೊರಟ್ಟಿ   

ಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದಲ್ಲಿ ಯಾವುದೇ ಸಂಘಟನೆಗಳ ಪಾತ್ರವಿರುವುದು ಸಾಬೀತಾದರೆ ಸರ್ಕಾರ ಯಾವ ಮುಲಾಜು ಇಲ್ಲದೆ ಅವುಗಳನ್ನು ನಿಷೇಧಿಸಬೇಕು. ಯಾವ ರಾಜಕೀಯ ಪಕ್ಷಗಳೂ ಜನರ ಜೀವದ ಜೊತೆ ಆಟವಾಡಬಾರದು ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ತಾಲ್ಲೂಕು ಆಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶನಿವಾರ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ಎಲ್ಲ ಪಕ್ಷಗಳು ದಿನದ 24 ಗಂಟೆಯೂ ವೋಟ್‌ ರಾಜಕೀಯ ಮಾಡಿದರೆ ಹೇಗೆ? ನಾವು ಕೇವಲ ಮತಗಳನ್ನು ನೋಡುತ್ತೇವೆ; ಹೊರತು ಜನರ ಸಂಕಟವನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ಜನರ ಮರಣದ ಸಮಯದಲ್ಲಿಯೂ ರಾಜಕೀಯ ಸರಿಯೇ? ಇದರಿಂದ ಮರ್ಯಾದೆಯಿದ್ದವರು ರಾಜಕಾರಣಕ್ಕೆ ಹೋಗಲೇಬಾರದು ಎನ್ನುವ ಅಭಿಪ್ರಾಯ ಜನರಲ್ಲಿ ಮೂಡುತ್ತಿದೆ. ನಾನು 40 ವರ್ಷಗಳಿಂದ ರಾಜಕೀಯ ನೋಡಿಕೊಂಡು ಬಂದಿದ್ದೇನೆ. ಈಗ ರಾಜಕೀಯ ಮೌಲ್ಯ ಎಲ್ಲಿ ಉಳಿದಿದೆ’ ಎಂದು ಬೇಸರದಿಂದ ಪ್ರಶ್ನಿಸಿದರು.

’ನಮ್ಮನ್ನು ನೋಡಿ ಕಲಿಯುವ ರೀತಿಯಲ್ಲಿ ನಾವು ನಡೆದುಕೊಳ್ಳಬೇಕು. ಬೆಂಗಳೂರಿನ ಘಟನೆ ಕುರಿತು ತನಿಖೆಗೆ ಸಮಿತಿ ರಚಿಸಲಾಗಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಆಗಲೂ ಮೃದುಧೋರಣೆ ತೋರಿದರೆ ಏನೂ ಮಾಡಿದರೂ ನಡೆಯುತ್ತದೆ ಎನ್ನುವ ಭಾವನೆ ಜನರಲ್ಲಿ ಮೂಡುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

ಘಟನೆ ಪೂರ್ವನಿಯೋಜಿತ ಎಂದು ಎಲ್ಲರಿಗೂ ಗೊತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರ ಹಾಗೂ ಗುಪ್ತಚರ ಇಲಾಖೆ ಸಂಪೂರ್ಣ ವಿಫಲವಾಗಿದೆ. ರಾಜ್ಯಕ್ಕೆ ಇದು ಕಪ್ಪು ಚುಕ್ಕೆ ಎಂದರು.

ಸಾರ್ವಜನಿಕ ಗಣೇಶೋತ್ಸವ ಪ್ರತಿಷ್ಠಾಪನೆ ಬಗ್ಗೆ ಸರ್ಕಾರದ ನಿರ್ಧಾರವನ್ನು ಮಾಧ್ಯಮದವರು ಗಮನ ಸೆಳೆದಾಗ ‘ಸರ್ಕಾರ ದಿಢೀರನೆ ಈ ನಿರ್ಧಾರ ತೆಗೆದುಕೊಳ್ಳಬಾರದಿತ್ತು. ಜನರ ಭಾವನೆಗಳಿಗೆ ಸಂಬಂಧಿಸಿದ ವಿಷಯವಾದ ಕಾರಣ ಷರತ್ತುಗಳನ್ನು ವಿಧಿಸಿ ಅನುಮತಿ ಕೊಡಬೇಕಿತ್ತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.