ADVERTISEMENT

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 2026ರ ಜೂನ್‌ಗೆ ಪೂರ್ಣ: ನಿತಿನ್‌ ಗಡ್ಕರಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 21:26 IST
Last Updated 22 ಆಗಸ್ಟ್ 2025, 21:26 IST
ನಿತಿನ್‌ ಗಡ್ಕರಿ
ನಿತಿನ್‌ ಗಡ್ಕರಿ   

ನವದೆಹಲಿ: ಭೂಸ್ವಾಧೀನ ವಿಳಂಬ ಸೇರಿದಂತೆ ವಿವಿಧ ಕಾರಣಗಳಿಂದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂದು ಕೇಂದ್ರ ಹೆದ್ದಾರಿ ಹಾಗೂ ಭೂಸಾರಿಗೆ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ. 

ಲೋಕಸಭೆಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್‌ ಕೇಳಿದ್ದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ. 

ಈ ಎಕ್ಸ್‌ಪ್ರೆಸ್‌ವೇ ಬೆಂಗಳೂರು–ಚೆನ್ನೈ ಕೈಗಾರಿಕಾ ಕಾರಿಡಾರ್‌ನ ಭಾಗವಾಗಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಎರಡೂವರೆ ಗಂಟೆಗಳಿಗೆ ಇಳಿಯಲಿದೆ. 262.4 ಕಿ.ಮೀ. ಉದ್ದದ ಮಾರ್ಗಕ್ಕೆ ₹15,188 ಕೋಟಿ ವೆಚ್ಚ ಮಾಡಲಾಗುತ್ತಿದೆ. ಸದ್ಯ ನಾಲ್ಕು ಪ್ಯಾಕೇಜ್‌ಗಳ ಕೆಲಸ ಮುಗಿದಿದ್ದು, ಎಲ್ಲ ಪ್ಯಾಕೇಜ್‌ಗಳ ಕಾಮಗಾರಿಗಳು 2026ಕ್ಕೆ ಮುಗಿಯಲಿವೆ ಎಂದು ಸಚಿವರು ತಿಳಿಸಿದ್ದಾರೆ. 

ADVERTISEMENT
ಗಡುವು ವಿಸ್ತರಣೆ
ಈ ಯೋಜನೆಯು 2024ರ ಆರಂಭದಲ್ಲಿ ಪೂರ್ಣಗೊಳ್ಳ ಲಿದೆ ಎಂದು ಗಡ್ಕರಿ ಈ ಹಿಂದೆ ಭರವಸೆ ನೀಡಿದ್ದರು. 2024ರ ಫೆಬ್ರುವರಿಯಲ್ಲಿ ನಡೆದ ಸಂಸತ್‌ ಅಧಿವೇಶನದಲ್ಲಿ ಗಡ್ಕರಿ, ‘ಈ ಕಾಮಗಾರಿ ಡಿಸೆಂಬರ್‌ಗೆ ಮುಗಿಯಲಿದೆ’ ಎಂದು ಅಭಯ ನೀಡಿದ್ದರು. ‘ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ರಾಜ್ಯ ಸರ್ಕಾರಗಳ ಸಹಕಾರ ಅಗತ್ಯ ಎಂದು ಹೇಳಿದ್ದರು. ಗಡುವು ಮೀರಿ ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. 
ರಾಜ್ಯದಲ್ಲಿ ಪೂರ್ಣ
ಭೂಸ್ವಾಧೀನ ವಿಳಂಬ, ಸಾರ್ವಜನಿಕರ ವಿರೋಧ, ಸರ್ವಿಸ್‌ ರಸ್ತೆ ಹಾಗೂ ಮುಖ್ಯ ರಸ್ತೆಯಿಂದ ಪ್ರವೇಶಕ್ಕೆ ಬೇಡಿಕೆ, ಧಾರ್ಮಿಕ ಕೇಂದ್ರಗಳ ಸ್ಥಳಾಂತರಕ್ಕೆ ಪ್ರತಿರೋಧ ಮತ್ತಿತರ ಕಾರಣಗಳಿಂದ ಕಾಮಗಾರಿ ತಡವಾಗಿದೆ ಎಂದು ಸಚಿವರು ಉತ್ತರ ನೀಡಿದ್ದಾರೆ. ಕರ್ನಾಟಕದಲ್ಲಿ ಮೂರು ಪ್ಯಾಕೇಜ್‌ಗಳ ಕಾಮಗಾರಿಗಳು ಮುಗಿದಿವೆ. ತಮಿಳುನಾಡು ಹಾಗೂ ಆಂಧ್ರ ಪ್ರದೇಶದಲ್ಲಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.