ADVERTISEMENT

ಯೋಜನೆಗೆ ಭೂ ವೆಚ್ಚ ಭಾರ: ರಾಜ್ಯಕ್ಕಿಲ್ಲ ವರ್ತುಲ ರೈಲು?

ಭೂಸ್ವಾಧೀನಕ್ಕೆ ₹60 ಸಾವಿರ ಕೋಟಿ ಹೊರೆ

ಮಂಜುನಾಥ್ ಹೆಬ್ಬಾರ್‌
Published 23 ಅಕ್ಟೋಬರ್ 2025, 23:30 IST
Last Updated 23 ಅಕ್ಟೋಬರ್ 2025, 23:30 IST
ವರ್ತುಲ ರೈಲು ವಿನ್ಯಾಸ 
ವರ್ತುಲ ರೈಲು ವಿನ್ಯಾಸ    

ನವದೆಹಲಿ: ಬೆಂಗಳೂರು ನಗರದ ಸುತ್ತಮುತ್ತಲಿನ ಪ್ರಮುಖ ಪಟ್ಟಣಗಳನ್ನು ಸಂಪರ್ಕಿಸುವ ದೇಶದ ಅತಿದೊಡ್ಡ ವೃತ್ತರೈಲು ಸಂಪರ್ಕಜಾಲ (ಸರ್ಕ್ಯುಲರ್‌ ರೈಲ್ವೆ) ನಿರ್ಮಿಸುವ ಯೋಜನೆ ಕೈಬಿಡಲು ರೈಲ್ವೆ ಇಲಾಖೆ ಮುಂದಾಗಿದೆ. 

ರೈಲ್ವೆ ಮಾರ್ಗ ನಿರ್ಮಾಣಕ್ಕೆ ಬೆಂಗಳೂರು ಸುತ್ತಮುತ್ತ 2,500 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಭೂಸ್ವಾಧೀನಕ್ಕೆ ₹60 ಸಾವಿರ ಕೋಟಿ ವೆಚ್ಚ ಆಗಲಿದೆ. ಮಾರ್ಗ ನಿರ್ಮಾಣಕ್ಕೆ ಕನಿಷ್ಠ ₹20 ಸಾವಿರ ಕೋಟಿ ಬೇಕು. ಹೀಗಾಗಿ, ಈ ಯೋಜನೆ ಕಾರ್ಯಸಾಧು ಅಲ್ಲ ಎಂಬ ನಿಲುವಿಗೆ ಬರಲಾಗಿದೆ ಎಂದು ರೈಲ್ವೆ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ. 

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು 240 ಕಿ.ಮೀ.ಯ ವರ್ತುಲ ರೈಲು ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು 2023ರ ನವೆಂಬರ್‌ನಲ್ಲಿ ಘೋಷಿಸಿದ್ದರು. ಮುಂದಿನ 50 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ವರ್ತುಲ ರೈಲ್ವೆ ಯೋಜನೆ ರೂಪಿಸಲಾಗಿದೆ. ಈ ಯೋಜನೆಯು ನಿಡವಂದ–ದೊಡ್ಡಬಳ್ಳಾಪುರ–ದೇವನಹಳ್ಳಿ–ಮಾಲೂರು–ಹೀಲಲಿಗೆ–ಸೋಲೂರು–ನಿಡವಂದ ನಿಲ್ದಾಣಗಳನ್ನು ಸಂಪರ್ಕಿಸುವ ಉದ್ದೇಶ ಹೊಂದಿದೆ ಎಂದೂ ತಿಳಿಸಿದ್ದರು. ಯೋಜನೆಯ ಸಾಧಕ-ಬಾಧಕಗಳನ್ನು ತಿಳಿಯಲು ₹ 7 ಕೋಟಿ ವೆಚ್ಚದಲ್ಲಿ ಸರ್ವೆ ನಡೆಸಲಾಗಿತ್ತು.

ADVERTISEMENT

ನೈರುತ್ಯ ರೈಲ್ವೆಯ ನೇತೃತ್ವದಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗುತ್ತಿದೆ. ಭೂಸ್ವಾಧೀನಕ್ಕೆ ಆನೇಕಲ್‌, ಚನ್ನರಾಯಪಟ್ಟಣ ಮತ್ತಿತರ ಕಡೆಗಳಲ್ಲಿ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರಸ್ತಾವಿತ ಮಾರ್ಗದ ವಿನ್ಯಾಸ ಬದಲಿಸಬೇಕು ಎಂದು ವಡ್ಡರಹಳ್ಳಿ ಹಾಗೂ ತಿರುಮಗೊಂಡನಹಳ್ಳಿ ರೈತರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ, ಡಿಪಿಆರ್ ಆರು ತಿಂಗಳುಗಳಷ್ಟು ವಿಳಂಬವಾಗಿದೆ. ಡಿಸೆಂಬರ್‌ನಲ್ಲಿ ರೈಲ್ವೆ ಇಲಾಖೆಗೆ ಡಿಪಿಆರ್ ಸಲ್ಲಿಕೆಯಾಗಲಿದೆ. ಆ ಬಳಿಕ, ಆರ್ಥಿಕ–ತಾಂತ್ರಿಕ ಕಾರ್ಯಸಾಧ್ಯತೆ ಗಮನಿಸಿ ಯೋಜನೆ ಕೈಬಿಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು‘ ಎಂದು ಮೂಲಗಳು ತಿಳಿಸಿವೆ. 

‘ಕರ್ನಾಟಕಕ್ಕೆ ರೈಲ್ವೆ ನೀಡುತ್ತಿರುವ ವಾರ್ಷಿಕ ಅನುದಾನ ₹7,500 ಕೋಟಿ. ಹತ್ತಾರು ಯೋಜನೆಗಳಿಗೆ ಈ ಅನುದಾನ ಹಂಚಿಹೋಗುತ್ತದೆ. ಪ್ರತಿವರ್ಷ 70–80 ಕಿ.ಮೀ. ವರ್ತುಲ ರೈಲು ಮಾರ್ಗ ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಭೂಸ್ವಾಧೀನ ಹಾಗೂ ಮಾರ್ಗ ನಿರ್ಮಾಣಕ್ಕೆ ಪ್ರತಿವರ್ಷ ಕನಿಷ್ಠ ₹5 ಸಾವಿರ ಕೋಟಿಯಾದರೂ ಅನುದಾನ ಒದಗಿಸಬೇಕಾಗುತ್ತದೆ. ಒಂದೇ ಯೋಜನೆಗೆ ಈ ಮೊತ್ತ ಮಂಜೂರು ಆಗುವುದೂ ಕಷ್ಟ’ ಎಂದೂ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. 

ವರ್ತುಲ ರೈಲು 

  • ಮೊದಲ ಹಂತ: ನಿಡವಂದ–ದೊಡ್ಡಬಳ್ಳಾಪುರ– ದೇವನಹಳ್ಳಿ–ಮಾಲೂರು (96 ಕಿ.ಮೀ)

  • ಎರಡನೇ ಹಂತ: ಮಾಲೂರು– ಆನೇಕಲ್ ರಸ್ತೆ– ಹೆಜ್ಜಾಲ (98 ಕಿ.ಮೀ)

  • ಮೂರನೇ ಹಂತ: ಹೆಜ್ಜಾಲ–ಸೋಲೂರು–ನಿಡವಂದ (46 ಕಿ.ಮೀ) 

  • ಒಟ್ಟು ಉದ್ದ: 240 ಕಿ.ಮೀ. (ಮೂರು ಹಂತಗಳು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.