ADVERTISEMENT

ಮೆಟ್ರೊ ಪರಿಷ್ಕೃತ ದರಕ್ಕೆ ಒಪ್ಪಿಗೆ: ಕೇಂದ್ರಕ್ಕೆ ಡಿಕೆಶಿ ಮನವಿ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 22:39 IST
Last Updated 23 ಡಿಸೆಂಬರ್ 2025, 22:39 IST
<div class="paragraphs"><p>ಡಿಕೆಶಿ </p></div>

ಡಿಕೆಶಿ

   

ನವದೆಹಲಿ: ಮೆಟ್ರೋ 2ನೇ ಹಂತದ ಪರಿಷ್ಕೃತ ದರಕ್ಕೆ ಒಪ್ಪಿಗೆ, ಮೆಟ್ರೋ 3ಎ ಹಂತಕ್ಕೆ ಅನುಮೋದನೆ, ಆರ್‌ಆರ್‌ಟಿಎಸ್‌ ಯೋಜನೆಗೆ ಬೆಂಬಲ, ಮಿಟ್ಟಗಾನಹಳ್ಳಿ ಕೆರೆ ಬಳಿ ವಿವಿಧಹಂತದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಅನುಮತಿ ಸೇರಿದಂತೆ ಬೆಂಗಳೂರಿನ ಅಭಿವೃದ್ಧಿಗೆ ಅಗತ್ಯವಾಗಿರುವ ಯೋಜನೆಗಳಿಗೆ ಅನುಮತಿ ಹಾಗೂ ಬೆಂಬಲ ನೀಡುವಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರಿಗೆ ಮನವಿ ಮಾಡಿದರು. 

ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್‌ ಅವರನ್ನು ಮಂಗಳವಾರ ಇಲ್ಲಿ ಭೇಟಿ ಮಾಡಿದ ಅವರು ರಾಜ್ಯ ರಾಜಧಾನಿಗೆ ಅಗತ್ಯವಾಗಿರುವ ಯೋಜನೆಗಳ ಬಗ್ಗೆ ಮನವಿ ಸಲ್ಲಿಸಿದರು.

ADVERTISEMENT

‘ಬೆಂಗಳೂರು ದೇಶದ ಮಹಾನಗರಗಳಲ್ಲಿ ಒಂದಾಗಿದ್ದು, ಇಲ್ಲಿ ಅನೇಕ ನಗರಾಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಹೀಗಾಗಿ, ರಾಜ್ಯದ ಪ್ರಸ್ತಾವಗಳಿಗೆ ಶೀಘ್ರ ಅನುಮತಿ ನೀಡಬೇಕು‘ ಎಂದು ಅವರು ಕೋರಿದರು. 

‘ಮೆಟ್ರೋ 2ನೇ ಹಂತದ ಯೋಜನೆಯ ಪರಿಷ್ಕೃತ ವೆಚ್ಚ ₹ 26,405 ಕೋಟಿಯಿಂದ ₹40,425 ಕೋಟಿಗೆ ಏರಿಕೆಯಾಗಿದ್ದು, ರಾಜ್ಯ ಸರ್ಕಾರವು ಜೂನ್‌ನಲ್ಲಿ ಅನುಮೋದನೆ ನೀಡಿದೆ. ಈ ಪ್ರಸ್ತಾವವನ್ನು ಸಚಿವಾಲಯಕ್ಕೆ ಜೂನ್‌ನಲ್ಲೇ ಕಳುಹಿಸಲಾಗಿದ್ದು, ಇಲ್ಲಿಯವರೆಗೆ ಒಪ್ಪಿಗೆ ಸಿಕ್ಕಿಲ್ಲ’ ಎಂದು ಅವರು ಸಚಿವರ ಗಮನಕ್ಕೆ ತಂದರು. 

‘ಮೆಟ್ರೋ 3ಎ ಹಂತದ ಯೋಜನೆ ಸರ್ಜಾಪುರದಿಂದ ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ಮಾರ್ಗದಲ್ಲಿ 28 ನಿಲ್ದಾಣಗಳನ್ನು ಒಳಗೊಂಡಿದೆ. ಇದರಲ್ಲಿ 22.14 ಕಿ.ಮೀ ಮೇಲ್ಸೇತುವೆ ಹಾಗೂ 14.45 ಕಿ.ಮೀ ಸುರಂಗ ಪಥದಲ್ಲಿ ಸಾಗಲಿದ್ದು, ಈ ಯೋಜನೆಗೆ ₹28,405 ಕೋಟಿ ಅಂದಾಜು ಮಾಡಲಾಗಿದೆ. ಈ ಯೋಜನೆಗೆ ಕರ್ನಾಟಕ ಸರ್ಕಾರ ಜನವರಿಯಲ್ಲಿ ಒಪ್ಪಿಗೆ ನೀಡಿ ಕೇಂದ್ರಕ್ಕೆ ಕಳುಹಿಸಿದೆ. ಈ ಪ್ರಸ್ತಾವನೆ 10 ತಿಂಗಳಿಂದ ನನೆಗುದಿಗೆ ಬಿದ್ದಿದ್ದು, ಆದಷ್ಟು ಬೇಗ ಒಪ್ಪಿಗೆ ನೀಡಬೇಕು‘ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.