ಬೆಂಗಳೂರು: ಇಲ್ಲಿನ ಶಿವಾಜಿನಗರದ ಮೆಟ್ರೊ ನಿಲ್ದಾಣದ ಹೆಸರನ್ನು ಸೇಂಟ್ ಮೇರಿ ಎಂದು ಮರುನಾಮಕರಣ ಮಾಡುವುದನ್ನು ಬಿಜೆಪಿ ವಿರೋಧಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ ಘಟಕ, 'ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅತಿಯಾದ ಓಲೈಕೆಯಲ್ಲಿ ತೊಡಗಿಕೊಂಡಿದೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ರಾಜ್ಯದ ಇತಿಹಾಸವನ್ನೇ ಅಳಿಸಿ ಹಾಕುತ್ತಿದೆ' ಎಂದು ಕಿಡಿಕಾರಿದೆ.
'ಛತ್ರಪತಿ ಶಿವಾಜಿ ಅವರ ಹೆಸರನ್ನು ನೆನಪಿಸುವ ಶಿವಾಜಿ ನಗರ ಮೆಟ್ರೊ ನಿಲ್ದಾಣಕ್ಕೆ ಸೇಂಟ್ ಮೇರಿ ಎಂದು ಮರುನಾಮಕರಣ ಮಾಡಲು ಸಿದ್ದರಾಮಯ್ಯ ಅವರು ನಿರ್ಧರಿಸಿರುವುದು ಕಾಂಗ್ರೆಸ್‌ನ ಹಿಂದೂ ವಿರೋಧಿ ನೀತಿಯ ಮುಂದುವರಿದ ಭಾಗವಾಗಿದೆ. ಮೊನ್ನೆಯಷ್ಟೇ ಕ್ರೈಸ್ತರೊಳಗೆ ಹಿಂದೂ ಜಾತಿಗಳನ್ನು ಸೃಷ್ಟಿಸಿ ಸಂತೃಪ್ತಗೊಳಿಸಲು ಯತ್ನಿಸಿದ್ದ ರಾಜ್ಯ ಸರ್ಕಾರ ಈಗ ಮತ್ತೇ ಅದೇ ಹಾದಿ ಹಿಡಿದಿರುವುದು ನಾಚಿಕೆಗೇಡಿನ ಸಂಗತಿ' ಎಂದೂ ದೂರಿದೆ.
ಶಿವಾಜಿನಗರದಲ್ಲಿರುವ ಸೇಂಟ್ ಮೇರಿಸ್ ಬೆಸಿಲಿಕಾದ ವಾರ್ಷಿಕ ಹಬ್ಬದಲ್ಲಿ ಇತ್ತೀಚೆಗೆ ಭಾಗವಹಿಸಿದ್ದ ಸಿದ್ದರಾಮಯ್ಯ ಅವರಿಗೆ, ನಿಲ್ದಾಣಕ್ಕೆ ಸೇಂಟ್ ಮೇರಿ ಹೆಸರಿಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಮರುನಾಮಕರಣದ ಬಗ್ಗೆ ಸರ್ಕಾರ ಪರಿಗಣಿಸುತ್ತದೆ ಎಂದು ತಿಳಿಸಿದ್ದರು.
ಸಮುದಾಯವು ಮನವಿ ಮಾಡಿದಾಗ ಅದಕ್ಕೆ ಪ್ರತಿಕ್ರಿಯಿಸಿವುದರಲ್ಲಿ ತಪ್ಪೇನು ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡಾ ಹೇಳಿದ್ದರು.
ಶಿವಾಜಿನಗರದ ಮೆಟ್ರೋ ನಿಲ್ದಾಣದ ಹೆಸರನ್ನು ‘ಸೇಂಟ್ ಮೇರಿ’ ಎಂದು ಮರುನಾಮಕರಣ ಮಾಡುವುದನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ವಿರೋಧಿಸಿದ್ದು, ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಶಿವಾಜಿನಗರ ಮೆಟ್ರೊ ನಿಲ್ದಾಣದ ಹೆಸರನ್ನು ಮರುನಾಮಕರಣ ಮಾಡುವುದನ್ನು ನಾನು ಖಂಡಿಸುತ್ತೇನೆ. ಇದು ಛತ್ರಪತಿ ಶಿವಾಜಿಗೆ ಮಾಡುವ ಅವಮಾನವಾಗಿದೆ. ಕಾಂಗ್ರೆಸ್ ಪಕ್ಷವು ನೆಹರೂ ಕಾಲದಿಂದಲೂ ಶಿವಾಜಿಗೆ ಅವಮಾನ ಮಾಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದೆ’ದೇವೇಂದ್ರ ಫಡಣವೀಸ್, ಮಹಾರಾಷ್ಟ್ರ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.