ADVERTISEMENT

ಬೆಂಗಳೂರು–ಮೈಸೂರು ಹೆದ್ದಾರಿಯೂ ಶೇ 40ರಷ್ಟು ಕಮಿಷನ್ ಕಾಮಗಾರಿಯೇ ? –ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಅಕ್ಟೋಬರ್ 2022, 11:40 IST
Last Updated 5 ಅಕ್ಟೋಬರ್ 2022, 11:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಬೆಂಗಳೂರು –ಮೈಸೂರು ಹೆದ್ದಾರಿಯನ್ನು ಸಕಾಲಿಕವಾಗಿ ಪೂರ್ಣಗೊಳಿಸುತ್ತೇವೆ ಎಂದು ಬಿಜೆಪಿಯವರು ಹೇಳಿಕೊಂಡಿದ್ದರು. ಇದು ಕೂಡ ಶೇ 40ರಷ್ಟು ಕಮಿಷನ್ ಕಾಮಗಾರಿಯೇ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ವೇ’ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸಕಾಲಿಕವಾಗಿ ಪೂರ್ಣವಾಗದಿರುವುದು ಬೇರೆ ಮಾತು. ಆದರೆ, ಅವೈಜ್ಞಾನಿಕ ಹಾಗೂ ಕಳಪೆ ಕಾಮಗಾರಿಗಳು ನಡೆದಿರುವ ಸಂಗತಿಗಳು ಒಂದೊಂದೇ ಹೊರಬರುತ್ತಿವೆ. ಇದು ಕೂಡ ಶೇ 40ರಷ್ಟು ಕಮಿಷನ್ ಕಾಮಗಾರಿಯೇ’ ಎಂದು ಟೀಕಿಸಿದೆ.

ಭಾರತ್ ಜೋಡೊ ಪಾದಯಾತ್ರೆಯನ್ನು ‘ಸಿದ್ದು - ಡಿಕೆಶಿ ಜೋಡೊ ಯಾತ್ರೆ’ ಎನ್ನುವ ಬಿಜೆಪಿಗರು ತಮ್ಮ ಪಕ್ಷದಲ್ಲಿ ‘ಬಿಜೆಪಿ ತೋಡೋ ಜಾತ್ರೆ’ ನಡೆಯುತ್ತಿರುವುದನ್ನು ಗಮನಿಸಲಿ. ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ ‘ಬಿಜೆಪಿ ಮುಕ್ತ ಕರ್ನಾಟಕ’ ಮಾಡಲು ತುದಿಗಾಲಲ್ಲಿದ್ದಾರೆ. ಶಾಸಕ ಯತ್ನಾಳ್ ಹೇಳುತ್ತಿರುವ ಆ ಹುಳವನ್ನು ಬಿಜೆಪಿಗರು ಹುಡುಕಿಕೊಳ್ಳಲಿ! ಎಂದು ಕಾಂಗ್ರೆಸ್ ಸವಾಲು ಹಾಕಿದೆ.

ADVERTISEMENT

‘ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೆಸರು ಬಂದರೂ ತನಿಖೆ ಇಲ್ಲ. ಶಾಸಕ ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ. ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಯತ್ನಾಳ್ ಹೇಳಿದರೂ ತನಿಖೆ ಇಲ್ಲ. ‘ಪೇ ಸಿಎಂ’ ಎಂದರೆ ಉರಿದುಕೊಳ್ಳುವ ಬೊಮ್ಮಾಯಿ ಅವರೇ, ದಮ್ಮು ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ’ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.