
ಬೆಂಗಳೂರು: ಬೆಂಗಳೂರು ಆಸುಪಾಸು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯಸಾಧ್ಯತಾ ವರದಿಗೆ ಟೆಂಡರ್ ಆಹ್ವಾನಿಸಲಾಗಿದ್ದು, ರಾಜಧಾನಿಗೆ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸುವತ್ತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಅವರು, ‘ನೂತನ ವಿಮಾನ ನಿಲ್ದಾಣಕ್ಕೆ ಸ್ಥಳದ ಅನುಕೂಲ, ತಾಂತ್ರಿಕ ಹಾಗೂ ಆರ್ಥಿಕ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಪರಿಣತ ಸಲಹಾ ಸಂಸ್ಥೆಯ ಆಯ್ಕೆಗಾಗಿ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವು (ಕೆಎಸ್ಐಐಡಿಸಿ) ಟೆಂಡರ್ ಆಹ್ವಾನಿದೆ. ಅರ್ಜಿ ಸಲ್ಲಿಸಲು 2026ರ ಜ.12 ಕೊನೆಯ ದಿನವಾಗಿದೆ’ ಎಂದು ಹೇಳಿದ್ದಾರೆ.
‘ಕನಕಪುರ ರಸ್ತೆಯಲ್ಲಿರುವ ಚೂಡಹಳ್ಳಿ, ಸೋಮನಹಳ್ಳಿ ಮತ್ತು ನೆಲಮಂಗಲದ ಬಳಿ ಈಗಾಗಲೇ ಸ್ಥಳಗಳನ್ನು ಗುರುತಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಉನ್ನತಮಟ್ಟದ ತಂಡವು ಸ್ಥಳ ಪರಿಶೀಲನೆ ನಡೆಸಿ, ಪ್ರಾಥಮಿಕ ವರದಿ ನೀಡಿದೆ. ಈಗ ಟೆಂಡರಿನಲ್ಲಿ ಆಯ್ಕೆಯಾಗುವ ಸಲಹಾ ಸಂಸ್ಥೆಯು ಐದು ತಿಂಗಳಲ್ಲಿ ಸಮಗ್ರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಐದು ವರ್ಷಗಳಲ್ಲಿ ವಾರ್ಷಿಕವಾಗಿ ₹250 ಕೋಟಿ ಮೊತ್ತದ ಕೆಲಸಗಳನ್ನು ನಿರ್ವಹಿಸಿರುವಂಥ ಮತ್ತು ಸದರಿ ಕ್ಷೇತ್ರದಲ್ಲಿ ಕನಿಷ್ಠ ಐದು ಯೋಜನೆಗಳನ್ನಾದರೂ ನಿರ್ವಹಿಸಿರುವ, ಸಲಹಾ ವರದಿ ನೀಡಿರುವಂತಹ ಸಂಸ್ಥೆಗಳು ಟೆಂಡರ್‌ನಲ್ಲಿ ಭಾಗವಹಿಸಬಹುದು. ಆಯ್ಕೆಯಾಗುವ ಸಂಸ್ಥೆಯು ಮೂರೂ ಸ್ಥಳಗಳ ಮಳೆ ಪ್ರಮಾಣ, ಭೂಲಕ್ಷಣ, ವಿದ್ಯುತ್, ನೀರು, ಒಳಚರಂಡಿ, ತ್ಯಾಜ್ಯ ನಿರ್ವಹಣೆಯಂಥ ಮೂಲಸೌಕರ್ಯಗಳು, ಸುತ್ತಮುತ್ತಲಿನ ಜನಸಂಖ್ಯೆ, ಅಭಿವೃದ್ಧಿ, ಶಬ್ದ ಮತ್ತು ವಿಮಾನ ನಿಲ್ದಾಣದಿಂದ ಉಂಟಾಗುವ ಮಾಲಿನ್ಯ ಕುರಿತು ವರದಿ ಸಿದ್ಧಪಡಿಸಬೇಕು ಎಂದಿದ್ದಾರೆ.
ವಿಮಾನ ನಿಲ್ದಾಣ ಅಭಿವೃದ್ಧಿಗೆ ತಗಲುವ ವೆಚ್ಚ, ಅಗತ್ಯ ಇರುವ ಭೂಮಿ, ರಕ್ಷಣಾ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಸೇರಿದಂತೆ ಹಲವು ಕಡೆಗಳಿಂದ ಪಡೆಯಬೇಕಾಗುವ ಅನುಮೋದನೆಗಳ ವಿವರಗಳನ್ನೂ ಕಾರ್ಯಸಾಧ್ಯತಾ ವರದಿಯಲ್ಲಿ ನೀಡಬೇಕಾಗುತ್ತದೆ. ವಿಮಾನ ನಿಲ್ದಾಣಕ್ಕೆ ಇರುವ ವಿವಿಧ ರೀತಿಯ ಸಂಪರ್ಕ, ನಿರ್ಮಾಣ ನಂತರದ ಮೂಲಸೌಕರ್ಯ ಅಭಿವೃದ್ಧಿ, ಸರಕು ಸಾಗಣೆ ಮತ್ತು ಪ್ರಯಾಣಿಕ ಸೇವೆಗಳು ಹಾಗೂ ಅದರಿಂದಾಗುವ ಆರ್ಥಿಕ ಕಾರ್ಯಸಾಧ್ಯತೆ ಬಗ್ಗೆಯೂ ಅಧ್ಯಯನ ನಡೆಸಬೇಕು ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.