ಬೆಂಗಳೂರು: ‘ಬೆಂಗಳೂರು ಕೌಶಲ ಶೃಂಗಸಭೆ 2025’ ಅನ್ನು ನವೆಂಬರ್ 4 ರಿಂದ 6 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವ ಶರಣಪ್ರಕಾಶ್ ಪಾಟೀಲ ತಿಳಿಸಿದರು.
ಇದೇ ಮೊದಲ ಬಾರಿಗೆ ಈ ಶೃಂಗಸಭೆ ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಈ ಶೃಂಗಸಭೆಯ ಮೂಲಕ ಯುವ ಸಮುದಾಯಕ್ಕೆ ಮುಖ್ಯವಾಗಿ ಮಹಿಳೆಯರು, ಗ್ರಾಮೀಣ ಸಮುದಾಯಗಳು ಮತ್ತು ಅಂಗವಿಕಲರಿಗೆ ಹೆಚ್ಚು ಆದ್ಯತೆ ನೀಡಲು ಗಮನಹರಿಸಲಾಗಿದೆ. ಕೌಶಲದ ಮೂಲಕ ಉತ್ತಮ ಭವಿಷ್ಯವನ್ನು ರೂಪಿಸಲು ನಮ್ಮ ಸರ್ಕಾರ ಅವಕಾಶಗಳ ಬೃಹತ್ ವೇದಿಕೆ ಒದಗಿಸುತ್ತಿದೆ’ ಎಂದು ಪಾಟೀಲ ವಿವರಿಸಿದರು.
ಕೈಗಾರಿಕೆ, ಶೈಕ್ಷಣಿಕ, ತರಬೇತಿ ಮತ್ತು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಯುವ ಸಮೂಹವನ್ನು ಬೆಳೆಸಲು ಹಾಗೂ ಉದ್ಯೋಗವನ್ನು ಹೆಚ್ಚಿಸುವ ಗುರಿಯನ್ನು ಶೃಂಗಸಭೆ ಹೊಂದಿದೆ ಎಂದರು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಜಂಟಿ ಸಹಯೋಗದೊಂದಿಗೆ ಶೃಂಗಸಭೆಯನ್ನು ಆಯೋಜಿಸಲಾಗುವುದು ಎಂದು ಶರಣಪ್ರಕಾಶ್ ಪಾಟೀಲ ಹೇಳಿದರು.
‘ಮುಂಬರುವ ದಿನಗಳಲ್ಲಿ ಕೌಶಲ ನೀತಿ ರೂಪಿಸಲಾಗುತ್ತದೆ. ಕರ್ನಾಟಕದಲ್ಲಿ ಮಾನವ ಸಂಪನ್ಮೂಲ ಅಗಾಧವಾಗಿದೆ. ಅದಕ್ಕೆ ಸ್ಪಷ್ಟ ರೂಪ, ಕೌಶಲ ತರಬೇತಿ ನೀಡಿದರೆ ನಮ್ಮ ರಾಜ್ಯ ಮತ್ತು ನಮ್ಮ ರಾಜಧಾನಿ ಅತ್ಯಂತ ವೇಗವಾಗಿ ಬೆಳೆಯುವ ವಿಶ್ವಾಸವಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.