ADVERTISEMENT

ಜನಪ್ರಿಯತೆ ಭ್ರಮೆಯಿಂದ ಅನಾಹುತ: ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 9:27 IST
Last Updated 6 ಜೂನ್ 2025, 9:27 IST
ಪ್ರಲ್ಹಾದ ಜೋಶಿ
ಪ್ರಲ್ಹಾದ ಜೋಶಿ   

ಮೈಸೂರು: ‘ಆರ್‌ಸಿಬಿ ಆಟಗಾರರೊಂದಿಗೆ ಫೋಟೊ ತೆಗೆಸಿಕೊಂಡರೆ, ವಿಜಯದಲ್ಲಿ ನಮ್ಮ ಪಾಲು ಸಿಗುತ್ತದೆ ಎಂಬ ಜನಪ್ರಿಯತೆಯ ಭ್ರಮೆಯೇ ಅನಾಹುತಕ್ಕೆ ಕಾರಣ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತಕ್ಕೆ ಕಾರಣ. ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

‘ಕ್ರಿಕೆಟ್, ಸಿನಿಮಾ ತಾರೆಯರ ಕೆಲಸವೇ ಬೇರೆ. ರಾಜಕಾರಣಿಗಳ ಜವಾಬ್ದಾರಿಗಳೇ ಬೇರೆ. ವಿಧಾನಸೌಧದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮಕ್ಕೆ ಕುಟುಂಬದವರು, ಮಕ್ಕಳು, ಮೊಮ್ಮಕ್ಕಳನ್ನು ಕರೆತಂದಿದ್ದು ಏಕೆ’ ಎಂದು ಪ್ರಶ್ನಿಸಿದ ಅವರು, ‘ಯಾವುದೇ ಕ್ರಮವನ್ನು ಪರಾಮರ್ಶಿಸಿ ನಿರ್ಣಯ ಮಾಡಿಲ್ಲ. ಡಿ.ಕೆ.ಶಿವಕುಮಾರ್, ಚಿನ್ನಸ್ವಾಮಿ ಕ್ರೀಡಾಂಗಣಕ್ಕೂ ಹೋಗಿ, ಸಂಭ್ರಮಾಚರಣೆ ಮಾಡಿದ್ದಾರೆ’ ಎಂದರು.

ADVERTISEMENT

‘ಅಭಿನಂದನಾ ಸಮಾರಂಭವನ್ನು ಇಂದೇ ಮಾಡಬೇಕೆಂದು ನಾವೇನು ಒತ್ತಡ ಹಾಕಿರಲಿಲ್ಲ. ನಾವು ಹೇಳಿದ್ದೆಲ್ಲ ನೀವು ಮಾಡುತ್ತೀರಾ? ಬಿಜೆಪಿ ಕಚೇರಿಯಲ್ಲಿ ಇರುವವರು ಟ್ವೀಟ್‌ ಮಾಡಿರಬಹುದು. ಆದರೆ, ಸರ್ಕಾರದವರಿಗೆ ಜವಾಬ್ದಾರಿ ಇರಬೇಕಿತ್ತು. ಪೊಲೀಸ್ ಹಾಗೂ ಗುಪ್ತಚರ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವ್ಯವಸ್ಥೆ ಮಾಡಬೇಕಿತ್ತು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಸರ್ಕಾರ ಇದೀಗ ಪೊಲೀಸ್‌ ಆಯುಕ್ತರು ಹಾಗೂ ಅಧಿಕಾರಿಗಳನ್ನು ಅಮಾನತು ಮಾಡಿ, ಕೈತೊಳೆದುಕೊಳ್ಳಲು ನೋಡುತ್ತಿದೆ. ಡಿಸಿಎಂ ಕಣ್ಣೀರು ಹಾಕಿದರೆ ಪಾಪದ ಕೃತ್ಯ ಮರೆಮಾಚಲು ಆಗುವುದಿಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.