ADVERTISEMENT

Bengaluru Stampede | ಸರ್ಕಾರ ಜನತೆಯ ಕ್ಷಮೆ ಕೇಳಲಿ: ಮುತಾಲಿಕ್‌

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 10:53 IST
Last Updated 6 ಜೂನ್ 2025, 10:53 IST
ಪ್ರಮೋದ ಮುತಾಲಿಕ್
ಪ್ರಮೋದ ಮುತಾಲಿಕ್   

ಹುಬ್ಬಳ್ಳಿ: ‘ಆರ್‌ಸಿಬಿ ವಿಜಯೋತ್ಸವ ಮಾಡುವುದು ಬೇಡ ಎಂದು ಪೊಲೀಸ್‌ ಇಲಾಖೆ ಹೇಳಿದ್ದರೂ, ರಾಜ್ಯ ಸರ್ಕಾರ ಸೊಕ್ಕಿನಿಂದ ಅದಕ್ಕೆ ಅವಕಾಶ ನೀಡಿ ಅಮಾಯಕರನ್ನು ಬಲಿ ಪಡೆದಿದೆ. ತಕ್ಷಣ ರಾಜ್ಯದ ಜನತೆಯ ಕ್ಷಮೆ ಕೇಳಿ, ಮೃತಪಟ್ಟವರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡಬೇಕು’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದರು.

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ರಾಜಕೀಯ ಲಾಭ ಪಡೆಯುವುದಕ್ಕೋಸ್ಕರ ವಿವೇಚನೆಯಿಲ್ಲದೆ ರಾಜ್ಯ ಸರ್ಕಾರ, ವಿಜಯೋತ್ಸವ ಸಮಾರಂಭ ನಡೆಸಿತು. ಸೂಕ್ತ ಭದ್ರತೆ ಮತ್ತು ಯೋಜನೆಯಿಲ್ಲದ ಕಾರಣ ಕಾಲ್ತುಳಿತವಾಗಿ 11 ಮಂದಿ ಮೃತಪಟ್ಟರು. ಅಚಾತುರ್ಯದ ಹೊಣೆಯನ್ನು ಸರ್ಕಾರ ತಾನು ಹೊರುವ ಬದಲು, ಪೊಲೀಸ್‌ ಇಲಾಖೆಯ ಅಧಿಕಾರಿಗಳನ್ನು ಅಮಾನತು ಮಾಡಿದೆ. ತಕ್ಷಣ ಅವರ ಅಮಾನತು ಆದೇಶ ವಾಪಸ್‌ ಪಡೆದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಹಾಗೂ ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜ್ಯದ ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು.

‘ದುರಂತಕ್ಕೆ ಸಂಬಂಧಿಸಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಮೊಸಳೆ ಕಣ್ಣೀರು ಸುರಿಸಿ, ನಾಟಕವಾಡಿದ್ದಾರೆ. ಅತ್ತ ಕಾಲ್ತುಳಿತವಾಗಿ ಅಮಾಯಕರು ಬಲಿಯಾಗುತ್ತಿದ್ದರೆ, ಇವರು ಸೇರಿ ಮುಖ್ಯಮಂತ್ರಿ ಹಾಗೂ ಇತರರು ವೇದಿಕೆಯ ಮೇಲೆ ಸನ್ಮಾನ ಮಾಡುತ್ತಿದ್ದರು. ತನ್ನಿಂದಾದ ತಪ್ಪನ್ನು ಮುಚ್ಚಿಕೊಳ್ಳಲು, ಜನರ ಗಮನ ಬೇರೆಡೆ ಸಳೆಯಲು ಪೊಲೀಸ್‌ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ’ ಎಂದು ಆರೋಪಿಸಿದರು. 

ADVERTISEMENT

‘ಕ್ರಿಕೆಟ್‌ ಆಟಗಾರರು ಕೋಟಿ ಕೋಟಿ ಸಂಪಾದಿಸುತ್ತಾರೆ. ಐಪಿಎಲ್‌ ಟೂರ್ನಿ ದೇಶಕ್ಕೋಸ್ಕರ ನಡೆದದ್ದಲ್ಲ, ಅದು ಪಕ್ಕಾ ವ್ಯವಹಾರಿಕ ಟೂರ್ನಿಯಾಗಿದ್ದು, ಆಟಗಾರರು ಕೋಟಿ ಕೋಟಿ ಸಂಪಾದಿಸಿದ್ದಾರೆ. ಅಭಿಮಾನಿಗಳಿಂದಲೇ ಬೆಳೆದ ಅವರು ಹಾಗೂ ಆಯೋಜಕರು, ದುರಂತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ತಲಾ ₹1 ಕೋಟಿಯನ್ನಾದರೂ ನೀಡಿ, ಮಾನವೀಯತೆ ಮೆರೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದರು.

‘ಕಣ್ಣೊರೆಸುವ ತಂತ್ರ’

‘ವಿಧಾನ ಸಭೆ ಸಭಾಪತಿ ಯು.ಟಿ. ಖಾದರ್‌ ಹಾಗೂ ಮೌಲಿಗಳ  ಸಮ್ಮುಖದಲ್ಲಿ ರೌಡಿ ಪಟ್ಟಿ ಸಿದ್ಧಪಡಿಸಿ, ಪೊಲೀಸರ ಮೇಲೆ ಒತ್ತಡ ಹೇರಿ ಗಡೀಪಾರು ಮಾಡಲಾಗುತ್ತಿದೆ. ಗಡೀಪಾರು ಪಟ್ಟಿಯಲ್ಲಿ ಮೊದಲು ಮುಸ್ಲಿಮರ ಹೆಸರಿರಲಿಲ್ಲ. ಹಿಂದೂ ಸಂಘಟನೆಗಳು ಪ್ರತಿಭಟನೆ ಮಾಡಿದ ನಂತರ, ಕಣ್ಣೊರೆಸುವ ತಂತ್ರವಾಗಿ ಕೆಲವರ ಹೆಸರನ್ನು ಸೇರ್ಪಡೆ ಮಾಡಲಾಗಿದೆ. ದುರುದ್ದೇಶದಿಂದ ಎಷ್ಟೇ ಪ್ರಕರಣ ದಾಖಲಿಸಿದರೂ ನಾವು ಹೆದರುವುದಿಲ್ಲ, ಬದಲಾಗಿ ಪುಟಿದೇಳುತ್ತೇವೆ. ಮುಸ್ಲಿಂ ಓಲೈಕೆ ತುಷ್ಟೀಕರಣ ಬಿಟ್ಟು, ಲವ್‌ ಜಿಹಾದ್‌, ಗೋ ಹತ್ಯೆ, ಮತಾಂತರ ತಡೆಯಲು ಮುಂದಾಗಬೇಕು’ ಎಂದು ಮುತಾಲಿಕ್‌ ಆಗ್ರಹಿಸಿದರು.

‘ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಸರಣಿ ಕೊಲೆಗಳು ನಡೆಯುತ್ತಿದ್ದು, ಹಿಂದೂಗಳಿಗೆ ಭಯೋತ್ಪಾದನೆಯ ಭೀತಿ ಸೃಷ್ಟಿಸಿದ್ದಾರೆ. ಪೊಲೀಸರು ರಾತ್ರಿ ವೇಳೆ ಆರ್‌ಎಸ್‌ಎಸ್‌ ಕಾರ್ಯಕರ್ತರ ಮಮೆ ಬಾಗಿಲು ಬಡಿದು, ಹೆದರಿಸುತ್ತಿದ್ದಾರೆ. ತಪ್ಪು ಮಾಡಿದ್ದರೆ ವಿಚಾರಣೆ ನಡೆಸಲಿ, ಪ್ರಕರಣ ದಾಖಲಿಸಲಿ. ಆದರೆ, ಅನಗತ್ಯವಾಗಿ ಹೆದರಿಸುವುದು, ಪ್ರಕರಣ ದಾಖಲಿಸುವುದು ಸರಿಯಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.