ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿಜಯೋತ್ಸವದ ವೀಕ್ಷಣೆಗೆ ಬಂದಿದ್ದ ವೇಳೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಬುಧವಾರ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಳಿಗೆ ತಲಾ ₹10 ಲಕ್ಷ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಘಟನೆ ಸಂಬಂಧ ಮ್ಯಾಜಿಸ್ಟ್ರೇಟ್ ತನಿಖೆಗೆ ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದಾರೆ.
ಬೌರಿಂಗ್ ಹಾಗೂ ವೈದೇಹಿ ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಾಂತ್ವನ ಹೇಳಿದ್ದಾರೆ. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಾವಿನ ಮನೆಯ ಬಾಗಿಲು ತೆರೆದ ಕಾರಣಗಳೇನು?
ಮಧ್ಯಾಹ್ನ 1.30ರವರೆಗೂ ಮೆಟ್ರೊ ನಿಲ್ದಾಣಗಳಲ್ಲಿ, ಮೆಟ್ರೊ ರೈಲಿನಲ್ಲಿ, ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನಸಂದಣಿ ಸಾಮಾನ್ಯವಾಗಿಯೇ ಇತ್ತು. ‘ಆರ್‌ಸಿಬಿ ತಂಡದ ಆಟಗಾರರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬರುತ್ತಾರೆ’, ‘ಅವರನ್ನು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವಾಗತಿಸುತ್ತಾರೆ’, ‘ವಿಧಾನಸೌಧದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ’, ‘ಅಲ್ಲಿಂದ ತೆರೆದ ಬಸ್‌ನಲ್ಲಿ ಅವರ ಮೆರವಣಿಗೆ ನಡೆಯುತ್ತದೆ’ ಎಂಬ ಮಾಹಿತಿ ಸುದ್ದಿವಾಹಿನಿಗಳಲ್ಲಿ ಬಿತ್ತರವಾಯಿತು. ಮಧ್ಯಾಹ್ನ 2ರ ವೇಳೆಗೆ ಜನರು ಈ ಸ್ಥಳಗಳತ್ತ ದೌಡಾಯಿಸಲಾರಂಭಿಸಿದರು.
ಭದ್ರತೆ ಕಾರಣಕ್ಕೆ ತೆರೆದ ಬಸ್‌ನಲ್ಲಿ ಮೆರವಣಿಗೆ ನಡೆಸಲಾಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಕೆಲವೇ ನಿಮಿಷಗಳಲ್ಲಿ ಮೆರವಣಿಗೆ ರದ್ದಾಗಿದೆ ಎಂಬ ಸುದ್ದಿ ಹರಿದಾಡಿತು. ವಿರೋಧ ಪಕ್ಷಗಳ ಅಧಿಕೃತ ‘ಎಕ್ಸ್’ ಖಾತೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಮಾಡಲಾಯಿತು. ಮೆರವಣಿಗೆ ನಡೆಯುತ್ತದೆಯೇ ಅಥವಾ ಇಲ್ಲವೇ ಎಂಬ ಗೊಂದಲ ಮುಂದುವರಿದ ಕಾರಣ, ಆಟಗಾರರನ್ನು ಕಣ್ತುಂಬಿಕೊಳ್ಳಲು ಬಹುತೇಕ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಬರಲಾರಂಭಿಸಿದರು.
ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಅದರ ಬೆನ್ನಲ್ಲೇ ಆರ್‌ಸಿಬಿಯ ಅಧಿಕೃತ ಎಕ್ಸ್ ಖಾತೆಯಲ್ಲೂ, ‘ಉಚಿತ ಪ್ರವೇಶ. ಆದರೆ ಸೀಮಿತ ಆಸನಗಳು’ ಎಂದು ಪೋಸ್ಟ್ ಮಾಡಲಾಯಿತು. ಈ ಮಧ್ಯೆ ಕ್ರೀಡಾಂಗಣದತ್ತ ಅಭಿಮಾನಿಗಳು ನುಗ್ಗಿದರು.
ಕ್ರಿಕೆಟ್ ಜೀನಿ ಆ್ಯಪ್‌ನಲ್ಲಿ ಕ್ರೀಡಾಂಗಣ ಪ್ರವೇಶದ ಟಿಕೆಟ್ ಖರೀದಿಸಬಹುದು ಎಂಬ ಮಾಹಿತಿ ಸಂಜೆ 5ರ ವೇಳೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆದರೆ ಆ್ಯಪ್ ಸರ್ವರ್ ಡೌನ್ ಆಗಿದ್ದರಿಂದ, ಕ್ರೀಡಾಂಗಣದ ಬಳಿ ಸಾಲುಗಟ್ಟಿ ನಿಂತಿದ್ದವರಲ್ಲಿ ಗೊಂದಲ ಉಂಟಾಯಿತು. ಹೀಗಾಗಿ ಹಲವರು ಕ್ರೀಡಾಂಗಣ ಪ್ರವೇಶಕ್ಕೆ ನೂಕುನುಗ್ಗಲು ಉಂಟಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.