ADVERTISEMENT

ಕ್ಯಾನ್ಸರ್‌ ಥೆರಪಿ ಪರಿಕರ ಉತ್ಪಾದನೆಯಲ್ಲಿ ಭಾರತಕ್ಕೆ ದೊಡ್ಡ ಅವಕಾಶ: ತಜ್ಞರ ಅಭಿಮತ

ಬೆಂಗಳೂರು ತಂತ್ರಜ್ಞಾನ ಶೃಂಗ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 13:05 IST
Last Updated 19 ನವೆಂಬರ್ 2021, 13:05 IST
ಬೆಂಗಳೂರು ತಂತ್ರಜ್ಞಾನ ಶೃಂಗ
ಬೆಂಗಳೂರು ತಂತ್ರಜ್ಞಾನ ಶೃಂಗ   

ಬೆಂಗಳೂರು: ಕ್ಯಾನ್ಸರ್‌ ಚಿಕಿತ್ಸೆಗೆ ಮುಂದುವರಿದ ರಾಷ್ಟ್ರಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕೆಮೆರಿಕ್‌ ಆಯ್ಯಂಟಿಜೆನ್‌ ರಿಸೆಪ್ಟರ್‌ -ಟಿ (ಸಿಎಆರ್‌-ಟಿ) ಎಂಬ ಕೋಶ ಆಧಾರಿತ ಚಿಕಿತ್ಸಾ ಕ್ರಮವು ಪ್ರಚಲಿತಕ್ಕೆ ಬರುತ್ತಿದ್ದು, ಸಿಎಆರ್‌-ಟಿ ಥೆರಪಿಗೆ ಬಳಸಲಾಗುವ ಪರಿಕರಗಳ ಉತ್ಪಾದನಾ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಲು ಭಾರತಕ್ಕೆ ಸಾಕಷ್ಟು ಅವಕಾಶಗಳಿವೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದರು.

24ನೇ ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಶುಕ್ರವಾರ ನಡೆದ ‘ಕೋಶ ಚಿಕಿತ್ಸಾ ವಿಧಾನದಲ್ಲಿ (ಸೆಲ್‌ ಥೆರಪಿ) ಹೊಸ ಹೊಸ ಅನ್ವೇಷಣೆಗಳು’ ಕುರಿತ ಗೋಷ್ಠಿಯಲ್ಲಿ ತಜ್ಞರು, ಕ್ಯಾನ್ಸರ್‌ ಚಿಕಿತ್ಸಾ ವಿಧಾನಕ್ಕೆ ಬಳಸಲಾಗುವ ಔಷಧ, ಇಂಜೆಕ್ಷನ್‌ ಹಾಗೂ ಸೆಲ್‌ ಥೆರಪಿ ಪರಿಕರಗಳ ಉತ್ಪಾದನೆ ಮತ್ತು ಬಳಕೆಗೆ ಇರುವ ಕಾನೂನಾತ್ಮಕ (ಐಸಿಎಂಆರ್‌ ಸೇರಿ ಇನ್ನಿತರ ಸಂಸ್ಥೆಗಳು ರೂಪಿಸುವ ನೀತಿ ನಿರೂಪಣೆಗಳು ಮತ್ತು ಮಾರ್ಗಸೂಚಿಗಳು) ಹಾಗೂ ವಾಣಿಜ್ಯಾತ್ಮಕ ಅಡೆತಡೆಗಳನ್ನು ನಿವಾರಿಸಿದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ನೀಡುವುದು ಸಾಧ್ಯವಾಗಲಿದೆ ಎಂದರು.

‘ಕೋಶ ಆಧಾರಿತ ಚಿಕಿತ್ಸಾ ವಿಧಾನಕ್ಕೆ ಬಳಕೆಯಾಗುವ ಎಲ್ಲ ಬಗೆಯ ವೈದ್ಯಕೀಯ ಪರಿಕರಗಳ ಉತ್ಪಾದನೆಗೆ ಬೇಕಿರುವ ಕಚ್ಚಾವಸ್ತುಗಳೆಲ್ಲವೂ ವಿದೇಶಗಳಿಂದ ಆಮದು ಆಗುತ್ತಿದೆ. ಹೀಗಾಗಿಯೇ ಒಂದು ಬಾರಿಯ ಚಿಕಿತ್ಸೆಗೆ ಅಂದಾಜು ₹2 ರಿಂದ ₹4 ಲಕ್ಷ ವೆಚ್ಚವಾಗುವ ಸಾಧ್ಯತೆ ಇರುತ್ತದೆ. ಇದು ರೋಗಿಯ ದೇಹಸ್ಥಿತಿ ಹಾಗೂ ಆಸ್ಪತ್ರೆಗಳಲ್ಲಿನ ಮೂಲಸೌಕರ್ಯದ ಮೇಲೂ ಅವಲಂಬಿತವಾಗಿರುತ್ತದೆ. ಆಯುಷ್ಮಾನ್‌ ಭಾರತ್‌ ನಂತಹ ವೈದ್ಯಕೀಯ ವಿಮಾ ಯೋಜನೆಗಳ ವ್ಯಾಪ್ತಿಯಡಿ ದುಬಾರಿ ವೆಚ್ಚದ ಚಿಕಿತ್ಸಾ ವಿಧಾನವೂ ಲಭ್ಯವಾಗುವಂತಾಗಬೇಕೆಂದರೆ ನೀತಿ ನಿರೂಪಣೆಗಳು ಬದಲಾಗಬೇಕು ಎಂಬ ಸಲಹೆ ಕೇಳಿಬಂದಿತು.

ADVERTISEMENT

‘ಸರ್ಕಾರ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಕಂಪನಿಗಳ ಜತೆ ಮಾತುಕತೆ ನಡೆಸಿ ಹೂಡಿಕೆ, ಪರಿಕರಗಳ ದರ ನಿಗದಿ, ಅನುಮೋದನೆ, ಕೋಲ್ಡ್‌ ಸಪ್ಲೈ ಸ್ಟೋರೇಜ್‌ ಸೇರಿ ಒಂದಷ್ಟು ಸೌಕರ್ಯಗಳಲ್ಲಿ ರಿಯಾಯಿತಿ ಕೊಟ್ಟರೆ ಬಡ ಕ್ಯಾನ್ಸರ್‌ ರೋಗಿಗೂ ಸುಲಭದಲ್ಲಿ ಚಿಕಿತ್ಸೆ ದೊರೆಯುವಂತಾಗುತ್ತದೆ’ ಎಂದು ಟೋರಿಡಲ್ಲಿ ಸ್ಟೆಂಪ್ಯೂಟಿಕ್ಸ್‌ ರಿಸರ್ಚ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಮನೋಹರ್‌ ಬಿ.ಎನ್‌. ಅಭಿಪ್ರಾಯಪಟ್ಟರು.

ಟಾಟಾ ಮೆಮೋರಿಯಲ್‌ ಸೆಂಟರ್‌ನ ಎಸಿಟಿಆರ್‌ಇಸಿಯ ಮಾಜಿ ನಿರ್ದೇಶಕಿ ಪ್ರೊ. ಶುಭದಾ ಚಿಪ್ಲೂನ್‌ಕರ್‌ ಅವರು ಟಿ-ಸೆಲ್‌ ಥೆರಪಿ ಕ್ಯಾನ್ಸರ್‌ ರೋಗಿಗಳಿಗೆ ಹೇಗೆ ದೊಡ್ಡ ವರದಾನವಾಗಿದೆ ಎಂಬುದರ ಬಗ್ಗೆ ವಿವರಿಸಿದರು.

ಐಐಟಿ ಬಾಂಬೆಯ ಅಸೋಸಿಯೇಟ್‌ ಪ್ರೊಫೆಸರ್‌ ರಾಹುಲ್‌ ಪುರವರ್‌, ಯೈಟ್‌ ರೋಡ್ಸ್‌ ಸಂಸ್ಥೆಯ ಪ್ರಾಂಶುಪಾಲ ಡಾ. ಅರವಿಂದ್‌ ಚಾರಿ, ಸಿಂಪೋನಿ ಟೆಕ್‌ ಬಯಾಲಾಜಿಕ್ಸ್‌ನ ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿ ಡಾ. ನರೇಂದ್ರ ಚಿರ್‌ಮುಲೆ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.