ADVERTISEMENT

ಬಿಕ್ಲು ಶಿವು ಕೊಲೆ ಪ್ರಕರಣ: ಬೈರತಿ ಬಸವರಾಜಗೆ ನಿರೀಕ್ಷಣಾ ಜಾಮೀನು

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 16:09 IST
Last Updated 26 ಡಿಸೆಂಬರ್ 2025, 16:09 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ಬೆಂಗಳೂರು: ರೌಡಿ ಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವು ಕೊಲೆ ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್‌.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಅವರಿಗೆ ಹೈಕೋರ್ಟ್‌ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ‘ಒಂದು ವೇಳೆ ಅವರನ್ನು ಬಂಧಿಸಿದರೆ ಷರತ್ತುಗಳ ಆಧಾರದಡಿ ಬಿಡುಗಡೆ ಮಾಡಬೇಕು. ಬಸವರಾಜ ಅವರು ತನಿಖೆಗೆ ಸಹಕರಿಸಬೇಕು’ ಎಂದು ಸಿಐಡಿಗೆ ಆದೇಶಿಸಿದೆ.

ಆರೋಪಿ ಬಸವರಾಜ ಅವರು ಈ ಸಂಬಂಧ ಎರಡನೇ ಬಾರಿಗೆ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ರಜಾಕಾಲದ ಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಸಂದೇಶ್ ಜೆ.ಚೌಟ, ‘ಅರ್ಜಿದಾರರು ನಾಲ್ಕು ಬಾರಿ ಶಾಸಕರಾಗಿದ್ದಾರೆ. ಅವರನ್ನು ರಾಜಕೀಯ ಕಾರಣಕ್ಕಾಗಿ ಈ ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ನಡೆದಿದೆ. ಬಿಕ್ಲು ಶಿವು ಕೊಲೆಯಲ್ಲಿ ಅವರದ್ದು ಎಂದು ಹೇಳಬಹುದಾದ ಯಾವುದೇ ಪಾತ್ರವಿಲ್ಲ. ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿದ ಬಳಿಕ‌ ಬಂಧಿಸುವ ಯತ್ನ ನಡೆದಿದೆ. ಈಗಾಗಲೇ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದ್ದು ಅದರಲ್ಲಿ ಅವರ ವಿರುದ್ಧ ಯಾವುದೇ ದೋಷ ಹೊರಿಸಿಲ್ಲ. ತನಿಖೆ ಬಾಕಿ ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿದೆ’ ಎಂದು ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದರು.

ADVERTISEMENT

ಅಂತೆಯೇ, ‘ಅರ್ಜಿದಾರರಿಗೆ ಈಗಾಗಲೇ ಹೈಕೋರ್ಟ್‌ 5 ತಿಂಗಳು 10 ದಿನಗಳ ಕಾಲ ಬಂಧನದಿಂದ ರಕ್ಷಣೆ ನೀಡಿತ್ತು. ಕೋಕಾ (ಕರ್ನಾಟಕ ರಾಜ್ಯ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ–2000) ಕಾಯ್ದೆ ಹೇರಿಕೆ ರದ್ದುಪಡಿಸಿದೆ. ಹಾಗಾಗಿ, ಬಂಧನದಿಂದ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದರು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, ಪ್ರತಿವಾದಿ ಸಿಐಡಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿತು. ಅಂತೆಯೇ, ವಿಚಾರಣೆಯನ್ನು 2026ರ ಜನವರಿ 6ಕ್ಕೆ ಮುಂದೂಡಿತು. ವಿಚಾರಣೆ ವೇಳೆ ರಾಜ್ಯ ಪ್ರಾಸಿಕ್ಯೂಷನ್‌ ಪರ ನಾಗೇಶ್ವರಪ್ಪ ಮತ್ತು ಆರ್.ಸೌಮ್ಯ ಹಾಜರಿದ್ದರು. ಈ ಪ್ರಕರಣದಲ್ಲಿ ವಿಶೇಷ ಪ್ರಾಸಿಕ್ಯೂಟರ್‌ ಆಗಿ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶಿಸಿದೆ.

ಡಿ ಫಾಲ್ಟ್‌ ಜಾಮೀನು ರದ್ದು: ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ 18 ಆರೋಪಿಗಳು ಸಲ್ಲಿಸಿದ್ದ ಡಿಫಾಲ್ಟ್‌ ಜಾಮೀನು ಅರ್ಜಿಗಳನ್ನು ಜನಪ್ರತಿನಿಧಿಗಳ ವಿಶೇಷ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ. ಈ ಪ್ರಕರಣದಲ್ಲಿ ಒಟ್ಟು 20 ಆರೋಪಿಗಳಿದ್ದು, 20ನೇ ಆರೋಪಿ ಹಾಗೂ ಐದನೇ ಆರೋಪಿ ಹೊರಗಿದ್ದಾರೆ. ವಿಶೇಷ ಪ್ರಾಸಿಕ್ಯೂಟರ್ ಅಶೋಕ್ ಎನ್‌.ನಾಯಕ್‌ ವಾದ ಮಂಡಿಸಿದರು.

ಪ್ರಕರಣವೇನು?
ಮಿನಿ ಅವೆನ್ಯೂ ರಸ್ತೆಯಲ್ಲಿರುವ ಸೇಫ್‌ ಮೆಡಿಕಲ್‌ ಸ್ಟೋರ್‌ ಮುಂಭಾಗ ಶಿವಪ್ರಕಾಶ್‌ ಅಲಿಯಾಸ್ ಬಿಕ್ಲು ಶಿವುನನ್ನು 2025ರ ಜುಲೈ 15ರಂದು 8 ರಿಂದ 9 ಜನರಿದ್ದ ಗುಂಪು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿತ್ತು. ಈ ಸಂಬಂಧ ಭಾರತಿ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದಲ್ಲಿ ಬೈರತಿ ಬಸವರಾಜ ಐದನೇ ಆರೋಪಿಯಾಗಿದ್ದಾರೆ. ಅವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ ಕಲಂ 103 ಮತ್ತು 190ರ ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಈ ಪ್ರಕರಣವನ್ನು ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.