ADVERTISEMENT

ಸಚಿವರು, ಶಾಸಕರ ವೇತನ ಹೆಚ್ಚಳ; ಶೇ 50 ರಿಂದ ಶೇ 60 ರಷ್ಟು ಏರಿಕೆ

ಚರ್ಚೆ ಇಲ್ಲದೇ ಅಂಗೀಕಾರ l ಶೇ 50 ರಿಂದ ಶೇ 60 ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 20:56 IST
Last Updated 22 ಫೆಬ್ರುವರಿ 2022, 20:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೋವಿಡ್‌ ತಂದ ಸಂಕಷ್ಟ, ಆರ್ಥಿಕ ಹಿಂಜರಿತದ ಮಧ್ಯೆಯೂ ಮುಖ್ಯಮಂತ್ರಿ, ಸಚಿವರು, ಶಾಸಕರ ವೇತನ ಮತ್ತು ವಿವಿಧ ಭತ್ಯೆಗಳನ್ನು ಹೆಚ್ಚಿಸುವ ಎರಡು ಪ್ರತ್ಯೇಕ ಮಸೂದೆಗಳಿಗೆ ಯಾವುದೇ ಚರ್ಚೆ ಇಲ್ಲದೇ ವಿಧಾನಮಂಡಲದ ಉಭಯ ಸದನಗಳು ಮಂಗಳವಾರ ಒಪ್ಪಿಗೆ ನೀಡಿವೆ.

ಸಚಿವ ಕೆ.ಎಸ್‌.ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್‌ ಸದಸ್ಯರು ಧರಣಿ, ಕೂಗಾಟ ಮತ್ತು ಗದ್ದಲ ನಡೆಸುತ್ತಿದ್ದರು. ಈ ಮಧ್ಯೆಯೇ, ‘ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಹಾಗೂ ‘ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022’ ಅನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಮಂಡಿಸಿ, ಅಂಗೀಕಾರ ಪಡೆದರು.

ಎರಡೂ ಮಸೂದೆಗಳು ರಾಜ್ಯಪಾಲರ ಅಂಕಿತ ಪಡೆದು ಕಾಯ್ದೆಯಾದ ಬಳಿಕ, ವೇತನ ಹೆಚ್ಚಳವಾಗಲಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ವಾರ್ಷಿಕ ₹92.40 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ADVERTISEMENT

ಇದರಿಂದಾಗಿ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರ ವೇತನದಲ್ಲಿ ಶೇ 60, ಮುಖ್ಯಮಂತ್ರಿ ಮತ್ತು ಸಚಿವರ ವೇತನದಲ್ಲಿ ಶೇ 50, ಸಭಾಧ್ಯಕ್ಷರು, ಸಭಾಪತಿ ಮತ್ತು ವಿರೋಧ ಪಕ್ಷಗಳ ನಾಯಕರ ವೇತನದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ. ಆದರೆ, ವೇತನಕ್ಕಿಂತ ವಿವಿಧ ರೀತಿಯ ಭತ್ಯೆಗಳನ್ನು ಗಣನೀಯ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದ್ದು, ವೇತನಕ್ಕಿಂತ ಭತ್ಯೆಗಳ ಗಳಿಕೆಯೇ ಹೆಚ್ಚಾಗಿದೆ.

ಐದು ವರ್ಷಕ್ಕೊಮ್ಮೆ ಪರಿಷ್ಕರಣೆ

‘ಇನ್ನು ಮುಂದೆ ಮುಖ್ಯಮಂತ್ರಿ, ಸಚಿವರು, ವಿರೋಧಪಕ್ಷದ ನಾಯಕರು, ಸಭಾಪತಿ, ಸಭಾಧ್ಯಕ್ಷರು ಮತ್ತು ಶಾಸಕರ ವೇತನ ಮತ್ತು ಭತ್ಯೆಗಳ ಪರಿಷ್ಕರಣೆ ನಿಯಮಿತವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಆಗಲಿದೆ. ಇದಕ್ಕಾಗಿ ಇನ್ನು ಮುಂದೆ ಮಸೂದೆಯಯನ್ನು ಮಂಡಿಸುವ ಅಗತ್ಯವಿಲ್ಲ’ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಿಧಾನಸಭೆಯಲ್ಲಿ ತಿಳಿಸಿದರು.

ಕಾಲ– ಕಾಲಕ್ಕೆ ಮನೆ ಬಾಡಿಗೆ, ಪೆಟ್ರೊಲ್‌, ವೈದ್ಯಕೀಯ ವೆಚ್ಚಗಳೂ ಹೆಚ್ಚಾಗುತ್ತಲೇ ಇರುತ್ತವೆ. ವೆಚ್ಚಗಳ ಸೂಚ್ಯಂಕದ ಅನ್ವಯ ವೇತನ ಪರಿಷ್ಕರಣೆ ಆಗಲೇಬೇಕಿದೆ ಎಂದರು.

ವೇತನ ಪರಿಷ್ಕರಣೆ

ಜನಪ್ರತಿನಿಧಿಗಳು;ಪ್ರಸ್ತುತ;ಪರಿಷ್ಕೃತ (ತಿಂಗಳಿಗೆ ₹ಗಳಲ್ಲಿ)

ಮುಖ್ಯಮಂತ್ರಿ;50ಸಾವಿರ;75ಸಾವಿರ

ಸಚಿವ;40ಸಾವಿರ;60ಸಾವಿರ

ಸಭಾಪತಿ–ಸಭಾಧ್ಯಕ್ಷ;50ಸಾವಿರ;75ಸಾವಿರ

ವಿರೋಧಪಕ್ಷದ ನಾಯಕ;40ಸಾವಿರ;60ಸಾವಿರ

ಮುಖ್ಯಸಚೇತಕ;35ಸಾವಿರ;50ಸಾವಿರ

ಭತ್ಯೆ ಹೆಚ್ಚಳ (ತಿಂಗಳಿಗೆ ₹ಗಳಲ್ಲಿ)*

ಯಾವ ಭತ್ಯೆ;ಪ್ರಸ್ತುತ;ಪರಿಷ್ಕೃತ

ಮನೆ ಬಾಡಿಗೆ;80 ಸಾವಿರ; 1.20 ಲಕ್ಷ

ಮನೆ ನಿರ್ವಹಣೆ;20 ಸಾವಿರ; 30 ಸಾವಿರ

ಪೆಟ್ರೋಲ್‌;1 ಸಾವಿರ ಲೀಟರ್‌; 2 ಸಾವಿರ ಲೀಟರ್‌ (ಸಮನಾದ ಭತ್ಯೆ)

ಆತಿಥ್ಯ;3ಲಕ್ಷ;4ಲಕ್ಷ (ವರ್ಷಕ್ಕೆ)

*ಮುಖ್ಯಮಂತ್ರಿ, ಸಭಾಪತಿ, ಸಭಾಧ್ಯಕ್ಷರು ಮತ್ತು ಸಚಿವರಿಗೆ

ಶಾಸಕರಿಗೆ ಸಿಗುವುದೆಷ್ಟು?(ತಿಂಗಳಿಗೆ ₹ಗಳಲ್ಲಿ)

ಯಾವ ಭತ್ಯೆ;ಪ್ರಸ್ತುತ;ಪರಿಷ್ಕೃತ

ವೇತನ ;25ಸಾವಿರ;40ಸಾವಿರ

ಕ್ಷೇತ್ರ ಪ್ರಯಾಣ ಭತ್ಯೆ;40ಸಾವಿರ;60 ಸಾವಿರ

ಸಭೆಗೆ ಹಾಜರಾದರೆ ದಿನಭತ್ಯೆ;2ಸಾವಿರ;7ಸಾವಿರ

ದೂರವಾಣಿ/ಮೊಬೈಲ್‌; 20 ಸಾವಿರ; 20 ಸಾವಿರ

ಅಂಚೆ ವೆಚ್ಚ; 5ಸಾವಿರ; 5 ಸಾವಿರ

ಆಪ್ತ ಸಹಾಯಕರ ವೇತನ; 20 ಸಾವಿರ ;20ಸಾವಿರ

ವಾರ್ಷಿಕ ಪ್ರಯಾಣ ಭತ್ಯೆ;2 ಲಕ್ಷ; 2.50 ಲಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.