ADVERTISEMENT

ಮಸೂದೆಗಳಿಗೆ ವಿಧಾನಪರಿಷತ್‌ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 18:29 IST
Last Updated 4 ಫೆಬ್ರುವರಿ 2021, 18:29 IST

ಬೆಂಗಳೂರು: ವಿಧಾನಸಭೆಯಲ್ಲಿ ಅಂಗೀಕಾರಗೊಂಡಿರುವ ಮೋಟಾರು ವಾಹನ ತೆರಿಗೆ ನಿರ್ಧರಣೆಯ ಎರಡನೇ ತಿದ್ದುಪಡಿ ಮಸೂದೆ, ಸಾಂಕ್ರಾಮಿಕ ರೋಗಗಳ ತಿದ್ದುಪಡಿ ಮಸೂದೆ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ ಮಸೂದೆ ವಿಧಾನ ಪರಿಷತ್‌ನಲ್ಲಿ ಗುರುವಾರ ಅನುಮೋದನೆಗೊಂಡಿತು.

ಮೋಟಾರು ವಾಹನ ತೆರಿಗೆ ನಿರ್ಧರಣೆಯ ಎರಡನೇ ತಿದ್ದುಪಡಿ ಮಸೂದೆ ಮಂಡಿಸಿದ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, 'ಈ ಮಸೂದೆ ಮೂಲಕ ಕಬ್ಬು ಕಡಿಯುವ ಯಂತ್ರಕ್ಕೆ ಶೇ 3ರಷ್ಟು ತೆರಿಗೆ ವಿಧಿಸಲು ಉದ್ದೇಶಿಸಲಾಗಿದೆ" ಎಂದರು.

ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, 'ಶೇ1 ಕ್ಕೆ ಇಳಿಸಿದರೆ ಅನುಕೂಲ" ಎಂದರು. ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, 'ಇದು ರಸ್ತೆಯಲ್ಲಿ ಓಡುವ ಯಂತ್ರ ಅಲ್ಲ. ಹೀಗಾಗಿ, ಸಂಪೂರ್ಣ ತೆರಿಗೆ ವಿನಾಯಿತಿ ನೀಡುವಂತೆ ಕೋರಿದರು. ಜೆಡಿಎಸ್‌ನ ಅಪ್ಪಾಜಿಗೌಡ, ರೈತರ ಬಳಕೆಯ ಈ ಯಂತ್ರಕ್ಕೆ ತೆರಿಗೆ ಹಾಕಬಾರದು ಎಂದೂ ಕೋರಿದರು.

ADVERTISEMENT

ಮುಖ್ಯಮಂತ್ರಿ ಪರವಾಗಿ, ‘ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ತಿದ್ದುಪಡಿ‘ ಮಸೂದೆ ಮಂಡಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌, ‘ಠೇವಣಿದಾರರ ಹಿತರಕ್ಷಣೆಗಾಗಿ ಇದನ್ನು ತರಲಾಗಿದೆ. ವಂಚಿಸುವವರಿಗೆ ಜೈಲು ಶಿಕ್ಷೆ 6 ರಿಂದ 7 ವರ್ಷಕ್ಕೆ ಏರಿಸಿದ್ದೇವೆ. ದಂಡದ ಮೊತ್ತ ₹ 5 ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸಲಾಗಿದೆ. ಪುನರಾವರ್ತಿತ ತಪ್ಪಿಗೆ ದಂಡವನ್ನು ₹ 10 ಲಕ್ಷದಿಂದ ₹ 50 ಕೋಟಿ ಹೆಚ್ಚಿಸುವ ಅವಕಾಶವೂ ಇದೆ’ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ, ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ,ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಕಾಂಗ್ರೆಸ್‌ ಸದಸ್ಯರಾದ ಬಿ.ಕೆ. ಹರಿಪ್ರಸಾದ್, ನಸೀರ್‌ ಅಹಮದ್‌, ಅಲ್ಲಂ ವೀರಭದ್ರಪ್ಪ, ಮರಿತಿಬ್ಬೇಗೌಡ, ಆರ್.ಬಿ. ತಿಮ್ಮಾಪೂರ್, ಪಿ.ಆರ್. ರಮೇಶ್ . ಜೆಡಿಎಸ್‌ನ ಅಪ್ಪಾಜಿಗೌಡ, ತಿಪ್ಪೇಸ್ವಾಮಿ ಮತ್ತಿತರರು ಮಸೂದೆಯ ಬಗ್ಗೆ
ಸುದೀರ್ಘ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.