ADVERTISEMENT

ಕಾಂಗ್ರೆಸ್‌ಗೆ ಮೂರ್ಛೆ ತರಿಸಲು ಸಿಧು, ಸಿದ್ದು ಇಬ್ಬರೇ ಸಾಕು: ಬಿಜೆಪಿ ವ್ಯಂಗ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2022, 11:37 IST
Last Updated 6 ಫೆಬ್ರುವರಿ 2022, 11:37 IST
ಸಿದ್ದರಾಮಯ್ಯ ಮತ್ತು ನವಜೋತ್‌ ಸಿಂಗ್‌ ಸಿಧು
ಸಿದ್ದರಾಮಯ್ಯ ಮತ್ತು ನವಜೋತ್‌ ಸಿಂಗ್‌ ಸಿಧು    

ಬೆಂಗಳೂರು: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಆಪ್ತ ಸಲಹೆಗಾರ ಕೆ. ರಾಜು ಅವರು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿಯಾದ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿಯು ಕಾಂಗ್ರೆಸ್‌ ಅನ್ನು ಗೇಲಿ ಮಾಡಿದೆ.

ಈ ಬಗ್ಗೆ ಇಂದು ಟ್ವೀಟ್‌ ಮಾಡಿರುವ ಬಿಜೆಪಿ, 'ರಾಜ್ಯ ಕಾಂಗ್ರೆಸ್ ಶೀತಲ ಸಮರದ ಬಿಸಿ ಈಗ ದಿಲ್ಲಿ ನಾಯಕರಿಗೂ ತಟ್ಟಿದೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಮಧ್ಯೆ ತೇಪೆ ಹಚ್ಚಲು ರಾಹುಲ್ ಗಾಂಧಿ ಅವರು ತಮ್ಮ ಆಪ್ತ ಸಲಹೆಗಾರರನ್ನೇ ಸಿದ್ದರಾಮಯ್ಯ ನಿವಾಸಕ್ಕೆ ಕಳುಹಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ತೀವ್ರ ನಿಗಾ ಘಟಕ ಸೇರುವಂತಾಗಿದೆಯೇ?' ಎಂದು ಪ್ರಶ್ನೆ ಮಾಡಿದೆ.

ADVERTISEMENT

ಪಂಜಾಬ್‌ನಲ್ಲಿ ಚುನಾವಣೆಗೆ ದಿನಗಣನೆ ಆರಂಭವಾದರೂ ಬಂಡಾಯ ಶಮನವಾಗಿಲ್ಲ. ಅಲ್ಲಿ ಸಿಧು, ಇಲ್ಲಿ ಸಿದ್ದು. ಕಾಂಗ್ರೆಸ್ ಹೈಕಮಾಂಡ್‌ಗೆ ಮೂರ್ಛೆ ರೋಗ ತರಿಸುವುದಕ್ಕೆ ಇವರಿಬ್ಬರೇ ಸಾಕು ಎಂದು ವ್ಯಂಗ್ಯವಾಡಿದೆ.

'ಒಂದೆಡೆ ಅಧ್ಯಕ್ಷರು ಹಿಜಾಬ್ ಬಗ್ಗೆ ಪಕ್ಷದವರಿಗೆ ಎಲ್ಲಿಯೂ ಮಾತನಾಡಬೇಡಿ ಎಂದು ಹೇಳುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಅಧ್ಯಕ್ಷರ ಮಾತನ್ನು ದಿಕ್ಕರಿಸಿ ಹಿಜಾಬ್ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ಮಾನ್ಯ ಕೆಪಿಸಿಸಿ ಅಧ್ಯಕ್ಷರೇ, ಮುಂದಿನ ನೋಟಿಸ್ ಸಿದ್ದರಾಮಯ್ಯ ಹೆಸರಿಗೆ ಕಳುಹಿಸುತ್ತೀರಾ?' ಎಂದೂ ಬಿಜೆಪಿ ಕೆಣಕಿದೆ.

'ಕಾಂಗ್ರೆಸ್ ಪಕ್ಷಕ್ಕೆ ಪಂಚರಾಜ್ಯಗಳ ಚುನಾವಣೆ ಬಗ್ಗೆ ತಲೆಕೆಡಿಸಿಕೊಳ್ಳಬೇಕೋ ಇಲ್ಲ ಸಿಧು, ಸಿದ್ದರಾಮಯ್ಯ ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬೇಕೋ ಎಂಬುದು ತಿಳಿಯದಾಗಿದೆ. ಇವರಿಬ್ಬರ ಜಗಳದಿಂದ ರಾಹುಲ್ ಗಾಂಧಿ ಅವರು ಬೇಸತ್ತು ಹೋಗಿದ್ದಾರೆ. ಪರಿಹಾರಕ್ಕಾಗಿ ಮತ್ತೊಂದು ವಿದೇಶ ಪ್ರವಾಸ ಮಾಡುವುದು ಖಚಿತವಾಗಿದೆ' ಎಂದು ಬಿಜೆಪಿ ಕುಹಕವಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.