ADVERTISEMENT

'ಕಾಶ್ಮೀರ ಫೈಲ್ಸ್‌'ಗಾಗಿ ಪುನೀತ್ ಸಿನಿಮಾ ತಡೆಯಲು ಬಿಜೆಪಿ ಹುನ್ನಾರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 18:00 IST
Last Updated 22 ಮಾರ್ಚ್ 2022, 18:00 IST
   

ಬೆಂಗಳೂರು: ದಿವಂಗತ ನಟ ಪುನೀತ್ ರಾಜ್‍ಕುಮಾರ್ ಅಭಿನಯದ'ಜೇಮ್ಸ್' ಸಿನಿಮಾ ಪ್ರದರ್ಶನವನ್ನು ನಿಲ್ಲಿಸಿ, ಚಿತ್ರಮಂದಿರಗಳಲ್ಲಿ 'ಕಾಶ್ಮೀರ ಫೈಲ್ಸ್'ಹಾಕುವಂತೆ ಬಿಜೆಪಿ ಶಾಸಕರು ಹುನ್ನಾರ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನಿನ್ನೆ (ಸೋಮವಾರ) 'ಜೇಮ್ಸ್' ಚಿತ್ರದ ನಿರ್ಮಾಪಕ ಕಿಶೋರ್ ನನ್ನನ್ನು ಭೇಟಿಯಾದರು. ಈ ವೇಳೆ ಅವರು, ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು ಅನೇಕ ಚಿತ್ರಮಂದಿರಗಳಿಗೆ ಹೋಗಿ'ಜೇಮ್ಸ್' ಸಿನಿಮಾಪ್ರದರ್ಶನ ನಿಲ್ಲಿಸಿ, 'ಕಾಶ್ಮೀರ ಫೈಲ್ಸ್'ಸಿನಿಮಾ ಹಾಕುವಂತೆ ಒತ್ತಡ ಹೇರಿದ್ದಾರೆ. ಇನ್ನೂ ಹಲವು ಕಡೆ ಇದೇ ರೀತಿ ಒತ್ತಡ ಹೇರುತ್ತಿರುವುದಾಗಿ ನೋವು ತೋಡಿಕೊಂಡರು' ಎಂದು ತಿಳಿಸಿದ್ದಾರೆ.

''ಜೇಮ್ಸ್' ನಿರ್ಮಾಪಕರು ಸಿನಿಮಾ ಬಿಡುಗಡೆಗೆ ಮೊದಲೇ ಚಿತ್ರಮಂದಿರಗಳನ್ನು ಬುಕ್ ಮಾಡಿ, ಮುಂಗಡ ಹಣ ಪಾವತಿಸಿದ್ದರು. ಈಗ ಬಿಜೆಪಿಯವರು 'ಕಾಶ್ಮೀರ ಫೈಲ್ಸ್‌'ಗಾಗಿ'ಜೇಮ್ಸ್' ಚಿತ್ರ ನಿಲ್ಲಿಸಿ ಎಂದು ಬಲವಂತ ಮಾಡುತ್ತಿರುವುದು ದೌರ್ಜನ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಮುಂದುವರಿದು, 'ಪುನೀತ್ ರಾಜ್‍ಕುಮಾರ್ ಸಮಾಜಮುಖಿ, ಪ್ರತಿಭಾವಂತ ನಟ. ಅವರ ಕೊನೇ ಸಿನಿಮಾ ವೀಕ್ಷಿಸಬೇಕು ಎಂಬುದು ಎಲ್ಲ ಅಭಿಮಾನಿಗಳ ಆಸೆ. 'ಜೇಮ್ಸ್' ಚಿತ್ರ ಸ್ಥಗಿತಗೊಳಿಸುವ ಬಿಜೆಪಿ ಶಾಸಕರ ಪ್ರಯತ್ನವನ್ನು ವಿರೋಧಿಸುತ್ತೇನೆ. ತಮ್ಮನ್ನು ತಾವು ಸಜ್ಜನರು ಎಂದು ಹೇಳಿಕೊಳ್ಳುವಬಿಜೆಪಿಯವರು ಮಾಡುವುದು ಇಂಥಾ ದೌರ್ಜನ್ಯದ ಕೆಲಸವನ್ನು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರ ಪ್ರದರ್ಶನಕ್ಕೆ ಅಡ್ಡಿ ಮಾಡುತ್ತಿರುವ ಶಾಸಕರೊಂದಿಗೆ ಮಾತನಾಡುವುದಾಗಿ ಮತ್ತು'ಜೇಮ್ಸ್'ಗಾಗಿ ಬುಕ್ ಆಗಿರುವ ಚಿತ್ರಮಂದಿರಗಳಲ್ಲಿ ಪ್ರದರ್ಶನ ಮುಂದುವರಿಸುವಂತೆ ನಿರ್ಮಾಪಕರಿಗೆ ತಿಳಿಸಿರುವುದಾಗಿಯೂ ಹೇಳಿದ್ದಾರೆ.

ಚಿತ್ರ ವೀಕ್ಷಿಸುವಂತೆ ಯಾರನ್ನೂ ಬಲವಂತ ಮಾಡಬಾರದು ಎಂದಿರುವಸಿದ್ದರಾಮಯ್ಯ,ಆಸಕ್ತಿ ಇರುವವರು'ಕಾಶ್ಮೀರ ಫೈಲ್ಸ್' ನೋಡಲಿ. ಆದರೆ, ಒಂದು ಸಿನಿಮಾ ಸ್ಥಗಿತಗೊಳಿಸಿ ಮತ್ತೊಂದು ಚಿತ್ರ ನೋಡಿ ಎಂದು ಜನರ ಮೇಲೆ ಒತ್ತಡ ಹಾಕುವುದು ಸರಿಯಲ್ಲ. ಹಿಂದೆ, ಮಹಾತ್ಮ ಗಾಂಧಿ ಕುರಿತ ಸಿನಿಮಾ ಹಾಗೂ ಸಾಮಾಜಿಕ ಕಳಕಳಿಯ 'ಜೈ ಭೀಮ್' ಬಿಡುಗಡೆಯಾದಾಗ ಅವುಗಳನ್ನು ನೋಡುವಂತೆ ಇತರರ ಮೇಲೆ ನಾವು ಒತ್ತಡ ಹಾಕಿದ್ದೆವಾ? ಎಂದು ಪ್ರಶ್ನಿಸಿದ್ದಾರೆ.

'ಕಾಶ್ಮೀರ ಫೈಲ್ಸ್‌' ಸಿನಿಮಾಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ಈ ಕುರಿತು ಮಾತನಾಡಿದ ಅವರು,ಸಾಮಾಜಿಕ ಕಳಕಳಿ ಹೊಂದಿದ್ದಪುನೀತ್ ರಾಜ್‍ಕುಮಾರ್ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್‌ಗೂ ತೆರಿಗೆ ವಿನಾಯಿತಿ ನೀಡಬೇಕಿತ್ತು. ಇನ್ನಾದರೂ ಚಿತ್ರದ ಮೇಲಿನ ತೆರಿಗೆ ರದ್ದು ಮಾಡಲಿ. ಮತ್ತಷ್ಟು ಜನರಿಗೆ ಸಿನಿಮಾ ನೋಡಲು ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಒತ್ತಾಯಿಸಿದ್ದಾರೆ.

ಯಾರು ಒತ್ತಡ ಹಾಕಿದ್ದಾರೋ ತಿಳಿದಿಲ್ಲ–ನಿರ್ಮಾಪಕ
ಸುದ್ದಿಗಾರರೊಂದಿಗೆ ಮಾತನಾಡಿದ ‘ಜೇಮ್ಸ್‌’ ನಿರ್ಮಾಪಕ ಕಿಶೋರ್‌, ‘ಕೆಲ ಚಿತ್ರಮಂದಿರದ ಮಾಲೀಕರು ನನಗೆ ಕರೆ ಮಾಡಿ ಒಂದು ಶೋ ‘ಕಾಶ್ಮೀರ್ ಫೈಲ್ಸ್‌’ ಹಾಕಿಕೊಳ್ಳುತ್ತೇವೆ ಎಂದು ಕೇಳಿದರು. ಅವರಿಗೆ ಯಾರು ಒತ್ತಡ ಹಾಕಿದ್ದಾರೋ ನನಗೆ ತಿಳಿದಿಲ್ಲ. ಎಲ್ಲೂ ಜೇಮ್ಸ್‌ನ ಎಲ್ಲ ಪ್ರದರ್ಶನಗಳನ್ನು ತೆಗೆದು ಈ ಸಿನಿಮಾ ಹಾಕಲು ಕೇಳಿಲ್ಲ. ಆದರೆ, ಇದಕ್ಕೆ ನಾನು ಒಪ್ಪಲಿಲ್ಲ. ‘ಜೇಮ್ಸ್‌’ ಅಪ್ಪು ಅವರ ಕೊನೆಯ ಸಿನಿಮಾ. ನನ್ನ ಸಿನಿಮಾಗೆ ತೊಂದರೆ ನೀಡಬೇಡಿ ಎಂದಿದ್ದೇನೆ. ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬುತ್ತಿರುವಾಗ ತೆಗೆಯಬೇಡಿ ಎಂದಿದ್ದೇನೆ. ಸಿನಿಮಾ ವೀಕ್ಷಿಸಲು ಆಹ್ವಾನ ನೀಡಲು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.