ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ಭೂಮಿಯ ಮೇಲಿನ ಅತ್ಯಂತ ಭ್ರಷ್ಟರು ಬಿಜೆಪಿಯವರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವವರೆಗೆ ಭ್ರಷ್ಟಾಚಾರ ಬೆಳೆದಿರಲಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ಮಹಾನುಭಾವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಶೋಕ, ಮೂಡಾದಲ್ಲಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ 14 ಸೈಟು ಕಬಳಿಸಿ ಸಿಕ್ಕಿಬಿದ್ದಾಗ ವಾಪಸ್ ಕೊಟ್ಟ ಮಹಾನುಭಾವರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನೂರಾರು ಕೋಟಿ ಅವ್ಯವಹಾರ ಆಗಿದೆ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಸ್ವತಃ ಒಪ್ಪಿಕೊಂಡ ಮೇಲೂ ಅಧಿಕಾರದಲ್ಲಿ ಮುಂದುವರಿಯುತ್ತಿರುವ ಮಹಾನುಭಾವರು, ಭ್ರಷ್ಟಾಚಾರದ ಪಿತಾಮಹ ಎನಿಸಿಕೊಂಡಿರುವ ಕಾಂಗ್ರೆಸ್ ಪಕ್ಷದ ವಿರುದ್ದ ಜೀವನವೆಲ್ಲಾ ಹೋರಾಟ ಮಾಡಿ, ನಂತರ ಅಧಿಕಾರಕ್ಕಾಗಿ ಅದೇ ಹುತ್ತದಲ್ಲಿ ಸೇರಿಕೊಂಡಿರುವ ಮಹಾನುಭಾವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಈ ಶತಮಾನದ ಅತ್ಯಂತ ದೊಡ್ಡ ವಿಪರ್ಯಾಸ ಎಂದು ಟೀಕಿಸಿದ್ದಾರೆ.
ಸ್ವಾಮಿ, ಸಿಎಂ ಸಿದ್ದರಾಮಯ್ಯ ಅವರೇ, ತಮ್ಮ ಆಡಳಿತದಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ನಂಬರ್ 1 ಆಗಿದೆ ಎಂದು ನಾವಲ್ಲ, ಸ್ವತಃ ತಮ್ಮ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು, ತಮ್ಮ ಆರ್ಥಿಕ ಸಲಹೆಗಾರರೂ ಆದ ಶ್ರೀ ಬಸವರಾಜ ರಾಯರೆಡ್ಡಿ ಅವರು ತಮಗೆ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಂದು ಕೇಳಿದ್ದಾರೆ.
ಅದೆಲ್ಲ ಹೋಗಲಿ ಬಿಡಿ. 2013ರಲ್ಲಿ ತಾವು ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಆಗಾಗಲೇ 6 ಬಾರಿ ಶಾಸಕರಾಗಿದ್ದ ಮಾನ್ಯ ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ಸಂಪುಟಕ್ಕೆ ಯಾಕೆ ಸೇರಿಸಿಕೊಳ್ಳಲಿಲ್ಲ? ಡಿ.ಕೆ.ಶಿವಕುಮಾರ್ ಅವರು ಭ್ರಷ್ಟರು ಎಂಬ ಕಾರಣಕ್ಕೋ? ಸ್ಪಷ್ಟನೆ ನೀಡಿ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.