ಧರ್ಮಸ್ಥಳ ಪ್ರಕರಣ
ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣ ತಿರುವು ಪಡೆಯುತ್ತಿದ್ದಂತೆ, ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ಬಸವರಾಜ ಬೊಮ್ಮಾಯಿ ಅವರು ಎನ್‌ಐಎ ತನಿಖೆಗೆ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಆರ್.ಅಶೋಕ, ‘ದೂರುದಾರನ ಹಿನ್ನೆಲೆ ಪರಿಶೀಲಿಸದೆ ಎಸ್‌ಐಟಿ ರಚಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಪ್ಪು. ಮುಸುಕುಧಾರಿಯನ್ನು ಬಂಧಿಸಿದರೆ ಸಾಲದು, ಅವರ ಹಿಂದೆ ಇರುವವರನ್ನು ಪತ್ತೆ ಮಾಡಬೇಕು. ಪ್ರಗತಿಪರರು ಕರೆ ತಂದಿರುವ ಶಂಕೆ ಇದೆ. ಅದಕ್ಕಾಗಿ ಎಸ್‌ಐಟಿ ರಚಿಸಬೇಕು. ಅಪಪ್ರಚಾರಕ್ಕೆ ವಿದೇಶದಿಂದ ಹಣ ಬಂದಿರುವ ಸಾಧ್ಯತೆ ಇದೆ. ಹಾಗಾಗಿ, ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಬೇಕು’ ಎಂದು ಒತ್ತಾಯಿಸಿದರು.
‘ಎಸ್‌ಐಟಿ ರಚಿಸುವ ಮೊದಲು ಮುಸುಕುಧಾರಿಯ ಪೂರ್ವಾಪರ ತಿಳಿದುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಅವರು ಪ್ರಗತಿಪರರ ಮಾತು ಕೇಳಿಕೊಂಡು ಎಸ್‌ಐಟಿ ರಚಿಸಿದರು. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡಿದ್ದಾರೆ. ಸರ್ಕಾರದ ತಪ್ಪು ಸಾಬೀತಾಗಿದೆ. ಈ ಹಣವನ್ನು ಕಾಂಗ್ರೆಸ್ ಭರಿಸಬೇಕು. ಈ ಘಟನೆಯಿಂದ ಭಕ್ತರು ಅನುಭವಿಸಿದ ನೋವು ಶಮನಗೊಳಿಸಲು ಸಾಧ್ಯವಿಲ್ಲ’ ಎಂದರು.
‘ತಮಿಳುನಾಡಿನವರು ಹಿಂದೂ ದೇವರ ಫೋಟೊ ಸುಡುತ್ತಾರೆ. ಕೇರಳ ಸರ್ಕಾರವಂತೂ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಯೂಟ್ಯೂಬರ್ ಸಮೀರ್ ವಿಡಿಯೊ ಮಾಡಿ ಅಪಪ್ರಚಾರ ಮಾಡಿದ್ದಾನೆ. ಮೊದಲು ಆತನನ್ನು ಮೊದಲು ಬಂಧಿಸಬೇಕು. ಜಾಮೀನು ರದ್ದು ಮಾಡಲು ಮೇಲ್ಮನವಿ ಸಲ್ಲಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.