ಆಯೋಗದ ಅಧ್ಯಕ್ಷರಿಗೆ ಬಿಜೆಪಿ ಮನವಿ
ಬೆಂಗಳೂರು: ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಅಡಿ ಬರುವ 15 ಜಾತಿಗಳು ಮತ್ತ ಪರಿಶಿಷ್ಟ ಪಂಗಡಗಳ ಅಡಿ ಬರುವ 1 ಜಾತಿಯ ಜತೆ ಕ್ರಿಶ್ಚಿಯನ್ ಎಂದು ಸೇರಿಸಿರುವುದನ್ನು ಇನ್ನೂ ಕೈಬಿಟ್ಟಿಲ್ಲ. ಸಮೀಕ್ಷೆಯ ಆ್ಯಪ್‌ನಲ್ಲಿರುವ ಪಟ್ಟಿಯಿಂದ ಕೂಡಲೇ ಅದನ್ನು ಕೈಬಿಡಬೇಕು ಬಿಜೆಪಿ ನಿಯೋಗವು ಆಯೋಗವನ್ನು ಒತ್ತಾಯಿಸಿದೆ.
ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಕೇಂದ್ರದ ಮಾಜಿ ಸಚಿವ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಪ್ರಧಾನ ಕಾರ್ಯದರ್ಶಿ ವಿ.ಸುನಿಲ್‌ಕುಮಾರ್ ಮತ್ತು ಇತರರು ಇದ್ದರು.
ಜಾತಿಪಟ್ಟಿ ಪ್ರಕಟಿಸಿದಾಗ 48 ಹಿಂದು ಜಾತಿಗಳನ್ನು ಕ್ರಿಶ್ಚಿಯನ್ ಎಂದು ಗುರುತಿಸಲಾಗಿತ್ತು. ಈ 48 ಜಾತಿಗಳಲ್ಲಿ 15 ಪರಿಶಿಷ್ಟ ಜಾತಿಗಳು ಮತ್ತು 1 ಪರಿಶಿಷ್ಟಪಂಗಡದ (ವಾಲ್ಮೀಕಿ) ಜಾತಿಗಳಿದ್ದವು. ಇದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾದ ಸಂದರ್ಭದಲ್ಲಿ ಆಯೋಗಕ್ಕೆ ಆಕ್ಷೇಪಣೆ ಸಲ್ಲಿಸಲಾಗಿತ್ತು. ಇದೇ 21 ರಂದು ಸುದ್ದಿಗೋಷ್ಠಿಯಲ್ಲಿ 33 ಹಿಂದು ಜಾತಿಗಳನ್ನು ಕ್ರೈಸ್ತ ಪಟ್ಟಿಯಿಂದ ಸಮೀಕ್ಷೆಗೆ ಬಳಸುವ ಆ್ಯಪ್‌ನಲ್ಲಿ ಕಾಣದಂತೆ ಮಾಡಿರುವುದಾಗಿ ಹೇಳಿದ್ದೀರಿ. ಆದರೆ, ಅಧಿಕೃತವಾಗಿ ತೆಗೆಯದೇ ಉಳಿದಿರುವ ಜಾತಿಗಳೆಲ್ಲವೂ ಪರಿಶಿಷ್ಟ ಜಾತಿಗಳೇ ಆಗಿರುವುದು ಆತಂಕದ ಬೆಳವಣಿಗೆ ಎಂದು ನಿಯೋಗ ತಿಳಿಸಿದೆ.
ಆದಿ ಆಂಧ್ರ,ಆದಿ ಕರ್ನಾಟಕ, ಆದಿದ್ರಾವಿಡ,ಬಂಜಾರ,ಬುಡುಗ ಜಂಗಮ,ಹೊಲೆಯ, ಲಮಾಣಿ,ಲಂಬಾಣಿ, ಮಾದಿಗ, ಮಹಾರ್, ಮಾಲಾ, ಪರಯ, ವಡ್ಡ, ವಾಲ್ಮೀಕಿ ಈ ಜಾತಿಗಳ ಜತೆಗಿನ ಕ್ರಿಶ್ಚಿಯನ್ ಪದಗಳನ್ನು ತೆಗೆದಿಲ್ಲ. ಸಮೀಕ್ಷೆ ಆ್ಯಪ್‌ನಲ್ಲಿ ಅವುಗಳ ಕಾಣದಂತೆ ಮಾಡುವ ಕುರಿತು ಅಧಿಕೃತ ಪ್ರಕಟಣೆಯನ್ನು ಹೊರಡಿಸಬೇಕು ಎಂದು ಆಗ್ರಹಿಸಿದೆ.
ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹಿಂದುಳಿದ ವರ್ಗಗಳ ಆಯೋಗ 33 ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟು, ಉಳಿದ ದಲಿತ ಕ್ರೈಸ್ತ ಜಾತಿಗಳ ಬಗ್ಗೆ ಸ್ಪಷ್ಟನೆ ಕೊಡದೆ, ಕತ್ತಲಲ್ಲಿ ಇಟ್ಟಿರುವುದು ಸಮರ್ಥನೀಯವಲ್ಲ ಎಂದು ಹೇಳಿದೆ.
ಎರಡು ತಿಂಗಳ ಹಿಂದೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಆಯೋಗ 101 ಪರಿಶಿಷ್ಟ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನೇ ಮಾಡಿತ್ತು. ಆಗ ಈ 15 ಕ್ರೈಸ್ತ ಎಸ್‌ಸಿ ಜಾತಿಗಳು ಇರಲಿಲ್ಲ. ನಾಗಮೋಹನ್‌ದಾಸ್ ಆಯೋಗದ ಸಮೀಕ್ಷೆಯ ದತ್ತಾಂಶಗಳ ಆಧಾರದಲ್ಲಿ ಪ್ರವರ್ಗಗಳ ರಚನೆಯಾಗಿ ಮೀಸಲಾತಿ ವರ್ಗೀಕರಣವಾಗಿದೆ. ಆದರೆ, ಈಗ ನಿಮ್ಮ ಆಯೋಗ 15 ಹೊಸ ಕ್ರೈಸ್ತ ಪರಿಶಿಷ್ಟ ಆತಿಗಳ ಸೇರ್ಪಡೆಯಾಗಿ ಸಮೀಕ್ಷೆ ನಡೆದರೆ ದೊಡ್ಡ ಗೊಂದಲ ಉಂಟಾಗುತ್ತದೆ. ದತ್ತಾಂಶ ಏರುಪೇರಾಗುತ್ತದೆ ಎಂದು ತಿಳಿಸಿದೆ.
ಪ್ರಭಾವಿ ಸಮುದಾಯಗಳು ಹೋರಾಟಕ್ಕೆ ಇಳಿದಾಗ ಹಿಂದೂ ಜಾತಿಗಳ ಜತೆ ಕ್ರಿಶ್ಚಿಯನ್ ಪದ ಕಾಣದಂತೆ ಮಾಡುವುದಾಗಿ ಹೇಳಿದ್ದರು. ಆದರೆ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಾತಿ ಜತೆ ಕ್ರಿಶ್ಚಿಯನ್ ಎಂದು ಸೇರಿಸಿರುವುದನ್ನು ಕಾಣದಂತೆ ಮಾಡಿಲ್ಲ. ಕ್ರೈಸ್ತರಾಗಿ ಮತಾಂತರ ಹೊಂದಿದವರ ಮೂಲಜಾತಿ ಹಾಗೇ ಉಳಿಯುತ್ತದೆ ಎಂದು ಹೇಳಿದ್ದಾರೆ. ಅದು ಹೇಗೆ ಉಳಿಯಲು ಸಾಧ್ಯ? ಮೂಲಜಾತಿಯಲ್ಲೇ ಮೀಸಲಾತಿ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರಂತೆ. ತೀರ್ಮಾನ ಮಾಡಲು ಇವರು ಯಾರು? ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ರಿಮೋಟ್ ಕಂಟ್ರೋಲ್ ಬೇರೆಲ್ಲೋ ಇದೆ; ಈ ಆಯೋಗವನ್ನು ಆಯೋಗದಲ್ಲಿ ಇರುವವರೇ ನಡೆಸುತ್ತಿಲ್ಲಛಲವಾದಿ ನಾರಾಯಣಸ್ವಾಮಿ, ವಿರೋಧಪಕ್ಷದ ನಾಯಕ, ವಿಧಾನಪರಿಷತ್ತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.