ADVERTISEMENT

Karnataka politics: ಚುನಾವಣೆ ಗೆಲ್ಲಲು ಬಿಜೆಪಿಯಿಂದ ಕಾರ್ಯತಂತ್ರ ಚರ್ಚೆ

ವಿಧಾನಸಭಾ ಉಪಚುನಾವಣೆ, ಪರಿಷತ್‌ನ 4 ಸ್ಥಾನಗಳ ಚುನಾವಣೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2026, 23:30 IST
Last Updated 5 ಜನವರಿ 2026, 23:30 IST
ಬಿಜೆಪಿ ಪ್ರಮುಖರ ಸಭೆಯಲ್ಲಿ ಪ್ರಲ್ಹಾದ ಜೋಶಿ, ಬಿ.ಎಸ್.ಯಡಿಯೂರಪ್ಪ,ಬಿ.ವೈ.ವಿಜಯೇಂದ್ರ,  ಸುಧಾಕರ್ ರೆಡ್ಡಿ ಮತ್ತು ಆರ್‌.ಅಶೋಕ ಇದ್ದರು.
ಬಿಜೆಪಿ ಪ್ರಮುಖರ ಸಭೆಯಲ್ಲಿ ಪ್ರಲ್ಹಾದ ಜೋಶಿ, ಬಿ.ಎಸ್.ಯಡಿಯೂರಪ್ಪ,ಬಿ.ವೈ.ವಿಜಯೇಂದ್ರ,  ಸುಧಾಕರ್ ರೆಡ್ಡಿ ಮತ್ತು ಆರ್‌.ಅಶೋಕ ಇದ್ದರು.   

ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಗೆಲ್ಲಲು ರಣತಂತ್ರ ರೂಪಿಸುವ ಬಗ್ಗೆ ಸೋಮವಾರ ನಡೆದ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚೆ ನಡೆದಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಎರಡೂ ಕ್ಷೇತ್ರಗಳಲ್ಲದೇ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೂ ಅಭ್ಯರ್ಥಿ ಆಕಾಂಕ್ಷಿಗಳ ಪಟ್ಟಿಯೊಂದನ್ನು ಪಕ್ಷದ ವರಿಷ್ಠರಿಗೆ ಕಳುಹಿಸಲು ನಿರ್ಧರಿಸಲಾಗಿದೆ.

ಈ ಚುನಾವಣೆಗಳಿಗೆ ಪ್ರಮುಖ ನಾಯಕರ ನೇತೃತ್ವದಲ್ಲಿ ತಂಡಗಳನ್ನು ರಚಿಸಿ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಶ್ರಮ ಹಾಕಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ADVERTISEMENT

ನಿರಾಶ್ರಿತ ಪರ ಹೋರಾಟ: ರಾಜ್ಯದ ವಿವಿಧ ಭಾಗಗಳಲ್ಲಿ ಹಲವು ವರ್ಷಗಳಿಂದ ಸರ್ಕಾರದ ಮನೆಗಳಿಗಾಗಿ ಕಾಯುತ್ತಿರುವ ನಿರಾಶ್ರಿತರು ಮತ್ತು ಇತರ ಫಲಾನುಭವಿಗಳನ್ನು ಸಂಘಟಿಸಿ ರಾಜ್ಯ ವ್ಯಾಪಿ ಹೋರಾಟ ಆಯೋಜಿಸಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಕೋಗಿಲು ಘಟನೆಗೆ ಸಂಬಂಧಿಸಿದಂತೆ ಸರ್ಕಾರ ಬಾಂಗ್ಲಾದೇಶಿಯರು ಮತ್ತು ಅನ್ಯರಾಜ್ಯದವರಿಗೆ ಮನೆಗಳನ್ನು ನೀಡಲು ಹೊರಟಿದೆ. ಆದರೆ, ಬೆಂಗಳೂರು ಸೇರಿ ರಾಜ್ಯ ವಿವಿಧೆಡೆ ಮನೆಗಳಿಗೆ ಅರ್ಜಿ ಹಾಕಿ ಕಾದು ಕುಳಿತಿರುವ ಕನ್ನಡಿಗರಿಗೆ ಮನೆಗಳನ್ನು ಕೊಡುತ್ತಿಲ್ಲ. ರಾತ್ರೋರಾತ್ರಿ ಇವರಿಗೆ ಮನೆಗಳನ್ನು ಹಂಚಿಕೆ ಮಾಡಲು ಹೊರಟಿದೆ. ಆದ್ದರಿಂದ, ರಾಜ್ಯ ವ್ಯಾಪಿ ಇರುವ ನಿರಾಶ್ರಿತರು ಮತ್ತು ಮನೆಗಾಗಿ ಕಾದು ಕುಳಿತಿರುವ ಇತರ ಫಲಾನುಭವಿಗಳ ಪರವಾಗಿ ನಿಲ್ಲಬೇಕು. ಅವರಿಗೆ ನ್ಯಾಯ ಕೊಡಿಸಬೇಕು ಮತ್ತು ಈ ವಿಚಾರವಾಗಿ ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಲಾಯಿತು ಎಂದು ಬಿಜೆಪಿ ಮೂಲಗಳು ಹೇಳಿವೆ.

ಬಳ್ಳಾರಿ ಗಲಾಟೆಯ ವಿಚಾರವನ್ನೂ ಚರ್ಚಿಸಲಾಯಿತು. ಕಾಂಗ್ರೆಸ್‌ನ ಶಾಸಕ ಮತ್ತು ಅವರ ಬೆಂಬಲಿಗರು ಗಲಾಟೆ ಎಬ್ಬಿಸಿ, ಜನಾರ್ದನ ರೆಡ್ಡಿ ಮೇಲೆ ದಾಳಿ ನಡೆಸುವುದು ಪೂರ್ವ ನಿಯೋಜಿತವಾಗಿದೆ. ದಾಳಿ ನಡೆಸಲೆಂದೇ ಪೆಟ್ರೋಲ್‌ ಬಾಂಬ್ ತಯಾರಿಸಿಕೊಂಡು ಬಂದಿದ್ದು, ಇದಕ್ಕೆ ಸಾಕ್ಷಿ ಎಂದು ಬಿ.ಶ್ರೀರಾಮುಲು ಹೇಳಿದರು. ಕಾಂಗ್ರೆಸ್‌ ಈ ಹಿಂಸಾತ್ಮಕ ದಾಳಿಯ ವಿರುದ್ಧ ರಾಜ್ಯ ವ್ಯಾಪಿ ಹೋರಾಟ ನಡೆಸಬೇಕು ಎಂಬ ತೀರ್ಮಾನವೂ ಆಯಿತು ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ  ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಆರ್. ಅಶೋಕ, ರಾಜ್ಯ ಸಹ-ಉಸ್ತುವಾರಿ ಸುಧಾಕರ್ ರೆಡ್ಡಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ಸಂಸದ ಗೋವಿಂದ ಕಾರಜೋಳ, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ, ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ,  ನಳಿನ್‍ಕುಮಾರ್ ಕಟೀಲ್, ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಇದ್ದರು.

ಜಿಲ್ಲಾ ಪ್ರವಾಸ ಹೊಸ ಸಂಘಟನಾ ಪರ್ವ: ಡಿವಿಎಸ್‌

ಪಕ್ಷದ ಸಂಘಟನೆ ಬಲಪಡಿಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡುವ ‘ಹೊಸ ಸಂಘಟನಾ ಪರ್ವ’ವನ್ನು ಆರಂಭಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಹೇಳಿದರು.

ಸಂಘಟನೆಗೆ ಚುರುಕು ನೀಡುವ ಉದ್ದೇಶದಿಂದ ಎಲ್ಲ ಜಿಲ್ಲೆಗಳ ಅಧ್ಯಕ್ಷರು ಪದಾಧಿಕಾರಿಗಳು ಸಂಸದರು ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಪ್ರಮುಖ ನಾಯಕರ ಸಭೆಗಳನ್ನು ನಡೆಸಲಾಗುತ್ತಿದೆ. ಈ ಸಭೆ ಇದೇ 13 ರವರೆಗೆ ನಡೆಯಲಿದೆ. ಆ ಬಳಿಕ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಲಾಗುವುದು ಎಂದರು.

‘ಜಿಲ್ಲಾ ಘಟಕಗಳ ಸಭೆ ಬಾಗಲಕೋಟೆಯಿಂದಲೇ ಆರಂಭಿಸಲಾಗಿದೆ. ಅಲ್ಲಿ ಉಪ ಚುನಾವಣೆ ನಡೆಯಲಿದ್ದು ಆ ಕ್ಷೇತ್ರವನ್ನು ನೂರಕ್ಕೆ ನೂರು ಗೆಲ್ಲುವ ವಿಶ್ವಾಸವಿದೆ. ಅದಕ್ಕೆ ತಯಾರಿ ನಡೆಸಲಾಗುತ್ತಿದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.