ADVERTISEMENT

ಬಾಗೇಪಲ್ಲಿಯಲ್ಲಿ ಬಿಜೆಪಿ ಗೆಲ್ಲಿಸಲು ಪ್ರಭಾವಿ ಮುಖಂಡರಿಗೆ ಗಾಳ

ಕೆಂಬಾವುಟದ ನೆಲದಲ್ಲಿ ಕೇಸರಿ ಪತಾಕೆ ಹಾರಿಸಲು ಪ್ರಭಾವಿ ಮುಖಂಡರಿಗೆ ಗಾಳ

ಈರಪ್ಪ ಹಳಕಟ್ಟಿ
Published 5 ಜನವರಿ 2021, 10:36 IST
Last Updated 5 ಜನವರಿ 2021, 10:36 IST
ಸಚಿವ ಡಾ.ಕೆ.ಸುಧಾಕರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಗುಂಜೂರು ಶ್ರೀನಿವಾಸ್‌ ರೆಡ್ಡಿ
ಸಚಿವ ಡಾ.ಕೆ.ಸುಧಾಕರ್ ಅವರನ್ನು ಇತ್ತೀಚೆಗೆ ಭೇಟಿ ಮಾಡಿದ ಗುಂಜೂರು ಶ್ರೀನಿವಾಸ್‌ ರೆಡ್ಡಿ   

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡುವ ಕೆಂಬಾವುಟದ ‘ಹೋರಾಟದ ನೆಲ’ ಎಂದೇ ಪರಿಚಿತವಾಗಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೇಸರಿ ಪತಾಕೆ ಹಾರಿಸಲು ಬಿಜೆಪಿ ರಾಜಕೀಯ ತಂತ್ರಗಾರಿಕೆ ಚುರುಕುಗೊಳಿಸಿದೆ ಎನ್ನಲಾಗಿದೆ.

ಹಿಂದಿನಿಂದಲೂ ಕಾಂಗ್ರೆಸ್‌ ಮತ್ತು ಸಿಪಿಎಂ ನಡುವಿನ ಸೈದ್ಧಾಂತಿಕ ಸಂಘರ್ಷಕ್ಕೆ ‘ಅಖಾಡ’ವಾಗುತ್ತಲೇ ಬಂದಿರುವ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಭವಿಷ್ಯದಲ್ಲಿ ಬಿಜೆಪಿಯನ್ನು ರಾಜಕೀಯ ಹೋರಾಟಕ್ಕೆ ಅಣಿಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ಮುಖಂಡರು ತೆರೆಮರೆಯಲ್ಲಿ ವಿರೋಧಿ ಪಾಳೆಯಗಳ ಮುಖಂಡರಿಗೆ ಗಾಳ ಹಾಕಲು ಹೊರಟಿದ್ದಾರೆ ಎಂದು ತಿಳಿದುಬಂದಿದೆ.

ಆ ನಿಟ್ಟಿನಲ್ಲಿ ಬಿಜೆಪಿಗರು ಶಾಸಕ ಎಸ್‌.ಎನ್.ಸುಬ್ಬಾರೆಡ್ಡಿ ಅವರ ರಾಜಕೀಯ ವಿರೋಧಿಗಳನ್ನು ಒಗ್ಗೂಡಿಸುವ ಕೆಲಸಕ್ಕೆ ನಾಂದಿ ಹಾಡಿದ್ದು, ಅದರ ಮೊದಲ ಚರಣವಾಗಿ ಕಾಂಗ್ರೆಸ್‌ ಮುಖಂಡ ಗುಂಜೂರು ಶ್ರೀನಿವಾಸ್‌ ರೆಡ್ಡಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರನ್ನು ಭೇಟಿ ಮಾಡಿಸಿದ್ದಾರೆ ಎನ್ನುವ ಮಾತು ಸದ್ಯ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ.

ADVERTISEMENT

ಹೊಸ ವರ್ಷದ ಶುಭಾಶಯ ಹೇಳುವ ನೆಪದಲ್ಲಿ ಸುಧಾಕರ್ ಅವರನ್ನು ಭೇಟಿ ಮಾಡಿರುವ ಗುಂಜೂರು ಶ್ರೀನಿವಾಸ್‌ ರೆಡ್ಡಿ ಅವರ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರದಾಡುತ್ತಿದ್ದು, ಆ ಚಿತ್ರದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ಕಾಣಿಸಿಕೊಂಡಿದ್ದು ಸದ್ಯ ಬಾಗೇಪಲ್ಲಿ ರಾಜಕೀಯ ವಲಯದಲ್ಲಿ ವಿವಿಧ ವಿಶ್ಲೇಷಣೆಗಳಿಗೆ ಕಾರಣವಾಗಿದೆ.

ಕಳೆದ 10 ವರ್ಷಗಳ ಹಿಂದೆಸಮಾಜ ಸೇವೆ ಹೆಸರಿನಲ್ಲಿ ಬಾಗೇಪಲ್ಲಿ ತಾಲ್ಲೂಕಿಗೆ ಪದಾರ್ಪಣೆ ಮಾಡಿದ ಶ್ರೀನಿವಾಸ್‌ ರೆಡ್ಡಿ ಅವರು ರಾಜಕೀಯವಾಗಿ ನೆಲೆ ಕಂಡುಕೊಳ್ಳಲು ಹಲವು ಬಗೆಯಲ್ಲಿ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ಹಿಂದೆ ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದ ಇವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಸಿಗದ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಪರಾಭವಗೊಂಡಿದ್ದರು.

ಬಳಿಕ ಕಾಂಗ್ರೆಸ್‌ ಪಾಳೆಯದಲ್ಲಿ ಗುರುತಿಸಿಕೊಂಡರೂ ಶ್ರೀನಿವಾಸ್‌ ರೆಡ್ಡಿ ಅವರಿಗೆ ಶಾಸಕ ಸುಬ್ಬಾರೆಡ್ಡಿ ಅವರಿಗೆ ಅಷ್ಟಕಷ್ಟೇ ಎನ್ನಲಾಗಿದೆ. ಕಾಂಗ್ರೆಸ್‌ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಲಾಭ ಪಡೆಯುವ ನಿಟ್ಟಿನಲ್ಲಿ ಪ್ರಭಾವಿ ಮುಖಂಡರೊಬ್ಬರು ಸದ್ಯ ಹಿಂಬಾಗಿಲ ರಾಜಕೀಯಕ್ಕೆ ಮುನ್ನುಡಿ ಬರೆದಿದ್ದಾರೆ ಎನ್ನಲಾಗಿದೆ.

ನೆಲೆ ಇಲ್ಲದ ಊರಿನಲ್ಲಿ ನೆಲೆಗಾಗಿ ಹೋರಾಟ ನಡೆಸುತ್ತ ಬಂದಿರುವ ಶ್ರೀನಿವಾಸ್‌ ರೆಡ್ಡಿ ಅವರು ಇದೀಗ ಹೊಸ ಕನಸುಗಳೊಂದಿಗೆ ಬಿಜೆಪಿ ಹೊಸ್ತಿಲ ತುಳಿಯುತ್ತಿದ್ದಾರೆ. ಅವರನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಅವರು ಬಿಜೆಪಿಗೆ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಇದನ್ನು ಚಿಕ್ಕನರಸಿಂಹಯ್ಯ ಅಲ್ಲಗಳೆಯುತ್ತಾರೆ.

ಮುಂಬರುವ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್‌ನ ಮತ್ತಷ್ಟು ಮುಖಂಡರನ್ನು ಬಿಜೆಪಿಗೆ ಸೆಳೆಯುವ ಮೂಲಕ ಕಾಂಗ್ರೆಸ್ ಪಾಳೆಯ ದುರ್ಬಲಗೊಳಿಸಿ, ಮುಂಬರುವ ವಿಧಾನಸಭೆ ಚುನಾವಣೆ ಹೊತ್ತಿಗೆ ಗಡಿಭಾಗದಲ್ಲಿ ಕಮಲ ಅರಳಿಸಲು ಕೊಳ ಸಜ್ಜುಗೊಳಿಸುವ ಕಾರ್ಯ ಎಷ್ಟರ ಮಟ್ಟಿಗೆ ಫಲ ನೀಡುತ್ತದೆ ಎನ್ನುವುದು ಕಾಯ್ದು ನೋಡಬೇಕಷ್ಟೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.